Advertisement
ಅವರು ಶನಿವಾರ ಲೇಡಿಗೋಶನ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಮಂಗಳೂರು ವತಿಯಿಂದ 35 ಲಕ್ಷ ರೂ. ವೆಚ್ಚದಲ್ಲಿ ಆರಂಭವಾದ ರೋಟರಿ ಅಮೃತ- ಎದೆ ಹಾಲಿನ ಘಟಕ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.
ಎದೆ ಹಾಲು ಸಂಗ್ರಹಣ ಘಟಕವು ಬಹಳ ಮಹತ್ವದ ಯೋಜನೆ. ಇದನ್ನು ಮುನ್ನಡೆಸುವುದು ಒಂದು ಸವಾಲಿನ ಕೆಲಸ. ನವಜಾತ ಶಿಶುಗಳ ಆರೈಕೆ ಘಟಕ, ಅಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ತಾಂತ್ರಿಕ ಸಿಬಂದಿ ನೇಮಕ, ಅವರಿಗೆ ವೇತನ ಪಾವತಿ ಇತ್ಯಾದಿ ಪ್ರಕ್ರಿಯೆಗಳಿವೆ. ಇದಕ್ಕೆ ನೆರವಾಗಲು ಆರೋಗ್ಯ ರಕ್ಷಾ ಸಮಿತಿ ಮತ್ತಿತರ ವಿವಿಧ ಖಾತೆಗಳಿಂದ ಅನುದಾನ ಒದಗಿಸಲಾಗುವುದು. ಇದಕ್ಕಾಗಿ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
Related Articles
Advertisement
ಲೇಡಿಗೋಶನ್‌ನ ವೈದ್ಯಕೀಯ ಅಧೀಕ್ಷಕ ಡಾ| ದುರ್ಗಾಪ್ರಸಾದ್ ಮಾತನಾಡಿ, ಈ ಆಸ್ಪತ್ರೆಯಲ್ಲಿ ತಿಂಗಳಿಗೆ 600ರಿಂದ 700ರಷ್ಟು ಹೆರಿಗೆಗಳಾಗುತ್ತಿವೆ. ಸುಮಾರು 120 ಮಕ್ಕಳು ನವಜಾತ ಶಿಶುಗಳ ಆರೈಕೆ ಘಟಕಕ್ಕೆ ದಾಖಲಾಗುತ್ತವೆ. ಈ ಪೈಕಿ ಶೆ. 30ರಷ್ಟು ಅವಧಿ ಪೂರ್ವ ಜನಿಸಿದ ಮಕ್ಕಳು ಇರುತ್ತವೆ. ಈ ಮಕ್ಕಳಲ್ಲಿ ಸರಾಸರಿ 8 ಸಾವು ಸಂಭವಿಸುತ್ತವೆ. ಎದೆ ಹಾಲು ಲಭಿಸಿದರೆ ಪರಿಹಾರ ಸಿಗಬಲ್ಲುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಸುಧೀರ್ ಕುಮಾರ್ ಜಲಾನ್ ಸ್ವಾಗತಿಸಿದರು. ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಚೇರ್ಮನ್ ಆರ್ಚಿಬಾಲ್ಡ್ ಮಿನೇಜಸ್ ಯೋಜನೆಯ ವಿವರ ನೀಡಿದರು. ಅಸಿಸ್ಟೆಂಟ್ ಗವರ್ನರ್ ಯತೀಶ್ ಬೈಕಂಪಾಡಿ, ಡಿಎಚ್‌ಒ ಡಾ| ಕಿಶೋರ್ ಕುಮಾರ್ ವೇದಿಕೆಯಲ್ಲಿದ್ದರು. ರೋಟರಿ ಕಾರ್ಯದರ್ಶಿ ಅರ್ಜುನ್ ನಾಯಕ್ ವಂದಿಸಿದರು. ಡಾ| ಸಿದ್ಧಾರ್ಥ ಶೆಟ್ಟಿ ನಿರ್ವಹಿಸಿದರು. ಡಾ| ಶಾಂತಾರಾಮ ಬಾಳಿಗಾ, ಡಾ| ಯು.ವಿ. ಶೆಣೈ, ಡಾ| ಶ್ರೀನಾಥ್ ಮಣಿಕಂಠಿ, ಡಾ| ಮುಕುಂದ್, ಡಾ| ಬಾಲಕೃಷ್ಣ ಭಾಗವಹಿಸಿದ್ದರು.
ಹಾಲು ಕಡಿಮೆಯಾಗುವ ಭೀತಿ ಬೇಡಎದೆ ಹಾಲನ್ನು ದಾನ ಮಾಡಿದರೆ ತನ್ನ ಮಗುವಿಗೆ ಹಾಲು ಸಾಕಾಗದೆ ಹೋಗಬಹುದೆಂಬ ಆತಂಕ ತಾಯಂದಿರಿಗೆ ಇರುವುದು ಸಹಜ. ಆದರೆ ಅಂತಹ ಯಾವುದೇ ಆತಂಕ ಬೇಡ. ಎದೆ ಹಾಲನ್ನು ತೆಗೆದಷ್ಟೂ ಮತ್ತೆ ಉತ್ಪತ್ತಿಯಾಗುತ್ತದೆ ಎಂದು ಸ್ವತಃ ವೈದ್ಯಕೀಯ ಪದವೀಧರರೂ ಆಗಿರುವ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ವಿವರಿಸಿದರು. ಲೇಡಿಗೋಶನ್ ಮತ್ತು ವೆನ್ಲಾಕ್ ಆಸ್ಪತ್ರೆಗೆ ಸುತ್ತಮುತ್ತಲ ಸುಮಾರು 15 ಜಿಲ್ಲೆಗಳ ತಾಯಂದಿರು ಚಿಕಿತ್ಸೆಗಾಗಿ ಬರುತ್ತಾರೆ. ಅವರಿಗೆ ಎದೆ ಹಾಲಿನ ಪ್ರಾಮುಖ್ಯತೆಯನ್ನು ವಿವರಿಸಬೇಕು. ತಮ್ಮ ಮಗುವಿಗೆ ಹಾಲುಣಿಸಿ ಉಳಿಕೆ ಎದೆ ಹಾಲು ದಾನ ಮಾಡುವಂತೆ ಅವರನ್ನು ಪ್ರೇರೇಪಿಸಬೇಕೆಂದು ಸಲಹೆ ಮಾಡಿದರು. 6 ತಿಂಗಳು ಸಂರಕ್ಷಿಸಿ ಇಡಬಹುದು
ಎದೆ ಹಾಲು ಸಂಗ್ರಹಿಸಲು ತಾಯಂದಿರನ್ನು ಮತ್ತವರ ಕುಟುಂಬದವರನ್ನು ಸಮಾಲೋಚನೆಗೆ ಒಳಪಡಿಸಿ ಒಪ್ಪಿಸಬೇಕಾಗುತ್ತದೆ. ಹಾಲು ಸ್ವೀಕಾರ ಮಾಡುವ ಮಗುವಿನ ತಾಯಿ ಮತ್ತು ಕುಟುಂಬದವರ ಒಪ್ಪಿಗೆಯನ್ನೂ ಪಡೆಯ ಬೇಕಾಗುತ್ತದೆ. ಹಾಲನ್ನು ಶೀತಲೀಕರಿಸಿ ಇಡಲಾಗುತ್ತದೆ. ಸಾಮಾನ್ಯ ರೆಫ್ರಿಜರೇಟರ್‌ನಲ್ಲಿ 24 ಗಂಟೆ, ಫ್ರೀಜರ್‌ನಲ್ಲಿ 3ರಿಂದ 6 ತಿಂಗಳ ತನಕ ಕೆಡದಂತೆ ದಾಸ್ತಾನು ಇಡಬಹುದಾಗಿದೆ. ರಾಜ್ಯದ ಎರಡನೇ ಘಟಕ
ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ಎದೆಹಾಲಿನ ಸಂಗ್ರಹ ಕೇಂದ್ರವು ಸರಕಾರಿ ಆಸ್ಪತ್ರೆಯಲ್ಲಿ ಆರಂಭಿಸಲಾದ ರಾಜ್ಯದ 2ನೇ ಹಾಗೂ ದೇಶದ 9ನೇ ಘಟಕವಾಗಿದೆ. 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಾಜ್ಯದ ಮೊದಲ ಘಟಕ ಆರಂಭ ವಾಗಿತ್ತು. ಖಾಸಗಿಯಾಗಿ ಬೆಂಗಳೂರಿನ ನಾಲ್ಕೈದು ಆಸ್ಪತ್ರೆಗಳಲ್ಲಿ ಘಟಕಗಳಿವೆ.