ಕಾಸರಗೋಡು: ನೂರಾರು ಮಂದಿಯನ್ನು ಬಲಿ ತೆಗೆದುಕೊಂಡ ಮಾರಕ ಎಂಡೋಸಲ್ಫಾನ್ ದುರಂತದ ಪ್ರತೀಕವಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಕಾರ್ಯಾಲಯದ ಮುಂಭಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ ತಾಯಿ-ಮಗುವಿನ ಶಿಲ್ಪ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ.
ವಿವಿಧ ಕಾರಣಗಳಿಗೆ ಮೊಟಕುಗೊಂಡಿದ್ದ ಶಿಲ್ಪ ರಚನೆಯನ್ನು ಮತ್ತೆ ಕೈಗೆತ್ತಿಕೊಂಡಿದ್ದು ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಖ್ಯಾತ ಶಿಲ್ಪಿ ಕಾನಾಯಿ ಕುಂಞಿರಾಮನ್ ಅವರು ತಾಯಿ-ಮಗುವಿನ ಶಿಲ್ಪವನ್ನು ನಿರ್ಮಿಸುತ್ತಿದ್ದಾರೆ. ಕಾನಾಯಿ ಅವರ ನೇತೃತ್ವದಲ್ಲಿ ಶಿಲ್ಪ ನಿರ್ಮಾಣ ಕಾರ್ಯ ಆರಂಭವಾಗಿದೆ. 40 ಅಡಿ ಎತ್ತರದ ಶಿಲ್ಪವನ್ನು ತಯಾರಿಸುವ ಪೂರಕ ಕೆಲಸಕ್ಕಾಗಿ ನಾಗರಕೋವಿಲ್‌ನಿಂದ ಆರು ಜನ ಕಾರ್ಮಿಕರ ತಂಡವೂ ಇದೆ.
2006 ರಲ್ಲಿ ಎಂ. ವಿ. ಬಾಲಕೃಷ್ಣನ್ ಅವರು ಜಿ. ಪಂ. ಅಧ್ಯಕ್ಷರಾಗಿದ್ದಾಗ ಕಾನಾಯಿ ಕುಂಞಿರಾಮನ್ ಅವರು 20 ಲಕ್ಷ ರೂ. ಮಂಜೂರು ಮಾಡಿ ಎಂಡೋಸಲ್ಫಾನ್ ದುರಂತದ ಪ್ರತೀಕವಾಗಿ ಶಿಲ್ಪ ನಿರ್ಮಿಸಲು ಆಲೋಚನೆ ಹಂಚಿಕೊಂಡಿದ್ದರು. ಅನಂತರ ಜಿಲ್ಲಾ ಯೋಜನಾ ಸಮಿತಿ ಅನುಮೋದನೆ ನೀಡಿತ್ತು. ಜಿ. ಪಂ. ಬದಲಾವಣೆಯಿಂದ ಶಿಲ್ಪ ನಿರ್ಮಾಣವು ನಿಂತು ಹೋಗಿತ್ತು. ಅನಂತರ 2019ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ಆದರೆ ಕೋವಿಡ್ ಮತ್ತು ಲಾಕ್‌ಡೌನ್‌ನಲ್ಲಿ ಸಿಲುಕಿ ಅರ್ಧಕ್ಕೆ ನಿಂತಿತ್ತು. ಈಗ ನಿರ್ಮಾಣ ಕಾಮಗಾರಿ ಪುನರಾರಂಭಿಸಲಾಗಿದೆ. ತಾಯಿ – ಮಗುವಿನ ಶಿಲ್ಪ ವಿಳಂಬವಾಗುತ್ತಿರುವ ಬಗ್ಗೆ ಉದಯವಾಣಿಯಲ್ಲಿ ಹಲವು ಬಾರಿ ಸುದ್ದಿ ಪ್ರಕಟವಾಗಿತ್ತು.