Advertisement

ಬಾವಿಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

09:16 PM Jun 09, 2019 | Team Udayavani |

ಚಿಕ್ಕಬಳ್ಳಾಪುರ: ಬಾವಿಯಲ್ಲಿ ಬಟ್ಟೆ ತೊಳೆಯುವಾಗ ಕಾಲು ಜಾರಿ ಬಿದ್ದ ತನ್ನ ಮಗಳನ್ನು ರಕ್ಷಿಸಲು ಹೋಗಿ ತಾಯಿ ಹಾಗೂ ಆಕೆಯ ಮಗ ಸೇರಿ ಮೂವರು ಬಾವಿಯೊಳಗೆ ಸಿಲುಕಿ ಹೊರ ಬರಲಾಗದೇ ನೀರಿನಲ್ಲಿ ಉಸಿರುಗಟ್ಟಿ ಮೃತ ಪಟ್ಟಿರುವ ಹೃದಯವಿದ್ರಾವಿಕ ಘಟನೆ ನಗರದ ಹೊರ ವಲಯದ ತಿಪ್ಪೇನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

Advertisement

ತಿಪ್ಪೇನಹಳ್ಳಿ ಗ್ರಾಮದ ವಿಜಯಾ (30), ಆಕೆಯ ಪುತ್ರ 10 ವರ್ಷದ ಅಜಯ್‌ ಹಾಗೂ 8 ಪುತ್ರಿ ಧನಲಕ್ಷ್ಮೀ ಮೃತರು.ಕಳೆದ 11 ವರ್ಷಗಳ ಹಿಂದೆ ವಿಜಯಾ ತಿಪ್ಪೇನಹಳ್ಳಿ ಗ್ರಾಮದ ನಾಗರಾಜ್‌ ಜೊತೆ ಮದುವೆಯಾಗಿ ಗ್ರಾಮದಲ್ಲಿ ನೆಲೆಸಿದ್ದರು.

ಘಟನೆ ವಿವರ: ಗಾರೆ ಕೆಲಸ ಮಾಡುವ ವಿಜಯಾ ಭಾನುವಾರ ರಜೆ ಇದ್ದ ಕಾರಣ ತನ್ನ ಗಂಡ ನಾಗರಾಜ್‌ಗೆ ಹೇಳಿ ತನ್ನ ಮಕ್ಕಳಾದ ಅಜಯ್‌ ಹಾಗೂ ಧನಲಕ್ಷ್ಮೀಯನ್ನು ಜೊತೆಯಲ್ಲಿ ಕರೆದುಕೊಂಡು ಗ್ರಾಮದ ಸಮೀಪವಿದ್ದ ಬಾವಿಯಲ್ಲಿ ಬಟ್ಟೆ ತೊಳೆಯಲಿಕ್ಕೆ ಹೋಗಿದ್ದು, ಈ ವೇಳೆ ಧನಲಕ್ಷ್ಮೀ ಅಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದಿದ್ದಾಳೆ.

ಇದನ್ನು ನೋಡಿದ ತಾಯಿ ವಿಜಯಾ ಮಗಳನ್ನು ರಕ್ಷಿಸಲು ಬಾವಿಗೆ ಇಳಿದಿದ್ದಾಳೆ. ತಾಯಿ ಬಾವಿಗೆ ಇಳಿದಿದ್ದನ್ನು ನೋಡಿ ಮಗ ಅಜಯ್‌ ಕೂಡ ಬಾವಿಗೆ ಇಳಿದಿದ್ದಾನೆ. ಆದರೆ ಮೂವರು ಕೂಡ ಮತ್ತೆ ಬಾವಿಯಿಂದ ಹೊರ ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತ ದೇಹಗಳನ್ನು ಕಂಡ ಗಂಡ: ಬೆಳಗ್ಗೆ 10 ಗಂಟೆಗೆ ಬಟ್ಟೆ ತೊಳೆಯಲು ಹೋದರೆ ಮಧ್ಯಾಹ್ನ ಆದರೂ ಮನೆಗೆ ಬರಲಿಲ್ಲ ಎಂದು ಗಾಬರಿಗೊಂಡ ಗಂಡ ನಾಗರಾಜ್‌ ಬಾವಿ ಬಳಿ ಹೋಗಿ ನೋಡಿದಾಗ ಪತ್ನಿ ಹಾಗೂ ಮಕ್ಕಳು ಬಾವಿಯಲ್ಲಿ ಮೃತ ದೇಹ ಕಂಡು ಬಂದಿವೆ.

Advertisement

ತಕ್ಷಣ ನಾಗರಾಜ್‌ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ಚೇತನ್‌ ಕುಮಾರ್‌ ಹಾಗೂ ಸಿಬ್ಬಂದಿ ಮೃತ ದೇಹಗಳನ್ನು ಬಾವಿಯಿಂದ ಸ್ಥಳೀಯರ ನೆರವಿನೊಂದಿಗೆ ಹೊರ ತೆಗೆಸಿ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು.

ಕೂಲಿ ಕಾರ್ಮಿಕ ಕುಟುಂಬ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನವಾದ ಮೃತ ವಿಜಯಾ 11 ವರ್ಷಗಳ ಹಿಂದೆ ತಿಪ್ಪೇನಹಳ್ಳಿ ಗ್ರಾಮದ ನಾಗರಾಜ್‌ ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗಳಿಬ್ಬರು ಗಾರೆ ಕೆಲಸದಲ್ಲಿ ತೊಡಗಿ ತಮ್ಮ ಇಬ್ಬರು ಮಕ್ಕಳನ್ನು ಓದಿಸುತ್ತಿದ್ದು, ಅಜಯ್‌ 5 ಹಾಗೂ ಧನಲಕ್ಷ್ಮೀ 3ನೇ ತರಗತಿಯಲ್ಲಿ ಓದುತ್ತಿದ್ದಳು. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ತನ್ನ ತಾಯಿ ಜೊತೆಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ವಿಧಿಯಾಟಕ್ಕೆ ಬಲಿಯಾಗಿ ಬಾವಿಯೊಳಗೆ ಮುಳುಗಿ ಮೃತ ಪಟ್ಟಿದ್ದಾರೆ.

ಮುಗಿಲು ಮುಟ್ಟಿದ ಪೋಷಕರ ಅಕ್ರಂದನ: ಗಾರೆ ಕೆಲಸ ಮಾಡಿಕೊಂಡು ಗಂಡನೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ವಿಜಯಾ ಹಾಗೂ ಇಬ್ಬರು ಮಕ್ಕಳು ಅಕಸ್ಮಿಕವಾಗಿ ಬಾವಿಯೊಳಗೆ ಬಿದ್ದು ಮೃತ ಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಿರವಮೌನ ಆವರಿಸಿತು.

ತಾಯಿ ಹಾಗೂ ಮಕ್ಕಳ ಸಾವಿನ ಬಗ್ಗೆ ಗ್ರಾಮಸ್ಥರು ಕಣ್ಣೀರಿಟ್ಟರು. ದುರ್ಘ‌ಟನೆಯಲ್ಲಿ ತಾಯಿ ಹಾಗೂ ಮಕ್ಕಳನ್ನು ಕಳೆದುಕೊಂಡ ಪೋಷಕರು ಯಾರಿಗೂ ಈ ತರಹ ಸಾವು ಬೇಡ ಎಂದು ಗೋಳಾಡುತ್ತಿದ್ದರೆ ಘಟನೆಯಲ್ಲಿ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡ ನಾಗರಾಜ್‌ನ ಅಕ್ರಂದನ ಮುಗಿಲು ಮುಟ್ಟಿತ್ತು.

ಸಾವಿನ ಸರಣಿ ಆಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತಿಕೊಳ್ಳುವುದೇ?: ಇತ್ತೀಚೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಪಾಳು ಬಿದ್ದ ಬಾವಿಗಳಿಗೆ ಹಾಗೂ ಕಲ್ಯಾಣಿಗಳಿಗೆ ನೀರು ಹರಿದು ಬಂದಿವೆ. ಬಹುತೇಕ ಗ್ರಾಮಗಳಲ್ಲಿ ಕಲ್ಯಾಣಿಗಳ ಹಾಗೂ ಬಾವಿಗಳಲ್ಲಿ ನೀರು ಸಂಗ್ರಹವಾಗಿರುವುದರಿಂದ ಗ್ರಾಮಸ್ಥರು ಅದರಲ್ಲೂ ಮಹಿಳೆಯರು, ಮಕ್ಕಳು ಬಟ್ಟೆ ತೊಳೆಯಲು ಹೋಗುವುದು ಸಾಮಾನ್ಯವಾಗಿದೆ.

ಆದ್ದರಿಂದ ಬಾವಿಗಳ ಹಾಗೂ ಕಲ್ಯಾಣಿಗಳ ಸಮೀಪ ಜನ ಹೋಗದಂತೆ ಸ್ಥಳೀಯ ಗಾಪಂಗಳು ಎಚ್ಚರ ವಹಿಸಬೇಕಿದ್ದು, ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು ತೀರಾ ಅಗತ್ಯವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣದಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ನೀರಿಗೆ ಅಭಾವ ಇರುವುದರಿಂದ ಜನ ಕೆರೆ, ಕುಂಟೆಗಳಿಗೆ ತೆರೆಳುವುದು ಸಾಮಾನ್ಯವಾಗಿದ್ದು ಈಗಲೇ ಜಿಲ್ಲಾಡಳಿತ ಎಚ್ಚೆತ್ತಿಕೊಂಡು ಈ ಬಗ್ಗೆ ಜಾಗ್ರತೆ ವಹಿಸಿ ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ರೀತಿಯ ಸಾವು, ನೋವುಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ.

ಬಟ್ಟೆ ತೊಳೆಯುವ ಸಂದರ್ಭದಲ್ಲಿ 8 ವರ್ಷದ ಧನಲಕ್ಷ್ಮೀ ಬಾವಿಗೆ ಕಾಲು ಜಾರಿ ಬಿದಿದ್ದು, ಈ ವೇಳೆ ಗಮನಿಸಿದ ತಾಯಿ ವಿಜಯಾ ಹಾಗೂ ಆಕೆಯ ಪುತ್ರ ಅಜಯ್‌ ಇಬ್ಬರು ಬಾವಿಗೆ ಇಳಿದಿದ್ದು, ಈ ವೇಳೆ ಈಜು ಬಾರದ ಕಾರಣ ಮೂವರು ಹೊರ ಬಾರಲಾಗದೇ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಗಂಡ ನಾಗರಾಜ್‌ ಬಾವಿ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
-ಚೇತನ್‌ ಕುಮಾರ್‌, ಪಿಎಸ್‌ಐ, ಗ್ರಾಮಾಂತರ ಠಾಣೆ ಚಿಕ್ಕಬಳ್ಳಾಪುರ

Advertisement

Udayavani is now on Telegram. Click here to join our channel and stay updated with the latest news.

Next