Advertisement

ಯಾವ ಶಬರಿಗೆ ಕಡಿಮೆ ಈ ತಾಯಿಯ ತಾಳ್ಮೆ?

11:46 AM Jul 15, 2020 | sudhir |

“ತಾಯಿನೇ ಬೇಡಾ ಅನ್ನೋ ಮಗನನ್ನು ಎಲ್ಲಾದರೂ ನೋಡಿದ್ದೀರಾ ಮೇಡಂ! ಹಿ ಹೇಟ್ಸ್ ಮಿ…’ ಎನ್ನುತ್ತಾ ನನ್ನೆದುರು ಬಿಕ್ಕಿಬಿಕ್ಕಿ
ಅಳಲು ಶುರುವಿಟ್ಟರು ಶಾರದಾ. ಮಗ ಮನೆ ಬಿಟ್ಟು ಹೋಗಿ ಎರಡು ತಿಂಗಳಾಯಿತು. 60 ದಿನ ಕಳೆದರೂ ಆತ ಮಾತಾಡುತ್ತಿಲ್ಲ. ಇವರ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಅವನ ಮೌನ ಇವರನ್ನು ಕೊರೆಯುತ್ತಿದೆ. ಬೆಳೆದ ಮಕ್ಕಳು ತಾಯಿಯ ಜೊತೆ ಯಾಕೆ ಸಂಪರ್ಕ ಕಡಿದುಕೊಳ್ಳುತ್ತಾರೆ ಎಂಬ ಪ್ರಶ್ನೆಗೆ, ಶಾರದಾಗೆ ಉತ್ತರ ಬೇಕಿತ್ತು.

Advertisement

ಮಗನಿಗೆ ನಾಲ್ಕು ವರ್ಷವಿರುವಾಗ ಆತನ ಅಪ್ಪ ಹೊರದೇಶಕ್ಕೆ ಹೋದವರು, ಮತ್ತೆ ವಾಪಸ್‌ ಬಂದೇ ಇಲ್ಲ. ಈಗ ಮಗನಿಗೆ ಇಪ್ಪತ್ತೇಳು ವರ್ಷ. ತಂದೆ ಇರದ ಕೊರಗು ಕಾಡದಂತೆ ಅವನನ್ನು ಪ್ರೀತಿ, ಕಾಳಜಿ, ಮುತುವರ್ಜಿ ಮತ್ತು ವಾತ್ಸಲ್ಯದಿಂದ ಬೆಳೆಸಿದರು. ಅಂಥ ಮಗ, ಏಕಾಏಕಿ ಕಾರಣವಿಲ್ಲದೆ ದೂರವಾದರೆ ತಡೆದುಕೊಳ್ಳಲಾಗುವುದೇ? ಪತಿ ದೂರವಾದಾಗ ಅನುಭವಿಸಿದ್ದ ಅಗಲಿಕೆಯನ್ನೇ, ಈಗ ಮತ್ತೆ ಶಾಂತವಾಗಿ ಸ್ವೀಕರಿಸಲು ಸಾಧ್ಯವೇ? ಇಷ್ಟಾದಮೇಲೂ ಶಾರದಮ್ಮ “ನನ್ನ ಮನಸ್ಸನ್ನು ಗಟ್ಟಿ ಮಾಡಿಸಿ, ಜೀವವಿರುವರೆಗೂ ಚಿಗುರಬೇಕಲ್ಲ’ ಎಂದು ನಕ್ಕರು. ಮೊದಲು, ನಿಮ್ಮಿಂದ ಯಾವ ತಪ್ಪೂ
ನಡೆದಿಲ್ಲ ಎಂದು ಶಾರದಾರಿಗೆ ಮನವರಿಕೆ ಮಾಡಿಸಿದೆ. ನಂತರ, ಆಗಿರುವ ವಿಚಾರದ ಕುರಿತು ಸಂಬಂಧಿಕರ ಬಳಿ ಚರ್ಚೆ
ಮಾಡದಿರುವಂತೆ ಸೂಚಿಸಿದೆ.

ಮೂರನೆಯದಾಗಿ, ಪ್ರಕೃತಿ ಸೌಂದರ್ಯವಿರುವ ಚಿತ್ರಗಳನ್ನು ದಿನಾ ಬೆಳಗ್ಗೆ ಮಗನಿಗೆ ವಾಟ್ಸಾಪ್‌ ಮೆಸೇಜು ಕಳಿಸುವಂತೆ
ಸಲಹೆ ಕೊಟ್ಟೆ. ಆದರೆ, ಜೊತೆಗೆ ಯಾವುದೇ ಲಿಖೀತ ಸಂದೇಶ ಇರಬಾರದು. ಭಾವುಕರಾಗದೆ, ಮಗನೊಡನೆ ಸಂಪರ್ಕ
ಇರಿಸಿಕೊಳ್ಳುವುದು ನನ್ನ ಸಲಹೆಯ ಉದ್ದೇಶವಾಗಿತ್ತು. ಮಗ ಉತ್ತರ ಕೊಡದಿದ್ದರೂ, ಸಂಬಂಧದ ಕೊಂಡಿ ಕಳಚಬಾರದು. ಅವನು, ದಿನವೂ ಇವರು ಕಳಿಸಿದ ತಕ್ಷಣವೇ ಮೆಸೇಜು ನೋಡುತ್ತಿದ್ದ. ತಂತ್ರಜ್ಞಾನ ಇಬ್ಬರ ಸಂಬಂಧವನ್ನು ಸದ್ದಿಲ್ಲದೆ
ಬೆಸೆಯುತ್ತಿತ್ತು.

***
ಎರಡೂವರೆ ವರ್ಷದ ಬಳಿಕ, ಒಂದು ದಿನ ಮಗನೇ ದೂರವಾಣಿ ಕರೆ ಮಾಡಿ, ಅತ್ಯಂತ ಸಹಜವಾಗಿ ಮಾತನಾಡಿದ. ತಾನು
ಮದುವೆಯಾಗಿರುವ ವಿಷಯವನ್ನೂ ತಿಳಿಸಿದ. ಮೊಮ್ಮಗುವಿನ ತೊಟ್ಟಿಲ ಸಂಭ್ರಮಕ್ಕೆ ತಪ್ಪದೇ ಬರಬೇಕೆಂದು ಆಹ್ವಾನಿಸಿದ. ಎಲ್ಲಾ ವಿಷಯ ತಿಳಿದು ಅಪಾರ ದುಃಖವಾದರೂ, ಈಕೆ ಸಂಯಮ ಕಳೆದುಕೊಳ್ಳದೆ ಮಾತನಾಡಿದರು. ತನ್ನ ನೋವು ಮಗನಿಗೆ
ಕಾಣಿಸಬಾರದು ಅಂತ ಮಾತಿನಲ್ಲಿ ಖುಷಿ ಸೂಸಿದರು. ತಾಯಿಯ ಕಣ್ಣೀರು ಅರ್ಥವಾಗುವುದಾಗಿದ್ದರೆ, ಮಗ ನೋಯಿಸುತ್ತಿರಲಿಲ್ಲ ಅಲ್ಲವೇ?  ಕಳೆದುಹೋದವರು ಸಿಕ್ಕಾಗ ವೃಥಾ ಪ್ರಶ್ನಿಸುವುದು ಮೂರ್ಖತನ. ಹಿಂದೆ ನಡೆದುದರ ಕುರಿತು ಚರ್ಚೆ ಮಾಡಬಾರದು.

ಜೀವನದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಮೊಮ್ಮಗನ ತೊಟ್ಟಿಲ ಶಾಸ್ತ್ರಕ್ಕೆ ಉಡುಗೊರೆ ತೆಗೆದುಕೊಂಡು ಹೊರಟರು ಶಾರದಾ. ಸೊಸೆ ಆತ್ಮೀಯವಾಗಿ ಕಂಡಳಂತೆ. ಇವರೂ ಮಗನನ್ನು ಅಷ್ಟೇ ಗೌರವದಿಂದ ನಡೆಸಿಕೊಂಡು, ತಿಂಗಳಾದ ಮೇಲೆ ವಾಪಸ್‌ ಬಂದರು.

Advertisement

ಹೊರಡುವಾಗ, ಮಗ ಇವರ ಮಡಿಲಿನಲ್ಲಿ ಮಲಗಿ, ಅತ್ತು ಕರಗಿದನಂತೆ. ತನಗೆ ಮಗು ಹುಟ್ಟಿದ ಮೇಲೆ, ತಾಯಿಯ ಮಮತೆ
ಅವನಿಗೆ ಅರ್ಥವಾಯಿತೇನೋ! ಸಾರವಿಲ್ಲದ, ಸರಸವಿಲ್ಲದ ಸಂಸಾರದ ಸಾರಥಿಯಾಗಿ ಸತ್ಯದರ್ಶನ ಪಡೆದ ದಾರ್ಶನಿಕರಾಗಿ ಕಂಡರು ಶಾರದಾ. ಮನೆ ತೊರೆಯದೆ, ಕಾವಿ ಉಡದೆ, ಮಠ ಕಟ್ಟದೆ, ಅನುಯಾಯಿಗಳ ಹಂಗಿಲ್ಲದೆ, ಜಗದ ಹೇಸಿಗೆಯ ಬಾಚಿದ ಸಾಧ್ವಿಗೆ ನನ್ನ ಸಲಾಮ್!

ಶಾರದೆಯಂಥವರನ್ನು ಸ್ತ್ರೀ ಎಂದರೆ ಅಷ್ಟೇ ಸಾಕೆ?

– ಡಾ. ಶುಭಾ ಮಧುಸೂದನ್,‌ ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next