Advertisement

ನಮ್ಮನ್ನು ಗೆಲ್ಲಿಸಿದ್ದೇ ಮಾತೆಯರು

01:03 AM Nov 12, 2020 | mahesh |

ಹೊಸದಿಲ್ಲಿ: ಮಹಿಳೆಯರು ದೇಶದ ಮೌನ ಮತದಾರರು. ಅವರು ನಮ್ಮ ತಾಯಿ, ಸಹೋದರಿಯರು. ಅವರನ್ನು ರಕ್ಷಿಸೋದು ಬಿಜೆಪಿ ಮಾತ್ರ. ಅಭಿವೃದ್ಧಿಗೆ ಮತ್ತು ಸಶಕ್ತೀಕರಣಕ್ಕೆ ಅವರು ನೀಡಿದ ಮತಗಳು ಚುನಾವಣೆಯಲ್ಲಿ ನಮ್ಮನ್ನು ಭಾರೀ ಅಂತರದಿಂದ ಗೆಲ್ಲಿಸಿವೆ…
ಹೊಸದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮತದಾರರಿಗೆ “ಸೈಲೆಂಟ್‌ ವೋಟರ್ಸ್‌’ ಎಂದು ಗುಣಗಾನ ಮಾಡಿದ ಬಗೆ ಇದು.

Advertisement

ಕೆಲಸ ಮಾಡಿದರೆ ಬಹುಮಾನ: “ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ, ಎಲ್ಲೆಡೆ ನಾವು ಗೆದ್ದಿದ್ದೇವೆ. ಬಿಹಾರದ ಜಯಭೇರಿ, ಉಪಚುನಾವಣೆಗಳ ಗೆಲುವು 2019ರ ಲೋಕಸಭಾ ಚುನಾವಣೆಯ ವಿಸ್ತರಣೆಯಷ್ಟೇ. ದೇಶಕ್ಕಾಗಿ ನೀವು ದಣಿಯದೆ ದುಡಿದರೆ, ಮತದಾರ ಖಂಡಿತಾ ಬಹುಮಾನ ನೀಡುತ್ತಾನೆ. ಅವರನ್ನು ಮೂರ್ಖರನ್ನಾಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜನತೆಯ ತೀರ್ಪು ಮತ್ತೆ ಇದನ್ನು ಸಾಬೀತು ಮಾಡಿದೆ’ ಎಂದರು.

ಅಭಿವೃದ್ಧಿಗಷ್ಟೇ ಮತ: ಚುನಾವಣೆಯನ್ನು ಗೆಲ್ಲಿಸೋದು ಅಭಿವೃದ್ಧಿಯೊಂದೇ. ಒಳ್ಳೆಯ ರೈಲ್ವೇ, ಉತ್ತಮ ಏರ್‌ಪೋರ್ಟ್‌, ಸೇತುವೆ, ಇಂಟರ್ನೆಟ್‌ ಸಂಪರ್ಕ- ಇವೆಲ್ಲ ಚುನಾವಣ ವಿಚಾರವಲ್ಲ ಎಂದು ಕೆಲವರು ಆಡಿಕೊಂಡಿದ್ದರು. ಆದರೆ ಚುನಾವಣೆ ನಿಂತಿರೋದೇ ಅಭಿವೃದ್ಧಿಯ ಮೇಲೆ. ಈ ಸತ್ಯ ಅರ್ಥ ಮಾಡಿಕೊಳ್ಳದವರಿಗೆ ಜನ ಠೇವಣಿ ಕಳೆದು ಕಳುಹಿಸಿದ್ದಾರೆ ಎಂದು ವಾಗ್ಬಾಣ ಬಿಟ್ಟರು.

ಕಾಂಗ್ರೆಸ್‌ಗೆ ಟೀಕೆ: ಚುನಾವಣೆಯಲ್ಲಿ ಮುಗ್ಗರಿಸಿದ ಕಾಂಗ್ರೆಸನ್ನು ಟೀಕಿಸಿದ ಮೋದಿ, “ರಾಷ್ಟ್ರೀಯ ಪಕ್ಷವೊಂದು ಕುಟುಂಬದ ಪಕ್ಷವಾ ಗಿರೋದು ನಿಜಕ್ಕೂ ದುರದೃಷ್ಟಕರ. ಇಂಥ ಸನ್ನಿವೇಶದಲ್ಲಿ, ನಾವು ಪಕ್ಷದೊಳಗೇ ಇದ್ದುಕೊಂಡು ಬಹಳ ಎಚ್ಚರಿಕೆಯಿಂದ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ ಎಂದು ಕರೆ ನೀಡಿದರು.

ಪ್ರಧಾನಿ ಮಾತುಗಳು
– ಬಿಜೆಪಿಯನ್ನು ಗೆಲ್ಲಿಸಿದ್ದಕ್ಕಾಗಿಯಷ್ಟೇ ನಾನು ದೇಶದ ಜನತೆಗೆ ಧನ್ಯವಾದ ಹೇಳುತ್ತಿಲ್ಲ. ಪ್ರಜಾಪ್ರಭುತ್ವದ ಹಬ್ಬದಲ್ಲಿ ನೀವು ತೋರಿದ ಉತ್ಸಾಹಕ್ಕೆ ನಾನು ಋಣಿ.
– ಸೋಲು- ಗೆಲುವು ಬೇರೆ ವಿಚಾರ. ಆದರೆ ಚುನಾವಣ ಪ್ರಕ್ರಿಯೆ ಎನ್ನುವುದು ಪ್ರತಿ ಭಾರತೀಯನಿಗೂ ಹೆಮ್ಮೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಚುನಾವಣ ಆಯೋಗಕ್ಕೆ ನನ್ನ ಧನ್ಯವಾದ.
– ಜನತಾ ಕರ್ಫ್ಯೂನಿಂದ ಇಲ್ಲಿಯವರೆಗೆ ನಾವು ನಡೆಸಿದ ಹೋರಾಟದ ಪ್ರತಿಫ‌ಲ ಚುನಾವಣೆಯ ಫ‌ಲಿತಾಂಶ ರೂಪದಲ್ಲಿ ಸಿಕ್ಕಿದೆ.
– ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್‌- ಬಿಹಾರ ಚುನಾವಣ ಗೆಲವಿನ ಗುಟ್ಟು ಇದು.
– ಬಡವ, ದಲಿತ, ಹಿಂದುಳಿದ ವರ್ಗದವರನ್ನು ಪ್ರತಿನಿಧಿಸುತ್ತಿರುವ ಏಕೈಕ ರಾಷ್ಟ್ರೀಯ ಪಕ್ಷ, ಬಿಜೆಪಿ.
– ನಗರ- ಹಳ್ಳಿಗಳೆನ್ನದೆ ಮೌನ ಮತದಾರರು ಎಲ್ಲೆಡೆ ನಮ್ಮ ಕೈಹಿಡಿದಿದ್ದಾರೆ.
– 21ನೇ ಶತಮಾನದ ಭಾರತದಲ್ಲಿ ಅಭಿವೃದ್ಧಿಯೊಂದೇ ಚುನಾವಣ ವಿಚಾರ ಎಂಬುದು ಸ್ಪಷ್ಟವಾಗಿದೆ.

Advertisement

ಎನ್‌ಡಿಎಗೆ ಬಹು ಮತ ನೀಡಿದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುವೆ. ಬೆಂಬಲ ನೀಡಿದ ಪ್ರಧಾನಿ ಮೋದಿಯವರಿಗೂ ಧನ್ಯವಾದಗಳು.
ನಿತೀಶ್‌ ಕುಮಾರ್‌, ಬಿಹಾರ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next