ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ಗರಡಿಯಲ್ಲಿ ಸುಮಾರು 13 ಜನರಿಗೆ ಕೋವಿಡ್ -19 ಪಾಸಿಟಿವ್ ವರದಿ ಬಂದಿದ್ದು ಸಹಜವಾಗಿಯೇ ಆತಂಕ ಮನೆ ಮಾಡಿದೆ. ಅದಾಗ್ಯೂ ನಾಯಕ ಎಂಎಸ್ ಧೋನಿ, ಸಿಎಸ್‌ಕೆ ಮಾಲೀಕ ಎನ್ ಶ್ರೀನಿವಾಸನ್‌ಗೆ ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಭರವಸೆ ನೀಡಿದ್ದಾರೆ.
ಕಳೆದ ವಾರ ಬಿಸಿಸಿಐ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ಕೋವಿಡ್ ಪಾಸಿಟಿವ್ ಬಂದ 13 ಜನರಲ್ಲಿ ಇಬ್ಬರು ಆಟಗಾರರು ಕೂಡ ಸೇರಿದ್ದಾರೆ. ಇದೀಗ ಫ್ರಾಂಚೈಸಿ ಕ್ವಾರಂಟೈನ್ ಅವಧಿ ಹೆಚ್ಚಳ ಮಾಡಲು ಯೋಜನೆ ರೂಪಿಸಿದೆ. ಮಾತ್ರವಲ್ಲದೆ ಸಂಪೂರ್ಣ ಗುಣಮುಖರಾಗಿ ನೆಗೆಟಿವ್ ವರದಿ ಬಂದ ಬಳಿಕವೇ ಟ್ರೈನಿಂಗ್ ನಡೆಸಲು ಉದ್ದೇಶಿಸಿದೆ.
ಆದರೆ ಸೆಪ್ಟೆಂಬರ್ 19 ರಂದು ಐಪಿಎಲ್ ಆರಂಭವಾಗುವುದರಿಂದ, ಸದ್ಯ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ನಾಯಕ ಧೋನಿ ಹೇಳಿರುವುದು ಎನ್ ಶ್ರೀನಿವಾಸನ್ ವಿಶ್ವಾಸವನ್ನು ಹೆಚ್ಚಿಸಿದೆ. ಮಾತ್ರವಲ್ಲದೆ ತಂಡದಲ್ಲೂ ಹುಮ್ಮಸ್ಸು ಬಂದಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಎನ್ ಶ್ರೀನಿವಾಸನ್, ನಾನು ಧೋನಿಯೊಂದಿಗೆ ಮಾತನಾಡಿದ್ದು, ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ಹೆಚ್ಚಿದ್ದರೂ ಆತಂಕ ಪಡುವ ಅವಶ್ಯಕತೆಯಿಲ್ಲ. ತಂಡದ ಆಟಗಾರರಿಗೆ ಸುರಕ್ಷಿತವಾಗಿರುವಂತೆ ಈಗಾಗಲೇ ತಿಳಿಸಲಾಗಿದೆ ಎಂದಿದ್ದಾರೆಂದು ಮಾಹಿತಿ ನೀಡಿದರು.
ನನ್ನ ತಂಡಕೊಬ್ಬ ಉತ್ತಮ ನಾಯಕ ಧೋನಿ. ಆತನ ವಿಶ್ವಾಸದ ಮಾತುಗಳು ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಧೋನಿ ನಾಯಕತ್ವದಲ್ಲಿ ನಾಲ್ಕನೇ ಬಾರಿ ಚೆನೈ ಗೆದ್ದು ಬೀಗಲಿದೆ. ಕಳೆದ ಬಾರಿ ಕೇವಲ ಒಂದು ರನ್ ಅಂತರಿಂದ ಮುಂಬೈ ವಿರುದ್ಧ ಸೋಲನ್ನಪ್ಪಬೇಕಾಯಿತು. ಈ ಬಾರಿ ಅಂತ ಯಾವುದೇ ಸಂದರ್ಭ ಬರುವುದಿಲ್ಲ. ಕಪ್ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದರು.