Advertisement

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

09:28 PM Oct 30, 2024 | Team Udayavani |

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಹೊಸ ಕಾಮಗಾರಿಗಳು, ಮೇಲ್ಸೇತುವೆ ಕಾಮಗಾರಿ, ಅಂಡರ್‌ಪಾಸ್‌ ಹಾಗೂ ಹೆದ್ದಾರಿ ನಿರ್ವಹಣೆ ಇತ್ಯಾದಿಗಳನ್ನು ಶೀಘ್ರ ಕೈಗೊಂಡು ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾ.ಹೆ. ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿ ಜರಗಿದ ಸಭೆಯಲ್ಲಿ ಅವರು ಮಾತನಾಡಿದರು.

ಕಾಮಗಾರಿಗಳಿಗೆ ಅವಶ್ಯವಿರುವ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಭೂ ಮಾಲಕರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಮೊತ್ತವನ್ನು ವಿಳಂಬವಿಲ್ಲದೆ ಒದಗಿಸಿ, ಹೆದ್ದಾರಿ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಸರ್ವಿಸ್‌ ರಸ್ತೆಗೆ ಡಿಪಿಆರ್‌
ಸಂತೆಕಟ್ಟೆಯ ವೆಹಿಕ್ಯೂಲರ್‌ ಓವರ್‌ಪಾಸ್‌ ಕಾಮಗಾರಿಯಲ್ಲಿ ಉಡುಪಿಯಿಂದ ಕುಂದಾಪುರ ಕಡೆ ಹೋಗುವಾಗ ಎಡಭಾಗದ ರಿಟೈನಿಂಗ್‌ ವಾಲ್‌ ಅನ್ನು ನವೆಂಬರ್‌ ಒಳಗೆ ಪೂರ್ಣಗೊಳಿಸಬೇಕು. ಅದರ ಪಕ್ಕದಲ್ಲಿರುವ ಸರ್ವಿಸ್‌ ರಸ್ತೆ ಕಾಮಗಾರಿಗೂ ಕೂಡಲೇ ಯೋಜನಾ ವರದಿ ತಯಾರಿಸಿ, ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದರು.

Advertisement

ರಾ.ಹೆ. 169ಎ ಮಲ್ಪೆಯಿಂದ ಹೆಬ್ರಿವರೆಗಿನ ರಸ್ತೆಯಲ್ಲಿ ಪರ್ಕಳ ಸಮೀಪ ನಿರ್ಮಾಣ ಕಾಮಗಾರಿಗೆ ನ್ಯಾಯಾಲಯದ ಆದೇಶವು ಸರಕಾರದ ಪರವಾಗಿ ಆಗಿದ್ದು, ಭೂ ಮಾಲಕರಿಗೆ ಕೂಡಲೇ ಭೂ ಸ್ವಾಧೀನದ ಪರಿಹಾರದ ಹಣ ನೀಡಿ ಕಾಮಗಾರಿ ಪ್ರಾರಂಭಿಸಬೇಕು. ಪೆರ್ಡೂರಿನ ಶ್ರೀ ಅನಂತೇಶ್ವರ ದೇವಸ್ಥಾನ ಪರಿಸರದ 600 ಮೀ.ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಇದನ್ನು ಬಿಟ್ಟು ಉಳಿದ ಭಾಗದಲ್ಲಿ ಕಾಮಗಾರಿಯನ್ನು ಚುರುಕುಗೊಳಿಸಬೇಕು. ದೇವಸ್ಥಾನ ಹಾಗೂ ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆಯಿದೆ. ಈ ಬಗ್ಗೆ ಎಚ್ಚರ ವಹಿಸಿ ರಸ್ತೆ ಅಭಿವೃದ್ಧಿ ಕಾರ್ಯ ಆಗಬೇಕು ಎಂದು ಹೇಳಿದರು.

ಕರಾವಳಿ ಜಂಕ್ಷನ್‌ನಿಂದ ಮಲ್ಪೆ ಜಂಕ್ಷನ್‌ ವರೆಗಿನ ರಾ.ಹೆ. ನಿರ್ಮಾಣಕ್ಕೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಭೂ ಮಾಲಕರಿಗೆ ಪರಿಹಾರದ ಮೊತ್ತವನ್ನು ನ.10ರೊಳಗೆ ನೀಡಬೇಕು. ರಾ.ಹೆ 66ರ ಹೆಜಮಾಡಿ ಹಾಗೂ ಸಾಸ್ತಾನದ ಟೋಲ್‌ಗೇಟ್‌ ಬಳಿ ರಾತ್ರಿ ವೇಳೆಯಲ್ಲಿ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್‌ ಪ್ರಾರಂಭಿಸಲು ಟೆಂಡರ್‌ ಕರೆಯಬೇಕು. ಟೋಲ್‌ನ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯರ ವಾಹನಗಳಿಗೆ ರಿಯಾಯಿತಿ ನೀಡಬೇಕು ಎಂದರು.

ಕಟಪಾಡಿ ಮತ್ತು ಅಂಬಲಪಾಡಿಯಲ್ಲಿ ಓವರ್‌ ಪಾಸ್‌ ನಿರ್ಮಾಣ ಕಾಮಗಾರಿಗೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮದೊಂದಿಗೆ ಕಾರ್ಯಾರಂಭ ಮಾಡಬೇಕು. ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯ ವೇಗವನ್ನು ಮತ್ತಷ್ಟು ಹೆಚ್ಚಿಸಬೇಕು. ರೈಲ್ವೇ ಇಲಾಖೆ, ರಾ.ಹೆ. ವಿಭಾಗ, ಗುತ್ತಿಗೆದಾರರುಗಳು ಸಮನ್ವಯದೊಂದಿಗೆ ಪರಿಶೀಲನೆ, ಅನುಮತಿ, ರೈಲ್ವೇ ಹಳಿಗಳ ಮೇಲೆ ಗರ್ಡರ್‌ ಕೂರಿಸುವಿಕೆಗೆ ಎಲ್ಲ ಪೂರ್ವ ತಯಾರಿ ಮಾಡಿಕೊಂಡು ನವೆಂಬರ್‌ ತಿಂಗಳ ಅಂತ್ಯದ ಒಳಗಾಗಿ ಮುಗಿಸಲು ಮುಂದಾಗಬೇಕು ಎಂದರು.
.

ಸವಣೂರು-ಬಿರ್ಕನಕಟ್ಟೆ ರಸ್ತೆ ಕಾಮಗಾರಿಯು ಮಳೆಯಿಂದ ನಿಧಾನವಾಗಿದ್ದು, ಮಳೆ ಈಗ ಕಡಿಮೆ ಆಗಿದ್ದರಿಂದ ಕಾಮಗಾರಿ ತ್ವರಿತಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಸರ್ವೀಸ್‌ ರಸ್ತೆ, ತಾತ್ಕಾಲಿಕ ಬಸ್‌ ನಿಲ್ದಾಣ ಸಹಿತ ಅಗತ್ಯವಿರುವ ಪೂರಕ ಕಾಮಗಾರಿ ಕೈಗೊಳ್ಳಬೇಕು ಎಂದರು.

ರಾ.ಹೆ. ಉದ್ದಕ್ಕೂ ಬೀದಿ ದೀಪಗಳ ನಿರ್ವಹಣೆ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಸಾಸ್ತಾನದಿಂದ ಕುಂದಾಪುರದವರೆಗಿನ ರಾ.ಹೆ. ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆಗಿಂದಾಗ್ಗೆ ಮಾಡಬೇಕು ಎಂದರು.

ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕುಮಾರ್‌ ಕೊಡ್ಗಿ, ಜಿಲ್ಲಾಧಿಕಾರಿ ಡಾ|ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಅರುಣ್‌ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಡಿಎಫ್‌ಒ ಗಣಪತಿ, ಸಹಾಯಕ ಕಮಿಷನರ್‌ ಮಹೇಶ್ಚಂದ್ರ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್‌ ಅಜ್ಮಿ, ಗುತ್ತಿಗೆದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next