Advertisement

ದೇಶಕ್ಕಂಟಿರುವ ಕಳಂಕ; ಮಾಲಿನ್ಯ ಕಳೆಯಲು ಬೇಕು ಅಭಿಯಾನ

12:13 PM Oct 21, 2017 | Sharanya Alva |

ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುತ್ತಿರುವುದು ಯುದ್ಧ, ರೋಗ ಅಥವಾ ಅಪಘಾತವಲ್ಲ; ಬದಲಾಗಿ ಪರಿಸರ ಮಾಲಿನ್ಯ ಎನ್ನುತ್ತಿದೆ “ಲ್ಯಾನ್ಸೆಟ್‌ ಮೆಡಿಕಲ್‌ ಜರ್ನಲ್‌’ನಲ್ಲಿ ಪ್ರಕಟವಾದ ವರದಿ. ಪರಿಸರವನ್ನು ನಾವೆಷ್ಟು ಕುಲಗೆಡಿಸಿದ್ದೇವೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಈ ವರದಿ. 2015ರಲ್ಲಿ ಅವಧಿಗೆ ಮುನ್ನ ಜನಿಸಿ ಸತ್ತ ಪ್ರತಿ ಆರು ಮಕ್ಕಳಲ್ಲಿ ಒಂದು ಮಗು ಪರಿಸರ ಮಾಲಿನ್ಯದಿಂದ ಹೊರಸೂಸಿದ ವಿಷಕ್ಕೆ ಬಲಿಯಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ ಈ ವರದಿಯಲ್ಲಿ ಇನ್ನೂ ಹೆಚ್ಚು ಕಳವಳಕಾರಿ ಮಾಹಿತಿಯಿದೆ. ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಅತಿ ಹೆಚ್ಚು ಜನಸಂಖ್ಯೆಯಿರುವ ಚೀನಕ್ಕಿಂತಲೂ ಹೆಚ್ಚು ಮಂದಿ ಭಾರತದಲ್ಲಿ ಮಾಲಿನ್ಯದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

Advertisement

2015ರಲ್ಲಿ ಭಾರತದಲ್ಲಿ 25 ಲಕ್ಷ ಮತ್ತು ಚೀನದಲ್ಲಿ 18 ಲಕ್ಷ ಮಂದಿ ಮಾಲಿನ್ಯಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ ಅತಿ ಹೆಚ್ಚು ಹಾನಿ ಮಾಡುತ್ತಿರುವುದು ವಾಯುಮಾಲಿನ್ಯ. ಒಂದು ವರ್ಷದಲ್ಲಿ ಜಗತ್ತಿನಾದ್ಯಂತ ವಾಯುಮಾಲಿನ್ಯಕ್ಕೆ ಬಲಿಯಾಗಿರುವವರ ಸಂಖ್ಯೆ 65 ಲಕ್ಷ. ಪರಿಸರ ಮಾಲಿನ್ಯದಿಂದಾಗಿ ಉಂಟಾಗುತ್ತಿರುವ ಹಾನಿ ಮತ್ತು ನಷ್ಟವೂ ಇಷ್ಟೇ ಅಗಾಧವಾಗಿದೆ. ಜಾಗತಿಕವಾಗಿ ವಾರ್ಷಿಕ 4.6 ಲಕ್ಷ ಕೋಟಿ ಡಾಲರ್‌ನಷ್ಟು ಹಾನಿ ಮಾಲಿನ್ಯದಿಂದಾಗಿ ಸಂಭವಿಸುತ್ತದೆ.ಇದು ಜಾಗತಿಕ ಆರ್ಥಿಕತೆಯ ಶೇ. 6.2ಕ್ಕೆ ಸಮವಾದ ಮೊತ್ತ. ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಅಧ್ಯಯನಗಳು ನಡೆದಿವೆ.

ಆದರೆ ನಿವಾರಣೆಯ ವಿಚಾರದಲ್ಲಿ, ಏಡ್ಸ್‌ ಅಥವಾ ಹವಾಮಾನ ಬದಲಾವಣೆ ಪರಿಣಾಮಗಳಿ ಗೆ ನೀಡಿದಷ್ಟು ಮಹತ್ವವನ್ನು ಪರಿಸರ ಮಾಲಿನ್ಯಕ್ಕೆ ನೀಡಲಾಗಿಲ್ಲ. ನಮ್ಮಲ್ಲಂತೂ ಮಾಲಿನ್ಯದ ಜತೆಗೆ ಬದುಕುವುದಕ್ಕೆ ಜನರು ಒಗ್ಗಿಕೊಂಡಿದ್ದಾರೆ. ನೆಲ, ಜಲ, ವಾಯು ಹೀಗೆ ಯಾವುದನ್ನೂ ನಾವು ಕಲುಷಿತಗೊಳಿಸದೆ ಬಿಟ್ಟಿಲ್ಲ. ಜಗತ್ತಿನ ಅತಿ ಹೆಚ್ಚು ವಾಯುಮಾಲಿನ್ಯ ನೂರು ನಗರಗಳ ಪೈಕಿ ಟಾಪ್‌ ಟೆನ್‌ದಲ್ಲಿ ಭಾರತದ ಐದು ನಗರಗಳಿವೆ. ಅದರಲ್ಲೂ ದಿಲ್ಲಿ ಮೊದಲನೇ ಸ್ಥಾನದಲ್ಲಿದೆ. ನಗರ ಪ್ರದೇಶಗಳ ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ ವಾಹನಗಳು ಮತ್ತು ಕೈಗಾರಿಕೆಗಳು. ಕಲ್ಲಿದ್ದಲು ಉರಿಸುವ ಕೈಗಾರಿಕೆಗಳಿಂದಾಗಿ ಅತಿ ಹೆಚ್ಚಿನ ಮಾಲಿನ್ಯ ಉಂಟಾಗುತ್ತದೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಪ್ರಯತ್ನ ಮಾತ್ರ ಇನ್ನೂ  ಪರಿಣಾಮಕಾರಿಯಾಗಿ ಆಗಿಲ್ಲ. ಅಂತೆಯೇ ವಾಹನಗಳ ಸಂಖ್ಯೆಗೆ ಮಿತಿ ಹಾಕುವ ಇಚ್ಛಾಶಕ್ತಿಯನ್ನು ಯಾವ ಸರಕಾರವೂ ತೋರಿಸುತ್ತಿಲ್ಲ. ವಾಯು ಮಾಲಿನ್ಯದಿಂದಾಗಿ ಜನರ ಬದುಕು ಎಷ್ಟು ದುಸ್ತರವಾಗುತ್ತದೆ ಎನ್ನುವುದಕ್ಕೆ ದಿಲ್ಲಿಯೇ ಅತ್ಯುತ್ತಮ ಉದಾಹರಣೆ. ಚಳಿಗಾಲದಲ್ಲಿ ದಿಲ್ಲಿ ಅಕ್ಷರಶಃ ಗ್ಯಾಸ್‌ ಚೇಂಬರ್‌ ಆಗುತ್ತದೆ. ಕಳೆದ ವರ್ಷ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಲ್ಲಿ ವಾಹನಗಳ ಸಮ-ಬೆಸ ಪ್ರಯೋಗ ಮಾಡಲಾಗಿತ್ತು. ಈ ವರ್ಷ ಸುಪ್ರೀಂಕೋರ್ಟ್‌ ದೀಪಾವಳಿ ಹಬ್ಬಕ್ಕೆ ಪಟಾಕಿ ಸುಡುವುದನ್ನು ನಿಷೇಧಿಸಿತು. ಆದರೆ ಇವೆಲ್ಲ ತಾತ್ಕಾಲಿಕ ಉಪಶಮನಗಳು ಮಾತ್ರ.

ಜಲಮಾಲಿನ್ಯಗೊಳಿಸುವುದರಲ್ಲೂ ನಾವೇ ಮುಂದು. ಒಂದೆಡೆ ನೀರಿಗೆ ದೇವರ ಸ್ಥಾನ ನೀಡಿ ಪೂಜಿಸುತ್ತೇವೆ. ಇನ್ನೊಂದೆಡೆ ಆ ನೀರನ್ನು ಇನ್ನಿಲ್ಲದಂತೆ ಕೆಡಿಸುತ್ತೇವೆ. ಇದಕ್ಕೆ ನಮ್ಮ ನದಿಗಳೇ ಸಾಕ್ಷಿ. ಅತ್ಯಂತ ಪವಿತ್ರ ಎಂಬ ಭಾವನೆಯಿರುವ ಗಂಗಾ ನದಿಯನ್ನೇ ನಾವು ಬಿಟ್ಟಿಲ್ಲ. ಕೊಳಕೆದ್ದು ಹೋಗಿರುವ ಈ ನದಿಯನ್ನು ಸ್ವತ್ಛಗೊಳಿಸಲು ಈಗೀಗ ಒಂದಷ್ಟು ಪ್ರಯತ್ನಗಳು ನಡೆದಿದ್ದರೂ ಇನ್ನೂ ನದಿಯ ಒಂದು ಹನಿ
ನೀರೂ ಸ್ವತ್ಛವಾಗಿಲ್ಲ. ಯಾವ ನದಿಯೂ ಪರಿಶುದ್ಧವಾಗಿ ಉಳಿದಿಲ್ಲ. ವಿಚಿತ್ರವೆಂದರೆ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಇಂದಿಗೂ ಯಾವುದೇ ಅಂತಾರಾಷ್ಟ್ರೀಯ ಘೋಷಣೆಯಾಗಿಲ್ಲ. ಅದಾಗ್ಯೂ ಕ್ರಮೇಣ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ಅರಿವು
ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆ. ಎಲ್ಲ ರೂಪದ ಮಾಲಿನ್ಯಗಳು ಜಗತ್ತಿನ ಆದ್ಯತೆಯ ವಿಚಾರವಾಗಬೇಕೆಂದು ಕಳೆದ ವರ್ಷ ವಿಶ್ವಬ್ಯಾಂಕ್‌ ಹೇಳಿದೆ. ಮುಂಬರುವ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆ ಮೊದಲ ಬಾರಿಗೆ ಮಾಲಿನ್ಯದ ಕುರಿತು ಅಂತಾರಾಷ್ಟ್ರೀಯ ಸಮಾವೇಶವನ್ನು
ನಡೆಸಲಿದೆ. ಹಾಗೆಂದು ಮಾಲಿನ್ಯವನ್ನು ನಿಯಂತ್ರಿಸುವುದು ಬರೀ ಸರಕಾರದ ಕೆಲಸ ಮಾತ್ರವಲ್ಲ. ಪ್ರತಿಯೊಬ್ಬರೂ ಈ ಕೆಲಸದಲ್ಲಿ ಕೈಜೋಡಿಸಬೇಕು. ಸ್ವತ್ಛ ಭಾರತ ಅಭಿಯಾನದ ಮಾದರಿಯಲ್ಲಿ ಮಾಲಿನ್ಯ ಮುಕ್ತಗೊಳಿಸುವ ಅಭಿಯಾನವೊಂದನ್ನು ಹಮ್ಮಿಕೊಂಡು ಅದರಲ್ಲಿ
ಪ್ರತಿಯೊಬ್ಬರೂ ಸಹಭಾಗಿಗಳಾಗುವಂತೆ ಮಾಡಿದರೆ ದೇಶಕ್ಕಂಟಿರುವ ಕಳಂಕವನ್ನು ನಿವಾರಿಸಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next