Advertisement

35 ಲಕ್ಷ ರೂ. ಕೊಟ್ರೆ ತಾಯಿ-ಮಕ್ಕಳ ಆಸ್ಪತ್ರೆಗೆ ಜಾಗ

01:23 PM May 03, 2022 | Team Udayavani |

ಸಿಂಧನೂರು: ನಗರ ವ್ಯಾಪ್ತಿಯಲ್ಲಿ ಎರಡು ಎಕರೆಗೂ ಹೆಚ್ಚು ಮೇಲ್ಪಟ್ಟ ವಿಸ್ತೀರ್ಣದ ಜಾಗ ಲಭ್ಯವಿಲ್ಲ ಎಂದು ಕಂದಾಯ ಇಲಾಖೆ ಹೇಳಿದ ಮೇಲೂ ಎರಡು ಎಕರೆ ಜಮೀನು ಲಭ್ಯತೆಯ ಕುರಿತು ನೀರಾವರಿ ನಿಗಮ(ಇಲಾಖೆ) ಪ್ರಸ್ತಾವನೆ ಸಲ್ಲಿಸಿ, ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ.

Advertisement

ಕರ್ನಾಟಕ ನೀರಾವರಿ ನಿಗಮಕ್ಕೆ ಬೇಡಿಕೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿಗಳು ಜಾಗ ಲಭ್ಯತೆಯ ಪೂರಕ ದಾಖಲೆಗಳ ಸಮೇತ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ತಾಯಿ-ಮಕ್ಕಳ ಆಸ್ಪತ್ರೆಯನ್ನು ಸಿಂಧನೂರು ನಗರದಲ್ಲೇ ಕಟ್ಟಲು ಅವಕಾಶವಿದೆ ಎಂಬುದಕ್ಕೆ ಪೂರಕ ದಾಖಲೆಯನ್ನು ಒದಗಿಸಿದ್ದಾರೆ. ಈ ಕಡತ ನೀರಾವರಿ ನಿಗಮದ ಸಿಇ ಕಚೇರಿಗೆ ಸಲ್ಲಿಕೆಯಾಗಿ ತಿಂಗಳು ಕಳೆದರೂ ಪ್ರತ್ಯುತ್ತರ ಇಲ್ಲವಾಗಿದೆ.

ಏನಿದು ಪ್ರಕರಣ?: ಶಾಸಕ ವೆಂಕಟರಾವ್‌ ನಾಡಗೌಡ ಅವರು ವಿಶಾಲ ಪ್ರದೇಶ ಸಿಂಧನೂರಿನಲ್ಲಿ ಲಭ್ಯವಿಲ್ಲ ಎಂಬ ಕಾರಣಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಜಾಗ ಹುಡುಕಿ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಬಳಿಕ ವಿರೋಧಿಗಳು ಭಾರಿ ಪ್ರಮಾಣದಲ್ಲಿ ಆಕ್ಷೇಪ ಎತ್ತಿದ್ದರಿಂದ ನಿಲುವು ಬದಲಿಸಿ, ಜಾಗ ತೋರಿಸಿ ಎಂಬ ಪ್ರತಿ ಸವಾಲು ಹಾಕಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರು ಆರೋಗ್ಯ ಮತ್ತು ನೀರಾವರಿ ಇಲಾಖೆ ಮಂತ್ರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಫಲವಾಗಿ ನೀರಾವರಿ ನಿಗಮಕ್ಕೂ ಪತ್ರ ಬಂದ ಹಿನ್ನೆಲೆಯಲ್ಲಿ ಕಡತವನ್ನು ಸಿಇ ಕಚೇರಿಗೆ ಸಲ್ಲಿಸಲಾಗಿದೆ.

ಪೂರಕ ಸ್ಪಂದನೆ: ಮೇಲಧಿಕಾರಿಗಳು ಸಲ್ಲಿಸಿದ ಬೇಡಿಕೆಯನ್ನು ಆಧರಿಸಿ ಇಲ್ಲಿನ ನೀರಾವರಿ ಇಲಾಖೆ ಉಪವಿಭಾಗ ಪೂರಕ ಕಡತವನ್ನು ಸಲ್ಲಿಕೆ ಮಾಡಿದೆ. ನೀರಾವರಿ ನಿಗಮಕ್ಕೆ ಅವಶ್ಯವಾದ ಜಾಗವಿದ್ದರೂ ಸಾರ್ವಜನಿಕ ಬಳಕೆ ದೃಷ್ಟಿಯಿಂದ ಎರಡು ಎಕರೆ ಬಿಟ್ಟು ಕೊಡಬಹುದು ಎಂಬ ಕಡತವನ್ನು ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ.

ಹಣಕ್ಕಾಗಿ ಬೇಡಿಕೆ: ನೀರಾವರಿ ಇಲಾಖೆ ನಿಗಮವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಪ್ರತಿ ಜಾಗವನ್ನು ಕೂಡ ಹಣ ಕೊಟ್ಟು ಮಾರಾಟ ಮಾಡಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ. 29/1ರ ಕೊಂಗನಹಟ್ಟಿ ಗ್ರಾಮದಲ್ಲಿ ಬರುವ ಜಮೀನಿಗೆ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ 17 ಲಕ್ಷ 50 ಸಾವಿರ ರೂ.ಪಾವತಿಸಬೇಕು ಎಂಬ ಬೇಡಿಕೆ ಇಡಲಾಗಿದೆ. 35 ಲಕ್ಷ ರೂ.ಪಾವತಿಸಿದರೆ ನಿಗಮದ ಆಸ್ತಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಕೊಡುವುದಾಗಿ ನೀರಾವರಿ ನಿಗಮದ ಅಧಿಕಾರಿಗಳು ಬೇಡಿಕೆ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ.

Advertisement

ಸರಕಾರಕ್ಕೆ ಕಡತ ಸಲ್ಲಿಕೆ ಮಾಡಲಾಗಿತ್ತು. ಅವರು ನಿಗಮದ ಬೋರ್ಡ್‌ನಲ್ಲಿ ನಿರ್ಧಾರ ಮಾಡಲು ಸೂಚನೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಇಟ್ಟು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಮಸ್ಕಿ-ಮಾನ್ವಿಯಲ್ಲಿ ಜಾಗ ಕೊಟ್ಟಿದ್ದೇವೆ. ಸಿಂಧನೂರಿನಲ್ಲಿ ಕೊಡೋದಿಲ್ವೆ. ನಾವು ಪೂರಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. -ಮಲ್ಲಿಕಾರ್ಜುನ ಗುಂಗೆ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next