ಥ್ರಿಲ್ಲರ್, ಕ್ರೈಂ, ಹಾರರ್ ಇಂತಹದ್ದೇ ಸಿನೆಮಾಗಳನ್ನು ಹೆಚ್ಚಾಗಿ ನೋಡುವವರು, ತಮ್ಮ ಮನವನ್ನು ಸ್ವಲ್ಪ ರಿಫ್ರೆಶ್ ಮಾಡಬೇಕು ಎಂಬ ಆಲೋಚನೆಯಿದ್ದರೆ ಇಂತಹ ಫೀಲ್ ಗುಡ್ ಸಿನೆಮಾಗಳನ್ನು ಆಗಾಗ್ಗೇ ನೋಡಲೇಬೇಕು.
ಸಿಂಪಲ್ ಸುನಿ ಕನ್ನಡದ ನಂಬಿಕಸ್ಥ ನಿರ್ದೇಶಕರಗಳ ಪೈಕಿ ಒಬ್ಬರು. ಹಾಗಾಗಿ ಇವರ ಸಿನೆಮಾ ನೋಡುವಾಗ ಏನೋ ಒಂದು ನಂಬಿಕೆ ಖಂಡಿತ ವೀಕ್ಷಕರಲ್ಲಿರುತ್ತದೆ. ಅದೇ ರೀತಿ ಸಾಮಾನ್ಯವಾಗಿ ನಾವು ನಿರೀಕ್ಷಿಸಿದ್ದಕ್ಕಿಂತಲೂ “ಒಂದು ಸರಳ ಪ್ರೇಮ ಕಥೆ’ ಸಿನೆಮಾ ಉತ್ತಮವಾಗಿ ಮೂಡಿ ಬಂದಿದೆ.
ಈ ಚಿತ್ರದ ಕಥೆ ಕೂಡ ಶೀರ್ಷಿಕೆಯಷ್ಟೇ ಸರಳ, ಆದರೆ ನಿರೂಪಿಸಿರುವ ರೀತಿ ಸ್ವಲ್ಪ ವಿಭಿನ್ನ. ಚಿತ್ರದ ಕ್ಲೈಮ್ಯಾಕ್ಸ್ ಬರೋವಷ್ಟರಲ್ಲಿ ಹೀಗೇ ಆಗಬಹುದು ಎಂದು ಊಹಿಸಬಹುದಾದರೂ ಮನದೊಳಗೆ ಅಚ್ಚಳಿಯದೇ ಉಳಿದುಕೊಂಡು ಬಿಡುತ್ತದೆ ಈ ಚಿತ್ರದ ಕಥಾನಕ.
ತನ್ನ ಹೃದಯದ ಬಡಿತಕ್ಕೆ ಮುಟ್ಟುವಂತಹ ದನಿಯ ಹುಡುಗಿಗಾಗಿ ಹುಡುಕುವ ನಾಯಕ, ತನ್ನಂತೆಯೇ ಸೇವಾ ಮನೋಭಾವವಿರುವ ಹುಡುಗ ಬೇಕೆಂದು ಹುಡುಕುವ ನಾಯಕಿ, ಅಷ್ಟರಲ್ಲಿ ಇಂಟರ್ವಲ್ ಟೈಮಲ್ಲಿ ನಾಯಕನ ಅಜ್ಜಿ ಮಾಡಿದ ತಂತ್ರಕ್ಕೆ ಗೆಸ್ ಮಾಡಲಾಗದ ತಿರುವು.
ಅಲ್ಲಿಂದ ಮತ್ತೆ ಮುಂದುವರಿಯೋ ಹುಡುಕಾಟ, ಚಿತ್ರದ ಅಂತ್ಯದಲ್ಲಿ ಏನು ನಡೆಯಬಹುದು ಅನ್ನುವುದನ್ನು ನೀವೇ ಸಿನೆಮಾ ನೋಡುತ್ತಾ ನೋಡುತ್ತಾ ಊಹಿಸಬಹುದೆಂದು ನಾನು ಭಾವಿಸಿದ್ದೇನೆ.
ಸುನಿ ಅವರ ಚಿತ್ರಗಳಲ್ಲಿ ಮುದ ನೀಡೋ ತಿರುವುಗಳ ಸಂಖ್ಯೆ ಎಂದೆಂದಿಗೂ ಇದ್ದೇ ಇರುತ್ತವೆ. ಆ ತಿರುವುಗಳು ಇಲ್ಲಿಯೂ ಮುಂದುವರಿದಿವೆ. ಇದಕ್ಕೆ ಕಥೆ ರಚಿಸಿದ ಮಳವಳ್ಳಿ ಪ್ರಸನ್ನ ಕೂಡ ಅಭಿನಂದನಾರ್ಹರು.
ಇನ್ನು ಪಾತ್ರಗಳ ಬಗ್ಗೆ ಮಾತನಾಡುವುದಾದರೇ ವಿನಯ್ ರಾಜ್ ಕುಮಾರ್ ಅವರ “ಅತಿಶಯ್’ ಪಾತ್ರ ಯಾವುದೇ ಮಾಸ್ ಇಮೇಜ್‌ನ ಹಂಗಿಲ್ಲದೇ ಮೂಡಿ ಬಂದಿದೆ. ಉತ್ತಮ ಸ್ಕ್ರಿಪ್ಟ್ ಗಳನ್ನು ನಿರಂತರವಾಗಿ ಆಯ್ದುಕೊಳ್ಳುತ್ತಿರುವ ವಿನಯ್ ಅವರಿಗೆ ಇದು ಖಂಡಿತವಾಗಿ ಉತ್ತಮ ಪಾತ್ರವೆನ್ನಬಹುದು. ನಾಯಕಿ “ಸ್ವಾತಿಷ್ಟ ಕೃಷ್ಣನ್’ ಅವರ “ಅನುರಾಗ’ ಪಾತ್ರ ಕೂಡ ಸುಂದರವಾಗಿದ್ದು ಭವಿಷ್ಯದ ಭರವಸೆಯ ನಟಿಯಾಗುವ ಸಾಧ್ಯತೆಗಳನ್ನು ತಾವೇ ಈ ಚಿತ್ರದ ಮೂಲಕ ಸೃಷ್ಟಿಸಿಕೊಂಡಿದ್ದಾರೆ.
ಇನ್ನು ರಾಜೇಶ್ ನಟರಂಗ, ಮಲ್ಲಿಕಾ ಸಿಂಗ್ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಎಲ್ಲಕ್ಕೂ ಪ್ಲಸ್ ಅನಿಸಿದ್ದು ರಾಘವೇಂದ್ರ ರಾಜ್ ಕುಮಾರ್ ಅವರ ಅತಿಥಿ ಪಾತ್ರ. ಅವರು ನಟಿಸಿದ ಪಾತ್ರ ನೀವು ಸಿನೆಮಾದಲ್ಲಿಯೇ ನೋಡಿದರೆ ಚಂದ. ಸಾಧು ಕೋಕಿಲ ಅವರು ನೈಜ ಸಾಧು ಕೋಕಿಲರಾಗಿಯೇ ನಟಿಸಿರುವುದು ನಿಜಕ್ಕೂ ಇಷ್ಟವಾಯಿತು.
ಮ್ಯೂಸಿಕಲ್ ರೋಮ್ ಕಾಮ್ ಆಗಿರುವುದರಿಂದ ಅದ್ಭುತ ಸಂಗೀತ ಸಂಯೋಜನೆಯನ್ನು, ಮಧುರವಾದ ಸಂಗೀತವನ್ನು ವೀರ್‌ಸಮರ್ಥ್ ಅವರು ನೀಡಿದ್ದು, ಈ ಮೂಲಕ ಚಿತ್ರಕ್ಕೆ ಜೀವ ನೀಡಿದ್ದಾರೆ.
ಡಿಜಿಟಲ್ ಯುಗದ ಕೆಲವೊಂದು ಲಾಜಿಕ್ ಅನ್ನು, ಅಜ್ಜಿಯ ಪಾತ್ರ ನಿಭಾಯಿಸಿದವರ ನಟನೆಯನ್ನು, ಅಲ್ಲಲ್ಲಿ ಸೃಷ್ಟಿಯಾಗೋ ಕಥಾಸಕ್ತಿಯ ಗ್ರಾಫ್‌ನ ಡಿಪ್ ಅನ್ನು ಹಾಗೂ ತೂಕವಿಲ್ಲದ ಇತರೇ ಪಾತ್ರವರ್ಗಗಳನ್ನು ಬದಿಗಿಟ್ಟರೆ, ಮನೆಮಂದಿ, ಸ್ನೇಹಿತರು ಅಥವಾ ತಮ್ಮ ಪ್ರೀತಿ ಪಾತ್ರರೊಂದಿಗೆ ಕುಳಿತು ಒಮ್ಮೆಯಾದರೂ ನೋಡಲೇ ಬೇಕಾದ ಚಿತ್ರವಿದು.
-ಅನುರಾಗ್ ಗೌಡ
ಎಸ್‌ಡಿಎಂ, ಉಜಿರೆ