Advertisement

ಒಂದು ದೇಶ,ಒಂದು ಮಾರುಕಟ್ಟೆ; ಎಪಿಎಂಸಿ ಹಂಗಿನಿಂದ ಅನ್ನದಾತ ಪಾರು

01:18 AM Jun 04, 2020 | Sriram |

ಹೊಸದಿಲ್ಲಿ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿಗಳಲ್ಲಿ ತನ್ನ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಯಾವುದೇ ರೈತ ಇನ್ನು ಹತಾಶನಾಗಬೇಕಿಲ್ಲ. ಹೋದಷ್ಟಕ್ಕೆ ಹೋಗಲಿ ಎಂಬ ಅನಿವಾರ್ಯಕ್ಕೆಸಿಲುಕಿ ತನ್ನ ಬೆಳೆಯನ್ನು ಮಾರಬೇಕಿಲ್ಲ. ದೇಶದ ಯಾವ ಭಾಗದಲ್ಲಿ ತನ್ನ ಬೆಳೆಗೆ ಬೇಡಿಕೆ ಇದೆಯೋ ಅಲ್ಲಿಗೆ ನೇರವಾಗಿ ತನ್ನ ಬೆಳೆಯನ್ನು ಕೊಂಡೊಯ್ದು ಮಾರಾಟ ಮಾಡಬಹುದು!

Advertisement

ರೈತರಿಗೆ ಈ ಮಟ್ಟದ ಸ್ವಾತಂತ್ರ್ಯವೊಂದನ್ನು ನೀಡುವ ಪ್ರಸ್ತಾವನೆಗೆ ಬುಧವಾರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇಟ್ಟ ಮತ್ತೊಂದು ದಿಟ್ಟ ಹೆಜ್ಜೆಯಿದು. ಮೇ 14ರಂದು ಕರ್ನಾಟಕ ಸರಕಾರವೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಮೇ 15ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಕೃಷಿ ಕ್ಷೇತ್ರಕ್ಕೆ ನೀಡಿದ 2 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್‌ ಪ್ರಕಟನೆಯ ವೇಳೆಯಲ್ಲೇ ಈ ವಿಚಾರ ಪ್ರಕಟಿಸಿದ್ದರು.

ರೈತರಿಗೆ ಈ ಸವಲತ್ತು ಕಲ್ಪಿಸುವುದಕ್ಕಾಗಿ, 1955ರ ಅಗತ್ಯ ಸಾಮಗ್ರಿಗಳ ಕಾಯ್ದೆಗೆ ತಿದ್ದುಪಡಿ ತರುವುದಾಗಿಯೂ ಸಚಿವರು ತಿಳಿಸಿದ್ದರು. ಆ ತಿದ್ದುಪಡಿ ಪ್ರಸ್ತಾವನೆಗೆ ಮಂಗಳವಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಒಂದು ರಾಷ್ಟ್ರ , ಒಂದು ಮಾರುಕಟ್ಟೆ
ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಗತ್ಯ ಸಾಮಗ್ರಿಗಳ ಕಾಯ್ದೆ ವ್ಯಾಪ್ತಿಯಿಂದ ಕಾಳುಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿಯನ್ನು ಹೊರಗಿಡಲು ನಿರ್ಧರಿಸಲಾಗಿದೆ ಎಂದರು. ಈ ಬೆಳೆಗಳನ್ನು ಬೆಳೆದ ರೈತರು ರಾಜ್ಯಗಳ ಗಡಿಯ ಹಂಗಿಲ್ಲದೆ ದೇಶದೊಳಗಿನ ಯಾವುದೇ ಪ್ರಾಂತ್ಯಗಳಿಗೆ ಕೊಂಡೊಯ್ದು ಮಾರಾಟ ಮಾಡಬಹುದಾಗಿದೆ. ಸುಮಾರು 50 ವರ್ಷಗಳಿಂದ ರೈತರು ಇಂಥದ್ದೊಂದು ಸ್ವಾತಂತ್ರ್ಯವನ್ನು ಕೇಳುತ್ತಿದ್ದರು ಅದನ್ನು ಈಗ ನೆರವೇರಿಸಲಾಗುತ್ತಿದೆ. ದೇಶವಿನ್ನು ರೈತರ ಪಾಲಿಗೆ “ಒಂದು ರಾಷ್ಟ್ರ, ಒಂದು ಮಾರುಕಟ್ಟೆ’ಯಾಗಿ ಬದಲಾಗಲಿದೆ ಎಂದು ಹೇಳಿದರು.

ಎಪಿಎಂಸಿ ಅಡ್ಡಿಯಾಗುತ್ತಿದ್ದುದು ಹೇಗೆ?
ಅಗತ್ಯ ಸಾಮಗ್ರಿಗಳ ಕಾಯ್ದೆಯಡಿ, ರೈತರು ತಾವು ಬೆಳೆದ ಆಲೂಗಡ್ಡೆ, ಕಾಳುಗಳು, ದ್ವಿದಳ ಧಾನ್ಯಗಳು, ಈರುಳ್ಳಿಯನ್ನು ತಾವಿರುವ ವ್ಯಾಪ್ತಿಯ ಎಪಿಎಂಸಿಯಲ್ಲೇ ಮಾರಾಟ ಮಾಡಬೇಕಿತ್ತು. ಹರಾಜು ಮಾದರಿಯಲ್ಲಿ ಬೆಳೆಗಳಿಗೆ ಬೆಲೆ ನಿಗದಿ ಮಾಡಲಾಗುತ್ತಿತ್ತು. ಲೈಸನ್ಸ್‌ದಾರರ ಮದ್ಯವರ್ತಿಗಳು ಬೆಲೆ ನಿಗದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಇದರಿಂದ ರೈತರು ನಿಗದಿಯ ಬೆಲೆಯ ಬಗ್ಗೆ ತಮಗೆ ಅಸಮಾಧಾನವಿದ್ದರೂ ಒಲ್ಲದ ಮನಸ್ಸಿನಿಂದಲೇ ತಮ್ಮ ಬೆಳೆಗಳನ್ನು ಮಾರಾಟ ಮಾಡಬೇಕಿತ್ತು.

Advertisement

2 ಅಧ್ಯಾದೇಶಗಳಿಗೆ ಒಪ್ಪಿಗೆ
ರೈತರು ಹೊರರಾಜ್ಯಗಳ ಲ್ಲಿಯೂ ತಮ್ಮ ಬೆಳೆ ಮಾರಾಟ ಮಾಡಲು ಅನುಕೂಲ ಕಲ್ಪಿಸುವುದಕ್ಕಾಗಿ, ಕೃಷಿ ಉತ್ಪನ್ನಗಳ ವಾಣಿಜ್ಯ ಮತ್ತು ಮಾರಾಟ 2020 (ಎಫ್ಪಿಟಿಸಿ) ಎಂಬ ಅಧ್ಯಾದೇಶವನ್ನು ಜಾರಿಗೆ ತರಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇದರಿಂದ ಮಾರಾಟಗಾರರ ಜತೆಗೆ ರೈತರು ನೇರವಾಗಿ ಸಂಪರ್ಕ ಸಾಧಿಸಿ ತಮ್ಮ ಬೆಳೆಗಳಿಗೆ ಬೇಕಾದ ಬೆಲೆಯನ್ನು ಇತ್ಯರ್ಥಗೊಳಿಸಬಹುದು.

ಬೆಲೆ ಭರವಸೆ
ರೈತರು ತಮ್ಮ ಬೆಳೆಗಳನ್ನು ಆಹಾರ ಸಂಸ್ಕರಣಕಾರರಿಗೆ, ದೊಡ್ಡ ರಿಟೇಲ್‌ ಮಾರಾಟಗಾರರಿಗೆ ಅಥವಾ ರಫ್ತುದಾರರಿಗೆ ಮಾರುವಾಗ ಯಾವುದೇ ಅನ್ಯಾಯಕ್ಕೆ ಹಾಗೂ ಶೋಷಣೆಗೆ ಒಳಗಾಗಬಾರದೆಂಬ ಉದ್ದೇಶದಿಂದ “ರೈತರ ಉತ್ಪನ್ನಗಳ ಮೇಲಿನ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಅಧ್ಯಾದೇಶ – 2020′ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next