ಬೆಂಗಳೂರು: ಇತ್ತೀಚೆಗೆ ವಾಣಿಜ್ಯ ನಗರಿಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರತಿಷ್ಠಿತ ಮ್ಯಾಗ್ನಿಟ್ಯೂಡ್ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆ ಆಯೋಜಿಸಿದ್ದ “ಮಿಸ್ಟರ್ ಆ್ಯಂಡ್ ಮಿಸ್ ಲಿಟ್ಲ್ ಸೌತ್ ಇಂಡಿಯಾ 2019” ಸ್ಪರ್ಧೆಯ 10ರಿಂದ 14 ವರ್ಷದ ಕೆಟಗರಿಯಲ್ಲಿ ಸಿರಿ ಎಚ್.ಎಸ್ ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಲಿಟ್ಲ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ 6ರಿಂದ 10 ವರ್ಷದೊಳಗಿನ ಕೆಟಗರಿಯಲ್ಲಿ ಸಾನ್ವಿ ಎಚ್.ಎಸ್. ರನ್ನರ್ ಅಪ್ ಆಗಿ ಹೊರಹೊಮ್ಮುವ ಮೂಲಕ ಪ್ರಶಸ್ತಿ ಪಡೆದಿದ್ದಾರೆ.
ಸಿರಿ ಎಚ್.ಎಸ್ (11ವರ್ಷ) ಹಾಗೂ ಸಾನ್ವಿ ಎಚ್.ಎಸ್ (8ವರ್ಷ) ಸುಧೀರ್ ಎಚ್.ಆರ್ ಹಾಗೂ ಸೌಮ್ಯ ಭಟ್ ದಂಪತಿ ಪುತ್ರಿಯರು. ಬಹುಮುಖ ಪ್ರತಿಭೆಯ ಸಹೋದರಿಯರು ಶಿಕ್ಷದ ಜತೆಗೆ ಕರಾಟೆ, ಸಂಗೀತ, ನೃತ್ಯ ಹಾಗೂ ವೀಣಾ ವಾದನ ಅಭ್ಯಸಿಸುತ್ತಿದ್ದಾರೆ.
ಇದೊಂದು ಕೇವಲ ಸೌಂದರ್ಯ ಸ್ಪರ್ಧೆಯಲ್ಲ:
ಮಿಸ್ಟರ್ ಆ್ಯಂಡ್ ಮಿಸ್ ಲಿಟ್ಲ್ ಸೌತ್ ಇಂಡಿಯಾ ಎಂಬುದು ಕೇವಲ ಸೌಂದರ್ಯ ಸ್ಪರ್ಧೆಗೆ ಸೀಮಿವಲ್ಲ. ಇದೊಂದು ಆಲ್ ರೌಂಡರ್ ಶೋ ಆಗಿದೆ. ಇದರಲ್ಲಿ ಆಯ್ಕೆಗಾಗಿ ಎರಡು ಹಂತದ ಪ್ರಕ್ರಿಯೆಗಳಿವೆ. ಬೆಂಗಳೂರು, ಕೊಚಿನ್, ಚೆನ್ನೈ, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳ ಮಕ್ಕಳು ಆಡಿಷನ್ ನಲ್ಲಿ ಭಾಗವಹಿಸಿದ್ದರು. ಇಲ್ಲಿ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ತೋರಿಸಬೇಕು. ಎರಡನೇ ಹಂತದಲ್ಲಿ ಸಾಮಾನ್ಯ ಜ್ಞಾನದ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮ ಸುತ್ತಿನಲ್ಲಿ 35 ಮಂದಿಯನ್ನು ಆಯ್ಕೆ ಮಾಡಲಾಗಿತ್ತು.
ನಂತರ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಹೋಟೆಲ್ ನಲ್ಲಿ ಗ್ರ್ಯಾಂಡ್ ಫಿನಾಲೆ ನಡೆದಿತ್ತು. ಇದರಲ್ಲಿ ಮಕ್ಕಳಿಗೆ ಮೂರು ಕೆಟಗರಿಯಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಭಾಗವಹಿಸಿದ ಎಲ್ಲಾ ಸ್ಪರ್ಧಿಗಳು ಅದ್ಭುತ ಪ್ರದರ್ಶನವನ್ನು ನೀಡಿರುವುದಾಗಿ ಪ್ರಕಟಣೆ ತಿಳಿಸಿದೆ.