Advertisement
ಜಗ್ಗೇಶ್ ಕೂಡ ಪ್ರೇಕ್ಷಕರ ಈ ನಾಡಿ ಮಿಡಿತವನ್ನು ಅಪ್ಪಿಕೊಂಡು, ಒಪ್ಪಿಕೊಂಡೇ ಬಂದವರು. ಇನ್ನು “ಮಠ’ ಮತ್ತು “ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಅವರ ಬದಲಾದ ಕಾಮಿಡಿ ಶೈಲಿ ಬಹು ಜನಪ್ರಿಯವಾಗಿದ್ದರಿಂದ, ಆನಂತರ ಬಂದ ಜಗ್ಗೇಶ್ ಅಭಿನಯದ ಬಹುತೇಕ ಸಿನಿಮಾಗಳ ನಿರ್ದೇಶಕರು ಅದೇ ಶೈಲಿ, ಪರಂಪರೆಗೆ ಕಿಂಚಿತ್ತೂ ಚ್ಯುತಿಯಾಗದಂತೆ ಮುಂದುವರೆಸಿ ಕೊಂಡು ಹೋಗಿದ್ದಾರೆ.
Related Articles
Advertisement
ಆದರೆ, “ಸ್ಟೋರ್’ನಲ್ಲಿ ಜಗ್ಗೇಶ್ ಅವರ ಮ್ಯಾನರಿಸಂ ಮಾತ್ರ ಖುಷಿಕೊಡುತ್ತದೆ. ಅದರಾಚೆ “ಫಸ್ಟ್‌ನೈಟ್’ ಆಸೆಯ ಹುಡುಗನಿಗೆ “ಗ್ರಹಗತಿ’ ಗಳು ಅಡ್ಡಬಂದಾಗ ಪರದಾಡುವ ಹಲವು ಕಥೆಗಳು ನೆನಪಾಗುತ್ತವೆ. ಇನ್ನು ಅನೇಕ ಕಡೆಗಳಲ್ಲಿ ಬರುವ ಅನಗತ್ಯ ದೃಶ್ಯಗಳು, ಕೆಲ ಪಾತ್ರಗಳು, ಅತಿಯಾದ ಮಾತು.. ಸ್ವಲ್ಪ ಅತಿ ಎನಿಸುವ ಫಸ್ಟನೈಟ್‌ಗೆ ಆಸ್ಪತ್ರೆಯ ವಾರ್ಡ್ ಆದರೂ ಸರಿ ಎಂದು ಹುಡುಕುವ ದೃಶ್ಯಗಳು …. “ರಾಘವೇಂದ್ರ ಸ್ಟೋರ್’ನ ರುಚಿಯನ್ನು ಕೊಂಚ ತಗ್ಗಿಸಿವೆ. ಇನ್ನು ನಿರ್ದೇಶಕರ ಆಶಯದಂತೆ ಜಗ್ಗೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಯವದನನಾಗಿ ಜಗ್ಗೇಶ್ ಹಾವಭಾವ ಎಲ್ಲವೂ ಅಲ್ಲಲ್ಲಿ ನಗುತರಿಸುತ್ತದೆ. ನಾಯಕಿ ಶ್ವೇತಾ ಶ್ರೀವಾತ್ಸವ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ದತ್ತಣ್ಣ, ಚಿತ್ಕಲಾ ಬಿರಾದಾರ್ ಅವರದ್ದು ಎಂದಿನಂತೆ ಲವಲವಿಕೆಯ ಅಭಿನಯ. ಅಚ್ಯುತ ಕುಮಾರ್ ಮತ್ತಿತ್ತರ ಕೆಲ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಅವುಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಒಟ್ಟಾರೆ ಜಗ್ಗೇಶ್ ಪಾತ್ರ, ನಿರೂಪಣೆ ಮತ್ತು ಸಂಭಾಷಣೆಗಳನ್ನು ನೋಡಿದರೆ “ರಾಘವೇಂದ್ರ ಸ್ಟೋರ್’ ಜಗ್ಗೇಶ್ ಅವರ ಹಿಂದಿನ ಸಿನಿಮಾಗಳ ಮುಂದುವರೆದ ಭಾಗ ಎಂದುಕೊಳ್ಳಬಹುದು. ಅಲ್ಲಿಗೆ ನಗುವಿಗೆ ಕೊರತೆಯಿಲ್ಲ ಎಂಬುದು ಸ್ಪಷ್ಟ.
-ಜಿ.ಎಸ್.ಕಾರ್ತಿಕ ಸುಧನ್