ಕೋಟ: ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ. ಸಂಸದ ಬ್ರಿಜೇಶ್ ಚೌಟ ಅವರು ಜು.3ರಂದು ದಿಲ್ಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ಕರಾವಳಿಯ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಪ್ರಸ್ತುತ ಚಾಲನೆಯಲ್ಲಿರುವ ಮಂಗಳೂರು – ಮಡಗಾಂವ್(ಗೋವಾ) ಸೂಪರ್ ಫಾಸ್ಟ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮುಂಬಯಿವರೆಗೆ ವಿಸ್ತರಿಸಬೇಕು. ಈ ರೈಲಿನಲ್ಲಿ ಸ್ಲಿಪರ್ ಕೋಚ್ ವ್ಯವಸ್ಥೆಯನ್ನು ಅಳವಡಿಸಬೇಕು. ಇದರಿಂದ ಕರಾವಳಿ ಭಾಗದಿಂದ ಮುಂಬಯಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈಗಾಗಲೇ ಕಾರ್ಯಾಚರಿಸುತ್ತಿರುವ ಕೊಂಕಣ್ ರೈಲ್ವೆ ವಿಭಾಗವನ್ನು ಭಾರತೀಯ ರೈಲ್ವೆ ಇಲಾಖೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಹೊಸ ಹಳಿಗಳ ನಿರ್ಮಾಣಕ್ಕೆ ಹಾಗೂ ಹೊಸ ರೈಲುಗಳ ಜೋಡಣೆಗೆ ಅನುಕೂಲವಾಗಲಿದೆ. ಮಂಗಳೂರು – ಹಾಸನ ರೈಲ್ವೇ ಮಾರ್ಗದ ಸುಬ್ರಹ್ಮಣ್ಯ ರೋಡ್ – ಸಕಲೇಶಪುರ ಘಾಟಿ ಮಾರ್ಗದಲ್ಲಿ ಡಬಲ್ ಲೈನ್ ಅಳವಡಿಕೆ ಮಾಡುವವರೆಗೂ ಈಗಿರುವ ಹಳಿ ಸಾಮರ್ಥ್ಯವನ್ನು ಹೆಚ್ಚಿಸಬೇಕು.
ಎರ್ನಾಕುಲಂ-ನಿಜಾಮುದ್ದೀನ್ ಹಾಗೂ ತಿರುವನಂತ ಪುರ- ನಿಜಾಮು ದ್ದೀನ್ ವರೆಗೆ ಸಂಚರಿಸುತ್ತಿರುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಉಡುಪಿ ಜಿಲ್ಲೆಯ ಕುಂದಾಪುರದ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು. ಇದರಿಂದಾಗಿ ಈ ರೈಲಿಗಾಗಿ ಉಡುಪಿ ಅಥವಾ ಕಾರವಾರಕ್ಕೆ ತೆರಳುವ ಹೊರೆ ತಪ್ಪಲಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಮತ್ತು ಈ ನಡುವೆ ಇರುವ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಅ ಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.