ನನಗೆ ಅಂದು ಅಮ್ಮನನ್ನು ನೋಡಿ ಪಾಪ ಅಂತನ್ನಿಸಿತ್ತು. ತಾಯಿ- ಮಕ್ಕಳ ವಿಷಯದಲ್ಲಿ ಎಷ್ಟು ಮುಗ್ಧವಾಗಿ ಯೋಚಿಸುತ್ತಾಳೆ. ನನಗೆ ಲೇಟ್ ಅಗಿದೆ ಎಂದು ಅರಿತು, ಅವಳ ಕೆಲಸವನ್ನು ಬಿಟ್ಟು ನನಗಾಗಿ ಗೇಟ್ ತೆರೆಯಲು ಓಡಿಬಂದಳು…
ನಾನು ಪ್ರತಿದಿನ ಬೆಳಗ್ಗೆ ಏಳುವುದು ತಡವಾಗುತ್ತದೆ. “ಕಾಲೇಜಿಗೆ ಹೋಗೋಕೆ ಇದ್ರೂನೂ, ಬೇಗ ಏಳ್ಳೋಕ್ಕಾಗಲ್ಲ’ ಎನ್ನುವ ಬೈಗುಳ ಮನೆಯ ಯಾವುದಾದರೂ ಒಂದು ದಿಕ್ಕಿನಿಂದ ಕೇಳಿಯೇ ಕೇಳಿಸುತ್ತದೆ. ಅದೊಂದು ದಿನ ಕ್ಲಾಸ್‌ಗೆ ಹೋಗುವುದು ತಡವಾಯಿತು. ಅಮ್ಮ ನನ್ನ ಹಿಂದೆಂದೆಯೇ ಓಡಿಬಂದಳು. “ಅಮ್ಮ ನೀನೇಕೆ ಬಂದೆ ನನ್ನ ಹಿಂದೆ?’ ಅಂತ ಕೇಳಿದೆ. “ನಿನಗೆ ತಡವಾಗಿದೆಯಲ್ಲಾ… ಅದಕ್ಕೆ ನೀನು ಗಾಡಿ ತೆಗೆದುಕೊಂಡು ಬರುವಷ್ಟರಲ್ಲಿ ನಾನು ಗೇಟ್ ತೆಗೆಯಲು ಬಂದೆ’ ಎಂದು ಹೇಳಿದಳು. ನನ್ನ ಕಣ್ಣಂಚಲ್ಲಿ ನೀರು ಜಿನುಗಿತು. “ಅಮ್ಮಾ, ನೀನು ನನ್ನ ಸೇವಕಿಯಲ್ಲ. ಇನ್ನು ಮೇಲೆ ಈ ರೀತಿ ಮಾಡಬೇಡ’ ಎಂದು ಅಲ್ಲಿಂದ ಹೊರಟಿದ್ದೆ.
ನನಗೆ ಅಂದು ಅಮ್ಮನನ್ನು ನೋಡಿ ಪಾಪ ಅಂತನ್ನಿಸಿತ್ತು. ತಾಯಿ- ಮಕ್ಕಳ ವಿಷಯದಲ್ಲಿ ಎಷ್ಟು ಮುಗ್ಧವಾಗಿ ಯೋಚಿಸುತ್ತಾಳೆ. ನನಗೆ ಲೇಟ್ ಅಗಿದೆ ಎಂದು ಅರಿತು, ಅವಳ ಕೆಲಸವನ್ನು ಬಿಟ್ಟು ನನಗಾಗಿ ಗೇಟ್ ತೆರೆಯಲು ಓಡಿಬಂದಳು. ಏನೂ ಅರಿಯದ ಚಿಕ್ಕ ಮಗುವಿನ ಭಾವ ಅವಳಲ್ಲಿ ಕಾಣಿಸುತ್ತಿತ್ತು. ತಾಯಿಯಂದಿರ ಪ್ರಪಂಚವೇ ಗಂಡ, ಮಕ್ಕಳು. ಇವೇ ಅವಳಿಗೆ ಗೊತ್ತಿರುವುದು. ಅಲ್ಲಿಂದ ಅವಳಿಗೆ ಹೊರ ಬರುವ ಅವಕಾಶ ಸಿಕ್ಕರೂ, ಅವಳಿಗೆ ಅದರಲ್ಲೇ ಸಂತಸ, ತೃಪ್ತಿ. ಅವಳ ವಾತ್ಸಲ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. “ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿ ಇಲ್ಲ’ ಎಂಬ ಗಾದೆಯೇ ಅವಳ ಪ್ರೀತಿಯ ಉತ್ತುಂಗತೆಯನ್ನು ತೋರಿಸುತ್ತೆ. ಅವಳು ಮಕ್ಕಳಿಗೆ ಜೀವಂತ ದೇವತೆ. ಮಕ್ಕಳನ್ನು ಹೆತ್ತು- ಹೊತ್ತು ಒಳ್ಳೆಯ ಭವಿಷ್ಯವನ್ನ ನಿರ್ಮಿಸುತ್ತಾಳೆ. ಇದು ಯಾವ ಕಾಲಕ್ಕೂ ಯಾರಿಂದಲೂ ಬದಲಾಯಿಸಲು ಸಾಧ್ಯವೇ ಇಲ್ಲ.
ಒಬ್ಬಳು ಹೆಣ್ಣು, ತಾಯಿಯಾದಾಗ ಅವಳಲ್ಲಿನ ಆಸೆಗಳು ಬತ್ತಿ ಹೋಗುತ್ತವೆ ಎಂದು ಅನಿಸುತ್ತೆ. ಮಗು ಹುಟ್ಟಿದಾಗ ಹೆಣ್ಣು ತಾಯಿಯಾಗಿ ತನಗೆ ತಾನೇ ಜನ್ಮ ನೀಡಿಕೊಳ್ಳುತ್ತಾಳೆ. ತಾಯಿಯ ನಿಸ್ವಾರ್ಥ ಸಂವೇದನೆ ಅವಳ ಅಂತಃಕರಣವನ್ನು ಆವರಿಸುತ್ತದೆ. ಅಮ್ಮನ ಹತ್ತಿರ, “ನಿನಗೆ ನಿನ್ನದೇ ಆದ ಆಸೆಗಳಿಲ್ಲವಾ?’ ಎಂದು ಕೇಳಿದರೆ, “ನಿಮ್ಮೆಲ್ಲರ ಆಸೆನೇ ನನ್ನಾಸೆ. ನೀವೆಲ್ಲಾ ಚೆನ್ನಾಗಿದ್ದರೆ ಸಾಕು’ ಎನ್ನುತ್ತಾಳೆ. ಬಹುಶಃ ಅಮ್ಮಂದಿರೇ ಹಾಗೆ. ಮಕ್ಕಳಿಗಾಗಿ ತಮ್ಮ ಆಸೆಗಳೆಲ್ಲವನ್ನೂ ಕೈ ಬಿಡುತ್ತಾರೆ. ತನ್ನ ಸ್ವಾರ್ಥಗಳನ್ನು ಅಡಗಿಸಿಕೊಂಡು ಮಕ್ಕಳಿಗೆ ತನ್ನ ಜೀವನವನ್ನು ಮೀಸಲಿಡುತ್ತಾಳೆ. ನಿಸ್ವಾರ್ಥದ ಭಾವಗಳು ಅವಳಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ತುಂಬು ಮನಸ್ಸಿನಿಂದ ಒಬ್ಬ ಮಾರ್ಗದರ್ಶಕಿಯಾಗಿ, ಹತ್ತಿರದ ಗೆಳತಿಯಾಗಿ ಮಕ್ಕಳಲ್ಲಿ ಪ್ರೀತಿ, ಸ್ನೇಹದ ಮಧುರ ಭಾವನೆಗಳನ್ನು ಮಕ್ಕಳ ಮನದಲ್ಲಿ ತುಂಬುತ್ತಾ ಇರುತ್ತಾಳೆ. ಮಕ್ಕಳ ಪ್ರಪಂಚದಲ್ಲಿ ತನ್ನನ್ನೇ ತಾನು ಮರೆಯುತ್ತಾಳೆ. ನಿಸ್ವಾರ್ಥಿಯಾಗಿ ದೇವರಲ್ಲಿ “ನನಗೆ ಎನಾದರೂ ಪರವಾಗಿಲ್ಲ, ನನ್ನ ಮಕ್ಕಳನ್ನ ಚೆನ್ನಾಗಿ ಇಡು’ ಎಂದು ಪ್ರಾರ್ಥಿಸುತ್ತಿರುತ್ತಾಳೆ. ಅವಳ ಯೋಚನೆ ಹಾಗೂ ಯೋಜನೆಗಳು ತನ್ನ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದರಲ್ಲೇ ಕೂಡಿಕೊಂಡಿರುತ್ತದೆ. ಅವಳು ಸದಾ ಮಕ್ಕಳ ಒಳಿತಿಗಾಗಿಯೇ ಯೋಚಿಸುತ್ತಿರುತ್ತಾಳೆ. ಒಟ್ಟಿನಲ್ಲಿ ಅವಳ ಜಗತ್ತು ಮಾಯವಾಗಿ ಕೇವಲ ಮಕ್ಕಳೇ ಅವಳ ಪ್ರಪಂಚವಾಗಿ ಬಿಡುತ್ತದೆ.
ಆದರೆ, ಇಂದು ಮಕ್ಕಳು ಬೆಳೆದು ಅವರವರ ಲೋಕದಲ್ಲಿ ಜೀವಿಸುತ್ತಾ ಹೋಗುತ್ತಾ ಇದ್ದಾರೆ. ಅವರಿಗೆ ಅವರ ಶಿಕ್ಷಣ, ಕೆಲಸಗಳೇ ಮುಖ್ಯವಾಗಿ ಹೋಗಿವೆ. ಇಂದು ಎಷ್ಟೋ ತಾಯಿಯಂದಿರಿಗೆ ಮಕ್ಕಳಿದ್ದರೂ ವೃದ್ಧಾಶ್ರಮಗಳಲ್ಲಿ ಉಂಡು- ಮಲಗುವ ದುಃಸ್ಥಿತಿ ಒದಗಿಬಂದಿದೆ. ತಾಯಿಯ ಅಂತ್ಯಸಂಸ್ಕಾರಕ್ಕೂ ಬರದ ಮಕ್ಕಳೂ ಅಲ್ಲಲ್ಲಿ ಕಾಣಸಿಗುತ್ತಾರೆ. ಮಕ್ಕಳೇ ತನ್ನ ಜಗತ್ತು ಎನ್ನುತ್ತಾ ಬದುಕಿದ ತಾಯಿಗೆ ಕೊನೆಗೆ ಮಕ್ಕಳು ಇದ್ದೂ ಇಲ್ಲದಾಗುತ್ತದೆ. ತಾಯಿ ಭೂಮಿಯಂತೆ. ಮಕ್ಕಳು ಏನೇ ಮಾಡಿದರೂ ಅವಳ ಅಂತಃಕರಣದಲ್ಲಿ ಕ್ಷಮೆ ಅನ್ನುವುದು ಇದ್ದೇ ಇರುತ್ತದೆ. ಮಕ್ಕಳು ಗೊತ್ತಿದ್ದೂ ಮಾಡುವ ಪ್ರಮಾದಗಳನ್ನು ಕೂಡ ಕ್ಷಮಿಸಿ, “ಅವರ ಬದುಕು ಚೆನ್ನಾಗಿರಲಿ’ ಎಂದು ಆಶೀರ್ವಾದ ಮಾಡಿಯೇ ನಮ್ಮನ್ನಗಲುತ್ತಾಳೆ. ಜೀವನದಲ್ಲಿ ತಾಯಿಯನ್ನು ನಿರ್ಲಕ್ಷಿಸಿ ನಮ್ಮ ಕೆಲಸ, ಗೌರವ, ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟರೆ ಕೊನೆಗಾಲದಲ್ಲಾದರೂ ಆ ಪಾಪಪ್ರಜ್ಞೆ ನಮಗೆ ಅಪರಾಧ ಮಾಡಿದಂತೆ ಕಾಡುತ್ತದೆ. ಅಂಥ ತಪ್ಪುಗಳನ್ನು ಎಂದಿಗೂ ಮಾಡದೇ ಇರೋಣ. ತಾಯಿಗಾಗಿ ನಮ್ಮ ಜೀವನದ ಸ್ವಲ್ಪ ಸಮಯವನ್ನಾದರೂ ಸಂತೋಷದಿಂದ ಅವಳ ಜೊತೆ ಕಳೆಯೋಣ.
ಪುಷ್ಪಾವತಿ, ಹುಬ್ಬಳ್ಳಿ