Advertisement

ಮಕ್ಕಳ ಆಹಾರದಲ್ಲಿರಲಿ ಹೆಚ್ಚಿನ ನೀರಿನಾಂಶ

09:00 PM Jun 07, 2019 | Lakshmi GovindaRaj |

ದೇವನಹಳ್ಳಿ: ಪ್ರತಿಯೊಬ್ಬರು ಸುತ್ತಮುತ್ತಲಿನ ಪರಿಸರ ಸ್ವತ್ಛವಾಗಿಟ್ಟುಕೊಳ್ಳಬೇಕು. ಮಕ್ಕಳು ಸೇವಿಸುವ ಆಹಾರದಲ್ಲಿ ನೀರಿನಾಂಶ ಹೆಚ್ಚಿನದಾಗಿರಬೇಕು. ಅವರಿಗೆ ಬೇಕಾಗುವ ಹೈಜೀನ್‌ ಪೋಷಕಾಂಶಗಳನ್ನು ಒಆರ್‌ಎಸ್‌ ಒದಗಿಸುತ್ತದೆ ಎಂದು ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಯೋಗೇಶ್‌ ಗೌಡ ತಿಳಿಸಿದರು.

Advertisement

ತಾಲೂಕಿನ ವಿಶ್ವನಾಥಪುರ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಒಆರ್‌ಎಸ್‌ ಮತ್ತು ಝಿಂಕ್‌ ಅತಿಸಾರಭೇದಿಗೆ ಪರಿಣಾಮಕಾರಿ ಚಿಕಿತ್ಸೆ ಅರಿವು ಮತ್ತು ಅತಿಸಾರಭೇದಿ ನಿಯಂತ್ರಣ ಪಾತ್ಯಕ್ಷಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 0-5ವರ್ಷದ 80579 ಮಕ್ಕಳಿದ್ದು, ಸುಮಾರು 150ರಿಂದ 200 ಮಕ್ಕಳು ಅತಿಸಾರ ಭೇದಿಯಿಂದ ಬಳಲುತ್ತಿದ್ದಾರೆ. ಡಯೇರಿಯಾದಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಸಂಪೂರ್ಣವಾಗಿ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯವಾಗುತ್ತಿದೆ. ಜೂ.3ರಿಂದ ಜೂ.17ರವರೆಗೆ ನಡೆಯುವ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಯೋಜಿಸಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರಿಗೆ ಅರಿವು ಮೂಡಿಸಬೇಕು.

ಒಬ್ಬರಿಂದ ಮತ್ತೂಬ್ಬರಿಗೆ ಬಹುಬೇಗ ಹರಡುವ ಕಾಯಿಲೆ ಇದಾಗಿರುತ್ತದೆ. ಅದ್ದರಿಂದ ಮನೆ, ಶಾಲೆ, ಹೊಟೇಲ್‌ಗ‌ಳಲ್ಲಿ ಅರಿವು ಮೂಡಿಸಬೇಕಾಗಿದೆ. ಕಾಯಿಲೆ ಬರದಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತದೆ ಎಂದು ಹೇಳಿದರು.

5 ವರ್ಷದೊಳಗಿನ ಮಕ್ಕಳಿಗೆ ಇಂತಹ ಕಾಯಿಲೆಗೆ ತುತ್ತಾಗುವುದನ್ನು ತಡೆಯುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳ ಮರಣ ಪ್ರಮಾಣ ಕುಗ್ಗಿಸಲು ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಆಗಬೇಕು ಎಂದು ಕರೆ ನೀಡಿದರು.

Advertisement

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಮಹೇಶ್‌ ಕುಮಾರ್‌ ಮಾತನಾಡಿ, ಶುದ್ಧ ಕುಡಿಯುವ ನೀರು ಬಳಸದಿರುವುದು. ಕೈ ತೊಳೆಯದೆ ಆಹಾರ ಸೇವಿಸುವುದು ರೋಗಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಪ್ರತಿನಿತ್ಯ ಸ್ವತ್ಛತೆಗೆ ಆದ್ಯತೆ ನೀಡಬೇಕು. ಕುದಿಸಿ ತಣಿಸಿದ ನೀರು ಕುಡಿಯುವುದು, ಆಹಾರ ಸೇವಿಸುವ ಮುನ್ನ ಸಾಬೂನಿನಿಂದ ಚೆನ್ನಾಗಿ ಕೈ ತೊಳೆಯಬೇಕು. ಒಆರ್‌ಎಸ್‌ ತಯಾರಿಕೆ ಬಗ್ಗೆ ಪಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭ ತಾಲೂಕು ವೈದ್ಯಾಧಿಕಾರಿ ಡಾ.ಸಂಜಯ್‌, ಕುಟುಂಬ ಕಲ್ಯಾಣ ಯೋಜನಾಧಿಕಾರಿ ಎ.ಎಂ.ಶ್ರೀನಿವಾಸ್‌, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇವಣ್ಣ, ಜಿಲ್ಲಾ ಶುಶ್ರೂಷ ಅಧಿಕಾರಿ ರೇಖಾ, ಆರ್‌ಬಿಎಸ್‌ಕೆ ಅಧಿಕಾರಿ ರಮೇಶ್‌, ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್‌, ವಿಶ್ವನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ಡಾ.ಶ್ರುತಿ, ಆಸ್ಪತ್ರೆ ಆರೋಗ್ಯ ನಿರೀಕ್ಷಕ ಮಹೇಶ್‌, ಕೆಪಿಎಸ್‌ ಶಾಲೆಯ ಪ್ರಾಂಶುಪಾಲೆ ಬಿ.ಸಿ.ವಾಣಿಶ್ರೀ, ಉಪಪ್ರಾಂಶುಪಾಲ ಎಚ್‌.ಎಂ.ರುದ್ರಪ್ಪ, ಅರ್ಥಶಾಸ್ತ್ರ ಉಪನ್ಯಾಸಕ ನಾಗವೇಣಿ, ವಿಶ್ವನಾಥಪುರ ಆಪ್ತ ಸಲಹಾ ಕೇಂದ್ರ ಹಾಗೂ ಆರ್‌ಬಿಎಸ್‌ಕೆ ಸಂಸ್ಥೆಯ ವೈದ್ಯಾಧಿಕಾರಿಗಳು, ಶಾಲಾ ಸಿಬ್ಬಂದಿ, ಆಶಾಕಾರ್ಯಕರ್ತರು ಮತ್ತಿತರರು ಇದ್ದರು.

ಅತಿಸಾರಭೇದಿಯಿಂದ ಅಪಾಯ: 2014ರಿಂದ ಜೂನ್‌ ತಿಂಗಳಲ್ಲಿ ಕಾರ್ಯಕ್ರಮ ಮಾಡಲಾಗಿದೆ. ವರ್ಷಕ್ಕೆ 0-5 ವರ್ಷದೊಳಗಿನ ಮಕ್ಕಳು ಶೇ.10 ಭೇದಿಯಿಂದ ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು 0-5ವರ್ಷದ ಮಕ್ಕಳು ಅತಿಸಾರಭೇದಿಯಿಂದ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಡೆಗಟ್ಟಲು ಶಾಲಾ ಹಂತದಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಲ್ಲಿ ಅತಿಸಾರ ಭೇದಿ ಶುರುವಾಗುವುದಕ್ಕೆ ಬಡತನ ಮತ್ತು ಸ್ವತ್ಛತೆ ಇಲ್ಲದಿರುವುದು ಹಾಗೂ ಶೌಚಗೃಹ ಸರಿಯಾಗಿ ಬಳಸದಿರುವುದು ಕಾರಣ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಮಹೇಶ್‌ ಕುಮಾರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next