ಪಣಜಿ : ಹಾಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಶೇಕರ್ ಸಹಿತ ಅವರ ಸಚಿವ ಸಂಪುಟದ ಹೆಚ್ಚಿನ ಸಚಿವರು ಚುನಾವಣೆಯಲ್ಲಿ ಪರಾಜಿತರಾಗಿದ್ದಾರೆ.
ಪರ್ಶೇಕರ್ ಅವರು ತಾವು ಪ್ರತಿನಿಧಿಸುತ್ತಿದ್ದ ಮಾಂಡ್ರೆಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಯಾನಂದ ಸೋಪೆ¤ ಅವರೆದುರು 7,000ಕ್ಕೂ ಅಧಿಕ ಮತಗಳಿಂದ ಸೋತರು.
ಪರ್ಶೇಕರ್ ಸಚಿವ ಸಂಪುಟದ ಎಂಟು ಸಚಿವರ ಪೈಕಿ ಆರು ಸಚಿವರು ಸೋಲುವುದರೊಂದಿಗೆ ಬಿಜೆಪಿ, ಗೋವೆಯಲ್ಲಿ ಅತ್ಯಂತ ಕಳಪೆ ನಿರ್ವಹಣೆ ತೋರಿದೆ. 2012ರಲ್ಲಿ ಬಿಜೆಪಿ ಗೋವಾ ಚುನಾವಣೆಯಲ್ಲಿ ಸರಳ ಬಹುಮತ ಪಡೆದು ಅಧಿಕಾರದ ಗದ್ದುಗೆಯನ್ನೇರಿತ್ತು.
ಬಿಜೆಪಿಯ ಹಿರಿಯ ನಾಯಕ, ಅರಣ್ಯ ಸಚಿವ ರಾಜೇಂದ್ರ ಆರಳೇಕರ್ ಅವರು ಎಂಜಿಪಿಯ ಮನೋಹರ್ ಅಸಗಾಂವ್‌ಕರ್ ಅವರೆದುರು ಪೆರ್ನೆ ಕ್ಷೇತ್ರದಲ್ಲಿ ಪರಾಜಿತರಾದರು.
ಹೊಸದಾಗಿ ರಚನೆಗೊಂಡ ಗೋವಾ ಫಾರ್ವರ್ಡ್ ಪಾರ್ಟಿ ಬಿಜೆಪಿಗೆ ಅವಳಿ ಹೊಡೆತ ನೀಡಿ ಅದರ ಇಬ್ಬರು ಹಿರಿಯ ಸಚಿವರನ್ನು (ಜಲಸಂಪನ್ಮೂಲ ಸಚಿವ ದಯಾನಂದ ಮಾಂಡ್ರೇಕರ್ ಮತ್ತು ಪ್ರವಾಸೋದ್ಯಮ ಸಚಿವ ದಿಲೀಪ್ ಪಾರುಳೇಕರ್) ಪರಾಭವಗೊಳಿಸಿರುವುದು ಗಮನಾರ್ಹವಾಗಿದೆ.
ಕೈಗಾರಿಕಾ ಸಚಿವ ಮಹಾದೇವ್ ನಾಯಕ್ ಅವರನ್ನು ಕಾಂಗ್ರೆಸ್‌ನ ಸುಭಾಷ್ ಶಿರೋಡ್‌ಕರ್, ಶಿರೋಡಾ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.
ಇನ್ನೋರ್ವ ಪ್ರಮುಖ ಸೋಲಿನ ಸರದಾರನೆಂದರೆ ಎಂಜಿಪಿಯ ದೀಪಕ್ ಧವಳೀಕರ್. ಇವರನ್ನು ಪಕ್ಷೇತರ ಅಭ್ಯರ್ಥಿ ಗೋವಿಂದ ಗಾವಡೆ ಸೋಲಿಸಿದರು.