ಬೆಂಗಳೂರು: ಮಾತೃ ಭಾಷೆಯ ಅಭಿಮಾನ ಮೈಗೂಡಿಸಿಕೊಂಡರೆ ಕನ್ನಡ ರಕ್ಷಣೆಗೆ ಕಾವಲುಗಾರರ ಅಗತ್ಯ ಇಲ್ಲ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಡಾ.ಸುಧಾಕರ್ ಎಸ್. ಶೆಟ್ಟಿ ಹೇಳಿದರು.
ತುಳುವೆರೆಂಕುಲು ಬೆಂಗಳೂರು ಸಂಘಟನೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬಲಿಯೇಂದ್ರ ಪರ್ಬ ಹಾಗೂ ಬಲಿಯೇಂದ್ರ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರಿಗೆ ಮಾತೃಭಾಷೆಯ ಮೇಲೆ ಅಭಿಮಾನವಿದ್ದರೆ ಕನ್ನಡ ರಕ್ಷಣೆಗೆ ಬೇರೆ ಕಾವಲಗಾರರ ಅಗತ್ಯ ಇಲ್ಲ. ಅಭಿಮಾನವಿಲ್ಲದಿದ್ದರೆ ಭಾಷೆಗೂ ಉಳಿಗಾಲವಿಲ್ಲ. ತುಳುವರು ಸ್ವತ್ಛ ಕನ್ನಡದ ಮೂಲಕ ಕನ್ನಡ ಭಾಷೆಗೆ ಹೆಚ್ಚಿನ ಗೌರವ ನೀಡುತ್ತಾರೆ ಎಂದು ಹೇಳಿದರು.
ತುಳು ಭವನ ನಿಮಾರ್ಣಕ್ಕೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಸ್ಥಳಾವಕಾಶ ನೀಡಬೇಕು. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಭವನ ನಿರ್ಮಿಸುತ್ತೇವೆ. ಮಂಗಳೂರಿನ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಅಬ್ಬಕ್ಕ ಅವರ ಹೆಸರನ್ನು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಮೋಹನ್ ಆಳ್ವ ಮಾತನಾಡಿ, ತುಳು ಭಾಷಿಕರು ಸ್ವಾಭಿಮಾನದ ಜೀವನಕ್ಕೆ ಮಾದರಿ. ತುಳುಭಾಷೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಠೀರವ ಸ್ಟುಡಿಯೋ ನಿರ್ದೇಶಕ ಕೆ.ಮೋಹನದೇವ ಆಳ್ವ, ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ನಟ ವಿನೋದ್ ರಾಜ್, ತುಳುವೆರೆಂಕುಲು ಬೆಂಗಳೂರು ಅಧ್ಯಕ್ಷ ವಿಜಯಕುಮಾರ್ ಕುಲಶೇಖರ್, ಪ್ರಧಾನ ಕಾರ್ಯದರ್ಶಿ ಪಳ್ಳಿ ವಿಶ್ವನಾಥ ಶೆಟ್ಟಿ ಇತರರು ಹಾಜರಿದ್ದರು. ಹಿರಿಯ ನಟಿ ಲೀಲಾವತಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಮೋಹನ್ ಆಳ್ವ, ಬಿಬಿಎಂಪಿ ಸದಸ್ಯ ಕೆ.ವಿ.ರಾಜೇಂದ್ರ ಕುಮಾರ್ ಅವರಿಗೆ ಬಲಿಯೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ನಟಿ ಸಂತಸ: ಹಿರಿಯ ನಟಿ ಲೀಲಾವತಿ 60ವರ್ಷಗಳ ಬಳಿಕ ತುಳುವಿನಲ್ಲಿ ಭಾಷಣ ಮಾಡಿ ಭಾವುಕರಾದರು. ನಂತರ ಪುತ್ರ ವಿನೋದ್ ಜತೆ ತುಳು ಗೀತೆ ಹಾಡಿ ಸಭಿಕರನ್ನು ರಂಜಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಆರವತ್ತು ವರ್ಷಗಳ ಬಳಿಕ ತುಳು ಭಾಷೆಯಲ್ಲಿ ಮಾತನಾಡುವ ಅವಕಾಶ ಸಿಕಿದ್ದೆ. ಇದೇ ವೇದಿಕೆಯಲ್ಲಿ ಬಲಿಯೇಂದ್ರ ಪ್ರಶಸ್ತಿ ಸಿಕ್ಕಿರುವುದು ನನ್ನ ಪಾಲಿಗೆ ಬಂದ ಭಾಗ್ಯ ಎಂದು ಸಂತಸ ಹಂಚಿಕೊಂಡರು.