ಬೆಂಗಳೂರು: ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ಜಯಮಹಲ್ ರಸ್ತೆ ವಿಸ್ತರಣೆಯನ್ನು ವಿರೊಧೀಸಿ ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆಯ ಸ್ವಯಂ ಸೇವಕರು ಸೋಮವಾರ ಮರಗಳನ್ನು ಅಪ್ಪಿಕೊಂಡು ಚಳವಳಿ ನಡೆಸಿದರು.
ಮೇಖ್ರೀ ವೃತ್ತದಿಂದ ದಂಡು ರೈಲ್ವೆ ನಿಲ್ದಾಣದವರೆಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಬಿಬಿಎಂಪಿ ರಸ್ತೆ ವಿಸ್ತರಣೆಗೆ ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ನೂರಾರು ಮರಗಳಿಗೆ ಹಾನಿಯಾಗಲಿದೆ ಎಂಬ ಕಾರಣದಿಂದ ಈ ಹಿಂದೆ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ ಸ್ವಯಂ ಸೇವಕರು ಸೋಮವಾರ ದಿಢೀರ್ ಜಯಮಹಲ್ ರಸ್ತೆಗೆ ಭೇಟಿ ನೀಡಿ ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸ್ವಯಂ ಸೇವಕ ಯೋಗೇಶ್, ಪಾಲಿಕೆಯ ವ್ಯಾಪ್ತಿಯಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಂಚಾರ ದಟ್ಟಣೆ ನಿವಾರಣೆಗೆ ರಸ್ತೆ ವಿಸ್ತರಣೆ ಪರಿಹಾರವಲ್ಲ. ಹೀಗಾಗಿ ರಸ್ತೆ ವಿಸ್ತರಣೆಯನ್ನು ಕೈಬಿಟ್ಟು ಪರ್ಯಾಯ ಕ್ರಮಗಳನ್ನು ಕಂಡುಕೊಳ್ಳಲು ಬಿಬಿಎಂಪಿ ಮುಂದಾಗಬೇಕಿದೆ.
ರಸ್ತೆ ಅಗಲೀಕರಣದಿಂದ ನೂರಾರು ಮರಗಳು ನಾಶವಾಗುತ್ತವೆ ಯಾವುದೇ ಕಾರಣಕ್ಕೂ ರಸ್ತೆ ವಿಸ್ತರಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಪಾಲಿಕೆಯ ಉಪ ಸರಣ್ಯ ಸಂರಕ್ಷಣಾಕಾರಿಗಳು ರಸ್ತೆ ವಿಸ್ತರಣೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ.
ಈ ಹಿಂದೆಯೇ ಸುತ್ತಮುತ್ತಲಿನ ಭಾಗದ 13 ಸಾವಿರ ಜನರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ದೇವೆ. ಜತೆಗೆ 13 ಸಾವಿರ ಆಕ್ಷೇಪಣೆಗಳನ್ನು ಪಾಲಿಕೆಗೆ ಸಲ್ಲಿಸಿದ್ದೇವೆ. ಹೀಗಾಗಿ ಮೊದಲು ಆಕ್ಷೇಪಣೆಗಳಿಗೆ ಉತ್ತರಿಸಿದ ನಂತರ ಕಾಮಗಾರಿ ನಡೆಸಲಿ. ಒಂದೊಮ್ಮೆ ಕಾಮಗಾರಿಗೆ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.