Advertisement
ಆರು ಜನ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಬಿಹಾರ ಮೂಲದ ಕಾರ್ಮಿಕರ ಆಕ್ರೋಶ ಎಲ್ಲೆ ಮೀರಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಕಾರ್ಖಾನೆಯ ಕೆಲವೆಡೆ ಕಲ್ಲು ತೂರಾಟ ನಡೆದಿದೆ. ನಿಯಂತ್ರಿಸಲು ಹೋದ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದೆ. ಈ ವೇಳೆ ಶರಣಪ್ಪ ಎನ್ನುವ ಆರ್.ಪಿ.ಐ ಪೇದೆ ಕಾಲಿಗೆ ಗಾಯವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಲ್ಲದೆ ಕಾರ್ಮಿಕರು ನಡೆಸಿದ ಕಲ್ಲು ತೂರಾಟಕ್ಕೆ ಸರ್ಕಾರಿ ಬಸ್‌ಗೆ ಕಲ್ಲು ತಾಕಿದ್ದು, ಗಾಜು ಪುಡಿಯಾಗಿದೆ. ಕಾರ್ಖಾನೆ ಒಳಗಿರುವ ಬಿಹಾರಿ ಕಾಲೋನಿಯಲ್ಲಿ ಜಮಾಯಿಸಿರುವ ಕಾರ್ಮಿಕರು ಕಾರ್ಖಾನೆ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕಲ್ಲು ತೂರಿದ್ದು, ಕೆಲ ಅಧಿಕಾರಿಗಳು ಪರಾರಿಯಾಗಿದ್ದಾರೆ.
Related Articles
Advertisement
ಒಟ್ಟಾರೆಯಾಗಿ ಸಿಮೆಂಟ್ ಕಾರ್ಖಾನೆ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ರೊಚ್ಚಿಗೆದ್ದ ಸಿಮೆಂಟ್ ಕಾರ್ಖಾನೆಯ ಬಿಹಾರ ಮೂಲದ ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರನ್ನು ಸಾಗಿಸಲು ಪೊಲೀಸರು ಮತ್ತು ಅಧಿಕಾರಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಎಲ್ಲೆಡೆಯೂ ಪೊಲೀಸ್ ಸರ್ಪಗಾವಲು ಏರ್ಪಡಿಸಿದ್ದು, ಬೆನಕನಹಳ್ಳಿಯಿಂದ ಕೋಡ್ಲಾಕ್ಕೆ ಹೋಗುವ ಗ್ರಾಮಸ್ಥರಿಗಾಗಿ ಬೇರೊಂದು ಮಾರ್ಗ ಸೂಚಿಸಿದ್ದು, ಪರಿಸ್ಥಿತಿ ಹತೋಟಿಯಲ್ಲಿಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.’
ಪ್ರಕರಣ ತನಿಖೆಗೆ ಡಿಸಿ ಆದೇಶ ಕಲಬುರಗಿ: ಸಿಮೆಂಟ್ ಉತ್ಪಾದನೆಗೂ ಮುಂಚೆಯೇ ಈಗಾಗಲೇ ಹಲವಾರು ಅವಘಡಗಳು ಸಂಭವಿಸಿದ್ದಲ್ಲದೇ ಗುರುವಾರ ರಾತ್ರಿ ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಕ್ರೇನ್ ಮುರಿದು ಬಿದ್ದು ಆರು ಜನ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿರುವ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ-ಬೆನಕನಹಳ್ಳಿ ಬಳಿ ಇರುವ ಶ್ರೀ ಸಿಮೆಂಟ್ ಕಾರ್ಖಾನೆ ದುರಂತದ ಪ್ರಕರಣವನ್ನು ಜಿಲ್ಲಾಡಳಿತ ತನಿಖೆಗೆ ವಹಿಸಿದೆ. ಕಾರ್ಖಾನೆಯ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷವಹಿಸಿರುವುದು ಹಾಗೂ ಹಲವಾರು ನಿಯಮಗಳನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿದ್ದರಿಂದ ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕೈಗಾರಿಕಾ ಇಲಾಖೆ ಉಪನಿರ್ದೇಶಕರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಶ್ರೀ ಸಿಮೆಂಟ್ ಕಾರ್ಖಾನೆ ಸುರಕ್ಷತಾ ಕ್ರಮಗಳನ್ನು ಅನುಸರಿಸ ದಿರುವ, ಲೋಪದೋಷ ಕುರಿತು ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾನೂನು ಕ್ರಮ ಸೇರಿದಂತೆ ಇತರ ಆಯಾಮಗಳ ನಿಟ್ಟಿನಿಂದ ಸಮಗ್ರ ವರದಿ ನೀಡಲಿದ್ದು, ವರದಿ ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಫ್‌ಐಆರ್: ಶುಕ್ರವಾರ ಬೆಳಗ್ಗೆ ಅವಘಡ ಸಂಭವಿಸಿದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆ ಸುರಕ್ಷಾತಾಧಿಕಾರಿ, ಗುತ್ತಿಗೆ ಕಾರ್ಮಿಕ ಏಜೆನ್ಸಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯಲ್ಲಿ ಎಲ್ಲವೂ ಬಯಲಿಗೆ ಬರಲಿದೆ. ಶ್ರೀ ಸಿಮೆಂಟ್ ಕಾರ್ಖಾನೆ ನಿರ್ವಹಣೆಗಾಗಿ ಭೂಮಿಯನ್ನು 30 ವರ್ಷಗಳ ಕಾಲ ಒಪ್ಪಂದ ಮೇರೆಗೆ ನೀಡಲಾಗಿದೆ. ಆದರೂ ಕೈಗಾರಿಕಾ ನಿಯಮಗಳನ್ನು ಅನುಸರಿಸಿದೆಯೇ ಎನ್ನುವುದರ ಕುರಿತು ಪರಿಶೀಲನೆ ನಡೆಸಲಾಗುವುದು. ಮೃತರ ಕುಟುಂಬಕ್ಕೆ ಕಂಪನಿ ವತಿಯಿಂದಲೇ ತಲಾ 12 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅದೇ ರೀತಿ ಮೃತರ ಪಾರ್ಥಿವ ಶರೀರವನ್ನು ಹೈದ್ರಾಬಾದ ಮೂಲಕ ವಿಮಾನದಲ್ಲಿ ನವದೆಹಲಿಗೆ ತದನಂತರ ಬಿಹಾರದ ಪಾಟ್ನಾ ಹಾಗೂ ಅಲ್ಲಿಂದ ಅವರ ಗ್ರಾಮಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ವೆಚ್ಚವನ್ನು ಕಂಪನಿಯೇ ಭರಿಸಿದೆ ಎಂದು ವಿವರಿಸಿದರು. ಈ ಹಿಂದೆಯೂ ಕಾರ್ಖಾನೆಯಲ್ಲಿ ಸಣ್ಣ ಪುಟ್ಟ ಅವಘಡ ಘಟನೆಗಳನ್ನು ನಡೆದಿರುವುದನ್ನು ಕಾರ್ಮಿಕರು ತಮ್ಮ ಗಮನಕ್ಕೆ ತಂದಿದ್ದಾರೆ. ಈಗ ಕಾರ್ಖಾನೆಯ ನಿರ್ಮಾಣದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಸೇಡಂ ಉಪವಿಭಾಗದ ಸಹಾಯಕ ಆಯುಕ್ತೆ ಸುಶೀಲಾ ಈ ಸಂದರ್ಭದಲ್ಲಿದ್ದರು. ಘೋಷಣಾ ಪತ್ರ: ಮೃತಪಟ್ಟ ಕಾರ್ಮಿಕರ ಕುಟುಂಬ ವರ್ಗಕ್ಕೆ 12 ಲಕ್ಷ ರೂ. ಪರಿಹಾರ ನೀಡುವ ಒಪ್ಪಿಗೆ ಹಾಗೂ ಘೋಷಣಾ ಪತ್ರವನ್ನು ಶ್ರೀ ಸಿಮೆಂಟ್ ಘಟಕದ ಮುಖ್ಯಸ್ಥ ಅರವಿಂದಕುಮಾರ ಪಾಟೀಲ ಜಿಲ್ಲಾಧಿಕಾರಿಗೆ ನೀಡಿದ್ದಾರೆ.