ನವದೆಹಲಿ: ದೇಶದಲ್ಲಿ ಸದ್ಯ 576 ಮಾತೃಭಾಷೆಗಳಿಗೆ ಮತ್ತು ಉಪ ಭಾಷೆಗಳಿಗೆ ಸಂಬಂಧಿಸಿದ ಸಮೀಕ್ಷೆ ಮತ್ತು ವಿಡಿಯೋಗ್ರಫಿಯನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಿದೆ.
ಎನ್‌ಐಸಿ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಒಂದು ಪ್ರತ್ಯೇಕ ವಿಭಾಗ ಮಾಡಲಾಗುತ್ತದೆ. ಅದರಲ್ಲಿ ಮಾತೃಭಾಷೆ ಮತ್ತು ಉಪಭಾಷೆಗಳ ಸೊಗಡುಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ವಿಡಿಯೋಗಳನ್ನು ಸಂಗ್ರಹಿಸಿ ಇರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ 2021-22ನೇ ಸಾಲಿನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೂರ್ಣಗೊಂಡಿರುವ ಸಮೀಕ್ಷೆ ಮತ್ತು ವಿಡಿಯೋಗ್ರಫಿಯಲ್ಲಿ ಇರುವ ಮಾಹಿತಿಯನ್ನು ಸಮರ್ಪಕವಾಗಿ ವರ್ಗೀಕರಿಸಿ, ವಿಂಗಡಿಸಲಾಗುತ್ತಿದೆ. ಆರನೇ ಪಂಚ ವಾರ್ಷಿಕ ಯೋಜನೆಯಿಂದ ದೇಶಾದ್ಯಂತ ಮಾತೃಭಾಷೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಮಿಳುನಾಡು, ಉತ್ತರ ಪ್ರದೇಶಕ್ಕೆ ಸಂಬಂಧಿಸಿದಂತೆ ಮಾಹಿತಿ ವರ್ಗೀಕರಣ ಮುಂದುವರಿದಿದೆ. ಜಾರ್ಖಂಡ್‌ನದ್ದು ಮುಕ್ತಾಯವಾಗಿದ್ದು, ಹಿಮಾಚಲ ಪ್ರದೇಶಕ್ಕೆ ಸಂಬಂಧಿಸಿದ ಭಾಷೆಗಳ ಮಾಹಿತಿ ವರ್ಗೀಕರಣ ಶೀಘ್ರವೇ ಮುಕ್ತಾಯವಾಗಲಿದೆ.
ಜನಗಣತಿಗೆ ಪೂರ್ವ ಭಾವಿಯಾಗಿ ಕೆಲವೊಂದು ಅಂಶಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದೂ ಅದು ಹೇಳಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲೆಗಳು, ಉಪ-ಜಿಲ್ಲೆಗಳು, ಗ್ರಾಮ, ಪಟ್ಟಣ ಮತ್ತು ವಾರ್ಡ್‌ಗಳ ಹೊಸ ಮ್ಯಾಪ್ ಅನ್ನು ರಚಿಸುವ ಪ್ರಕ್ರಿಯೆಯೂ ನಡೆದಿದೆ. ಜೂನ್ ಅಂತ್ಯದ ವರೆಗೆ ಪರಿಷ್ಕರಿಸಲಾಗಿರುವ ಗಡಿ ಗುರುತುಗಳನ್ನು ಮ್ಯಾಪ್ ಗಳಲ್ಲಿ ಸೇರಿಸಲಾಗಿದ್ದು, ಒಟ್ಟು 6 ಲಕ್ಷ ಮ್ಯಾಪ್‌ಗಳನ್ನು ಸಿದ್ಧಗೊಳಿಸಲಾಗಿದೆ.