Advertisement

ಅರಮನೆ ಮುಂಭಾಗದ ಪಾರಿವಾಳಗಳನ್ನು ಸ್ಥಳಾಂತರಿಸಿ; ಆಯುಕ್ತರಿಗೆ ಬರೆದ ಪತ್ರದಲ್ಲೇನಿದೆ?

04:39 PM Jul 07, 2022 | Team Udayavani |

ಮೈಸೂರು: ಪಾರಿವಾಳಗಳಿಂದ ಮೈಸೂರು ಅರಮನೆ ಸುತ್ತಮುತ್ತ ಇರುವ ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗುತ್ತಿದ್ದು ಅರಮನೆ ಮುಂದೆ ಪ್ರತಿದಿನ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಹಾರಾಡುವ ಪಾರಿವಾಳಗಳನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸ್ಕಾಲ್‌ ಇಂಟರ್‌ ನ್ಯಾಷನಲ್‌ ಅಧ್ಯಕ್ಷ ಬಿ.ಎಸ್‌.ಪ್ರಶಾಂತ್‌ ಮನವಿ ಮಾಡಿದ್ದಾರೆ.

Advertisement

ಮೈಸೂರು ಅರಮನೆ ಮುಂದೆ ಪ್ರತಿದಿನ ಬೆಳಗ್ಗೆ ಸಾವಿರಾರು ಪಾರಿವಾಳಗಳು ಹಾರಾಡುವ ದೃಶ್ಯ ಮನಮೋಹಕವಾಗಿ ಕಾಣುತ್ತದೆ. ಈ ಪಾರಿವಾಳಗಳಿಗೆ ಆಹಾರ ಹಾಕಲು ಪ್ರತಿದಿನ ನೂರಾರು ಜನರು ನಸುಕಿನಲ್ಲೇ ಅರಮನೆಯ ಬಳಿ ಬರುತ್ತಾರೆ. ಪಾರಿವಾಳಗಳನ್ನು ನೋಡಲೆಂದು, ಫೋಟೋ ತೆಗೆಸಿಕೊಳ್ಳಲೆಂದು ಎಷ್ಟೋ ಜನರು ಬರುತ್ತಾರೆ. ಪಾರಿವಾಳಗಳು  ಪಾರಂಪರಿಕ ಕಟ್ಟಡಗಳಿಗೆ ಹಾನಿ ಮಾಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಕೂಡಲೆ ಗಮನಹರಿಸಿ ಈ ಪಾರಿವಾಳಗಳನ್ನು ಸ್ಥಳಾಂತರಿಸುವ ಕೆಲಸ ಮಾಡಬೇಕಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸಾವಿರಾರು ಪಾರಿವಾಳಗಳು ಪ್ರತಿದಿನವೂ ಅರಮನೆ ಹಾಗೂ ಅರಮನೆಯ ಸುತ್ತಮುತ್ತಲಿನ ಪಾರಂಪರಿಕ ಕಟ್ಟಡಗಳ ಮೇಲೆ ಹಿಕ್ಕೆ ಹಾಕುತ್ತವೆ. ಪಾರಿವಾಳಗಳ ಹಿಕ್ಕೆಯಲ್ಲಿ ಆ್ಯಸಿಡ್‌ ಅಂಶವಿದ್ದು, ಇದು ಮನುಷ್ಯನ ಆರೋಗ್ಯಕ್ಕೆ ಮಾತ್ರವಲ್ಲದೆ ಪಾರಂಪರಿಕ ಕಟ್ಟಡಗಳಿಗೂ ಬಹಳ ಮಾರಕ ಎಂಬ ಅಂಶ ವೈಜ್ಞಾನಿಕವಾಗಿ ಸಾಬೀತಾಗಿದೆ.

ನಿರಂತರವಾಗಿ ಪಾರಿವಾಳಗಳು ಕಟ್ಟಡದ ಮೇಲೆ ಹಿಕ್ಕೆ ಹಾಕುತ್ತಿದ್ದರೆ ಅದರಲ್ಲಿರುವ ಆ್ಯಸಿಡ್‌ ಮತ್ತಿತರ ಅಪಾಯಕಾರಿ ರಾಸಾಯನಿಕ ಅಂಶಗಳಿಂದ ಕಟ್ಟಡ ದುರ್ಬಲಗೊಳ್ಳುತ್ತದೆ. ಈ ಪ್ರಕ್ರಿಯೆ ಹಲವು ವರ್ಷಗಳ ಕಾಲ ಮುಂದುವರಿದರೆ ಕೇವಲ ಹಿಕ್ಕೆಗಳಿಂದಲೇ ಕಟ್ಟಡಗಳು ನೆಲಕ್ಕುರುಳುವ ಸಂಭವವನ್ನೂ ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.

ಅರಮನೆ ಸುತ್ತಮುತ್ತಲಿನ ಅನೇಕ ಕಟ್ಟಡಗಳು ಐತಿಹಾಸಿಕ ಪ್ರಾಮುಖ್ಯತೆ ಹೊಂದಿವೆ. ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಇಲ್ಲಿರುವ ಪಾರಿವಾಳಗಳನ್ನು ಸ್ಥಳಾಂತರಗೊಳಿಸಬೇಕು. ಪಾರಿವಾಳಗಳನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ಮಹಾನ ಗರ ಪಾಲಿಕೆ ಆಯುಕ್ತರಿಗೂ ಪತ್ರ ಬರೆಯಲಾಗಿದೆ. ಪಾರಿವಾಳಗಳ ಜೀವಕ್ಕೆ ಹಾನಿ ಮಾಡುವ ಯಾವ ಉದ್ದೇಶವೂ ನಮಗಿಲ್ಲ. ಇದರಿಂದ ಮುಂದೆ ಆಗಬಹುದಾದ ಅಪಾಯವನ್ನು ತಪ್ಪಿಸಬೇಕು
ಎಂಬುದಷ್ಟೇ ನಮ್ಮ ಕಳಕಳಿ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next