ಬೆಂಗಳೂರು: ಮದ್ಯದ ಅಮಲಿನಲ್ಲಿ ಹಣದ ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ, ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಹಾಲಕ್ಷ್ಮೀ ಲೇಔಟ್ ಇಸ್ಕಾನ್ ದೇವಾಲಯದ ಬಳಿ ಭಾನುವಾರ ನಸುಕಿನಲ್ಲಿ ನಡೆದಿದೆ.
ಭೋವಿಪಾಳ್ಯ ನಿವಾಸಿ, ಗಾರೆ ಕೆಲಸಗಾರ ಮಣಿಕಂಠ (22) ಕೊಲೆಯಾದವ. ಕೃತ್ಯವೆಸಗಿ ಪರಾರಿಯಾಗಿರುವ ಈತನ ಸ್ನೇಹಿತರಾದ ಆಟೋ ಚಾಲಕ ಸಂತೋಷ್ ಹಾಗೂ ಫೋಟೋಗ್ರಾಫರ್ ನಾಗರಾಜನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೋವಿಪಾಳ್ಯದಲ್ಲಿ ಶನಿವಾರ ರಾತ್ರಿ ಮಣಿಕಂಠನ ಸಂಬಂಧಿಯೊಬ್ಬರು ಮೃತಪಟ್ಟಿದ್ದರು. ರಾತ್ರಿ ಮೃತದೇಹವನ್ನು ಕಾಯಲು ಹೋಗಿದ್ದ ಮೂವರು, ಮುಂಜಾನೆಯವರೆಗೆ ಮದ್ಯ ಸೇವಿಸಿದ್ದು, ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿದ್ದಾರೆ. ನಂತರ ಹಣಕಾಸಿನ ವಿಚಾರಕ್ಕೆ ಮೂವರ ನಡುವೆ ಜಗಳವಾಗಿದೆ.
ಜಗಳ ಮಾಡಿಕೊಂಡೇ ಭೋವಿಪಾಳ್ಯದಿಂದ ಇಸ್ಕಾನ್ ದೇವಾಲಯದವರೆಗೆ ಆಟೋದಲ್ಲಿ ಬಂದಿದ್ದಾರೆ. ಈ ವೇಳೆ ಆಕ್ರೋಶಗೊಂಡ ನಾಗರಾಜ್ ಮತ್ತು ಸಂತೋಷ್ ಆಟೋದಲ್ಲಿ ಇಟ್ಟಿದ್ದ ರಾಡ್ ಮತ್ತು ಮಚ್ಚಿನಿಂದ ಮಣಿಕಂಠನ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಮಣಿಕಂಠ ಕೆಳಗೆ ಬಿದ್ದಾಗ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೂಡಲೇ ಮಣಿಕಂಠನನ್ನು ನಿಮ್ಹಾನ್ಸ್‌ಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲೇ ಸಂಚು: ಮತ್ತೂಂದೆಡೆ ಆರೋಪಿಗಳ ಪೈಕಿ ಸಂತೋಷ್ ಆಟೋದಲ್ಲಿ ರಾಡ್ ಮತ್ತು ಮಚ್ಚು ಹೇಗೆ ಬಂತು ಎಂಬ ಕುರಿತು ಕುತೂಹಲ ಮೂಡಿದ್ದು, ಕೊಲೆಗೆ ಮೊದಲೇ ಸಂಚು ರೂಪಿಸಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ಬಂಧನದ ಬಳಿಕ ಸತ್ಯ ಬೆಳಕಿಗೆ ಬರಲಿದೆ.