ಮುಂಬೈ: ಮಧ್ಯಪ್ರದೇಶ ಕ್ರಿಕೆಟಿಗ, ಐಪಿಎಲ್ ಆಟಗಾರ, ಮಧ್ಯಮ ವೇಗದ ಬೌಲರ್ ಆನಂದ್ ರಾಜನ್ ಅವರ ತಂದೆ, ತೀವ್ರವಾಗಿ ಕೋವಿಡ್-19ದಿಂದ ಬಾಧಿಸಲ್ಪಟ್ಟಿರುವ ಇರಾನ್ ನಲ್ಲಿ ಸಿಲುಕಿಕೊಂಡಿದ್ದಾರೆ. ತಂದೆಯನ್ನು ಮರಳಿ ದೇಶಕ್ಕೆ ಕರೆಸಿಕೊಳ್ಳಲು ಸಾಧ್ಯವಾಗದೇ ರಾಜನ್ ಪರದಾಡುತ್ತಿದ್ದಾರೆ.
ನಾನು ಇರಾನ್‌ನಲ್ಲಿರುವ ಭಾರತೀಯ ರಾಯ ಭಾರ ಕಚೇರಿಯನ್ನು ಸಂಪರ್ಕಿಸಿದ್ದೇನೆ. ಅವರು ಎಲ್ಲರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಆದರೆ ಶನಿವಾರದವರೆಗೆ ನೆರವು ಸಿಕ್ಕಿಲ್ಲ ಎಂದು ರಾಜನ್ ಹೇಳಿದ್ದಾರೆ.
ಸದ್ಯ ನಮ್ಮ ತಂದೆ ಇರಾನ್ ರಾಜಧಾನಿ ಟೆಹ್ರಾನ್‌ನಿಂದ 2 ಗಂಟೆ ದೂರದಲ್ಲಿರುವ ಖಾಜ್ವಿನ್‌ನಲ್ಲಿದ್ದಾರೆ. ಇಲ್ಲಿಯವರೆಗೆ ಅವರ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೂ ಕುಟುಂಬದಲ್ಲಿ ಅವರ ಬಗ್ಗೆ ಒಂದು ಗಾಬರಿ ಮನೆ ಮಾಡಿದೆ. ಸದ್ಯ ಇರಾನ್‌ನಿಂದ ಭಾರತಕ್ಕೆ ಇನ್ನೊಂದು ವಾರ ಯಾವುದೇ ವಿಮಾನಗಳಿಲ್ಲ. ಏನು ಮಾಡುವುದೆಂದು ಅರ್ಥವಾಗುತ್ತಿಲ್ಲ. ಅವರು ಮನೆಗೆ ಬಂದು ನಮ್ಮ ಜೊತೆಗೆ ಇದ್ದರೂ ಸಾಕೆಂದು ಆನಂದ್ ಹೇಳಿಕೊಂಡಿದ್ದಾರೆ.
ಕೋವಿಡ್-19 ಗಲಾಟೆ ಶುರುವಾದ ಆರಂಭದಲ್ಲೇ ಇರಾನ್, ಜಪಾನ್, ಚೀನಾದಿಂದ ಭಾರತ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಂಡಿತ್ತು. ಆ ವೇಳೆಯೇ ಆನಂದ್ ರಾಜನ್ ತಂದೆ ಯಾಕೆ ಮರಳಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ತಂದೆ ಎಂಟು ವರ್ಷಗಳಿಂದ ಅದೇ ದೇಶದಲ್ಲಿ ನೌಕರಿ ಮಾಡುತ್ತಿದ್ದರಿಂದ, ಆ ಆತ್ಮವಿಶ್ವಾಸವೇ ಅವರನ್ನು ಅಲ್ಲಿ ಉಳಿದುಕೊಳ್ಳುವಂತೆ ಮಾಡಿತೇ? ಎಂಬ ಪ್ರಶ್ನೆಗಳಿವೆ.
ಆನಂದ್ ರಾಜನ್ ಮಧ್ಯಪ್ರದೇಶ ಪರ 40 ಪ್ರಥಮದರ್ಜೆ ಪಂದ್ಯವಾಡಿದ್ದಾರೆ. ಡೆಕ್ಕನ್ ಚಾರ್ಜರ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಬಾದ್ ಐಪಿಎಲ್ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ.