Advertisement
ಮಾತೃಭೂಮಿ, ಮಾತೃಭಾಷೆ ಎಂದರೆ ರೋಮ ರೋಮದಲ್ಲೂ, ರಕ್ತದ ಪ್ರತೀ ಕಣಕಣದಲ್ಲೂ , ಪ್ರತೀ ಉಸಿರಿನಲ್ಲೂ ಅಪಾರವಾದ ಪ್ರೀತಿ, ಗೌರವ, ಭಕ್ತಿ ಮತ್ತು ಹೆಮ್ಮೆ ಸಮ್ಮಿಲನ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ರೀತಿಯ ಒಂದು ಸಂವಹನ ಯಶಸ್ವಿಯಾಗಬೇಕಾದರೆ ಅದು ಮಾತೃಭಾಷೆಯಲ್ಲಿ ಆದಾಗ ಮಾತ್ರ ಸಾಧ್ಯ. ಬೇರೆ ಯಾವುದೇ ಭಾಷೆಯಲ್ಲಿ ಸಂಪೂರ್ಣ ಹಿಡಿತವಿದೆ ಎಂದುಕೊಂಡರೂ ಒಂದಲ್ಲ ಒಂದು ನ್ಯೂನ್ಯತೆ ಕಂಡು ಬರುವ ಸಾಧ್ಯತೆ ಇದೆ. ಹಾಗಂತ ಮಾತೃಭಾಷೆಯಲ್ಲಿ ಸಂವಹನ ನಡೆದರೆ ತಪ್ಪುಗಳು ಆಗುವುದೇ ಇಲ್ಲ ಅಂತ ಹೇಳಲಾಗದು.
Related Articles
Advertisement
ಹೀಗೆ ಮೊಟ್ಟಮೊದಲು ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನು ಆಚರಿಸುವ ಯೋಚನೆಯನ್ನು ಬಾಂಗ್ಲಾದೇಶವು ಹರಿಬಿಟ್ಟಿತ್ತು. 1999ರ ಯುನೆಸ್ಕೋ ಅಧಿವೇಶನದಲ್ಲಿ ಈ ಯೋಚನೆಯನ್ನು ಅನುಮೋದಿಸಲಾಯಿತು. ಅನಂತರದ ವರ್ಷ ಅಂದರೆ 2000ದಲ್ಲಿ ವಿಶ್ವವಿಡೀ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನವನ್ನು ಆಚರಿಸಲಾಯಿತು. ಈ ದಿನವನ್ನು ಪ್ರತೀ ವರ್ಷ ಫೆಬ್ರವರಿ 21ರಂದು ಆಚರಿಸುವ ನಿರ್ಧಾರ ಕೈಗೊಳ್ಳಲಾಯಿತು ಹಾಗೂ ಪ್ರತೀ ವರ್ಷ ಒಂದು ವಿಷಯವನ್ನಿಟ್ಟುಕೊಂಡು ಆಚರಿಸಲಾಯಿತು. ಈ ವರ್ಷದ ವಿಷಯ ಬಹುಭಾಷಾ ಶಿಕ್ಷಣ ಪದ್ಧತಿಯು ಅಂತರ್ ಪೀಳಿಗೆಗಳ ಕಲಿಕೆಯ ಸ್ತಂಭ ಎನ್ನುವುದಾಗಿದೆ. ಬಹುಭಾಷೆಗಳ ಕಲಿಕೆಗೆ ಒತ್ತು ಕೊಟ್ಟು ಒಂದು ಪೀಳಿಗೆಯಿಂದ ಮತ್ತೂಂದು ಪೀಳಿಗೆಗೆ ಹರಿಯುವ ಭಾಷೆ, ಸಂಸ್ಕೃತಿಯನ್ನು ಇಮ್ಮಡಿಗೊಳಿಸಿ ಪೀಳಿಗೆಗಳ ನಡುವಿನ ಸಂಬಂಧವನ್ನು ಬಲಗೊಳಿಸುವುದೇ ಇದರ ಉದ್ದೇಶವಾಗಿದೆ.
ಬಹುಭಾಷಾ ಪದ್ಧತಿ ಮತ್ತು ಬಹುಸಂಸ್ಕೃತಿಯ ಸಮಾಜವು ಉಳಿಯಬೇಕಾದರೆ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯು ಸಂಸ್ಕೃತಿಯ ಜ್ಞಾನವನ್ನು ಹಬ್ಬಿಸುವಲ್ಲಿ ಸಹಕಾರಿಯಾಗಿದೆ. ಇಂದು ಭಾಷಾ ವೈವಿಧ್ಯತೆಗೆ ಕುಂದು ಬಂದಿರುವುದಕ್ಕೆ ಕಾರಣ ಅನೇಕ ಭಾಷೆಗಳು ಕಣ್ಮರೆಯಾಗಿರುವುದಾಗಿದೆ.
ವಿಶ್ವದಾದ್ಯಂತ ಸುಮಾರು ಶೇ. 40 ಪ್ರತಿಶತ ಜನರು ತಮ್ಮ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಬಹುಭಾಷೆಗಳ ಬಗ್ಗೆ ಜಾಗೃತಿ, ಅನ್ವಯ ಮಾಡಿದಾಗ್ಯೂ ಕೂಡ ಈ ರೀತಿಯ ಸಮಸ್ಯೆಗಳು ಸಮಾಜವನ್ನು ಕಾಡುತ್ತಿವೆ.
ಯುನೆಸ್ಕೊ ಮಾತೃಭಾಷೆಯನ್ನು ಉಳಿಸುವ ಹಾಗೂ ಅದರಲ್ಲೇ ಶಿಕ್ಷಣ ಕೊಡಿಸುವುದಕ್ಕಾಗಿ ಹೋರಾಡುವಾಗ ಜನರು ಬೇರೆ ಭಾಷೆಯನ್ನು ಕಲಿತು ಅದರಲ್ಲಿ ಶಿಕ್ಷಣವನ್ನು ಪಡೆದು ತಮ್ಮ ಭಾಷೆಯನ್ನು ಮರೆತು ಬೇರೆ ಭಾಷೆಯಲ್ಲೇ ಮುಂದುವರೆಯುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆಯಲು ಅಥವಾ ಉದ್ಯೋಗ ಅರಸಲು ಅಲ್ಲಿಯ ಭಾಷೆಯನ್ನು ಕಲಿಯಲೇಬೇಕು ಹಾಗಾಗಿ ಜನರು ಬಹುಭಾಷಿಕರಾಗುತ್ತಿದ್ದಾರೆ.
ಮಗು ಶಾಲೆಯನ್ನು ಆರಂಭಿಸುವುದು ಇಂಗ್ಲಿಷ್‌ನಲ್ಲಿ, ಮುಂದುವರೆಯುವುದು ಫ್ರೆಂಚ್‌ನಲ್ಲಿ, ಅನಂತರ ಉದ್ಯೋಗಕ್ಕಾಗಿ ಜರ್ಮನ್ ಭಾಷೆಯನ್ನು ಕಲಿತ ಉದಾಹರಣೆಗಳು ಬಹಳಷ್ಟಿವೆ. ಹಾಗಾದರೆ ಪರಭಾಷೆಯನ್ನು ಕಲಿಯುವುದು ಸೂಕ್ತವಲ್ಲವೇ? ಹಾಗೇನಿಲ್ಲ ಇಂದು ನಾವು ತಾಂತ್ರಿಕ ಯುಗದಲ್ಲಿ ಯಾವ ದೇಶದ ಯಾವ ಮೂಲೆಯಲ್ಲಿದ್ದು ಕೆಲಸ ಮಾಡಬೇಕಾಗುತ್ತದೆಯೋ ಅದೇ ರೀತಿ ಜೀವನ ಮಾಡಬೇಕಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿ ಭಾಷೆಗಳು ಗೊತ್ತಿದ್ದಷ್ಟು ನಾವು ಯಾವುದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಹುದು.
ಆದರೆ ಮಾತೃಭಾಷೆಯನ್ನು ಮಾತ್ರ ಕಡೆಗಣಿಸಬಾರದು. ತಮ್ಮ ಮುಂದಿನ ಪೀಳಿಗೆಗೆ ಈ ಭಾಷೆ, ಸಂಸ್ಕೃತಿಯನ್ನು ಒಪ್ಪಿಸಲೇಬೇಕು. ನಾವೆಲ್ಲ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಹಾಗೆ ವಿದೇಶಗಳಲ್ಲೂ ನಮ್ಮ ಮಾತೃಭಾಷೆ ಕಲಿಸುವ ವ್ಯವಸ್ಥೆಯಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕನ್ನಡಿಗರು ತಮ್ಮ ಹೆಜ್ಜೆಯ ಗುರುತನ್ನು ಮಾಡಿದ್ದಾರೆ. ಅದೇ ರೀತಿ ಕನ್ನಡದ ಕಂಪನ್ನೂ ಪಸರಿಸಿದ್ದಾರೆ. ಸಮಾನ ಮನಸ್ಕರು ಸೇರಿ ಕನ್ನಡ ಶಾಲೆಯನ್ನು ತೆರೆಯುವುದು, ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಲೇಖಕರ ಗುಂಪು, ಕನ್ನಡ ಸಂಘಗಳು, ಕನ್ನಡ ಚಲನಚಿತ್ರಗಳ ಬಿಡುಗಡೆ ಹೀಗೆ ಹತ್ತು ಹಲವಾರು ರೀತಿಯಿಂದ ಕನ್ನಡದಕಂಪು ಎಲ್ಲೆಡೆ ಪಸರುತ್ತಿದೆ.
ನಾವೆಲ್ಲರೂ ಸೇರಿ ನಮ್ಮ ಮಾತೃಭಾಷೆಯನ್ನು ಉಳಿಸೋಣ, ಹಾಗೆಯೇ ಬೆಳೆಸೋಣ. ಪರಭಾಷೆಗಳಿಗೂ ಗೌರವ ಸಲ್ಲಿಸೋಣ. ಆವಶ್ಯಕತೆಯಿದ್ದಲ್ಲಿ ಅವರ ಭಾಷೆಯನ್ನು ನಾವೂ ಕಲಿಯೋಣ ಮತ್ತು ಅವರಿಗೂ ನಮ್ಮ ಭಾಷೆ ಕಲಿಸೋಣ. ಮಾತೃಭಾಷೆಯ ಮಮಕಾರವೆಂದೂ ತಪ್ಪದು. ಹಾಗೆಯೇ ನಮ್ಮಿಂದ ಪರಭಾಷೆಗಳಿಗೂ ಗೌರವ ತಪ್ಪದು. ನಾವೆಲ್ಲ ಸಹೋದರ ಸಹೋದರಿಯರಂತೆ ನಾಡು, ನುಡಿ ,ಸಂಸ್ಕೃತಿಯನ್ನು ಹಬ್ಬಿಸುವಲ್ಲಿ ಹಾಗೂ ಇತರರ ಸಂಸ್ಕೃತಿಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳುವುದರಲ್ಲಿ ನಿಪುಣರಾಗಿದ್ದೇವೆ. ಇನ್ನು ಇದನ್ನೆಲಾ ಮುಂದುವರೆಸುವುದು ಮಾತ್ರ ನಮ್ಮ ಧ್ಯೇಯವಾಗಬೇಕು. ಈ ಅಂತಾರಾಷ್ಟ್ರೀಯ ಮಾತೃಭಾಷೆಯ ದಿನದ ಉದ್ದೇಶದಂತೆ ಹಿಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆ ನಡುವಿನ ಸಂಬಂಧವನ್ನು ಗಟ್ಟಿಗೊಳಿಸೋಣ.