ಬೆಂಗಳೂರು: ಕೊಲಂಬೊದಲ್ಲಿ ನಡೆದ ಬಾಂಬ್ ಸ್ಫೋಟ ದುರಂತ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಸುಮಾರು 20ಕ್ಕೂ ಹೆಚ್ಚು ಮಂದಿ ಕನ್ನಡಿಗರು ಸೋಮವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಬೆಂಗಳೂರಿನ ವಿಜಯನಗರ, ಜಯನಗರ ಸೇರಿ ವಿವಿಧೆಡೆಯಿಂದ ಪ್ರವಾಸಕ್ಕೆಂದು ತೆರಳಿದ್ದವರು ಸ್ವದೇಶಕ್ಕೆ ವಾಪಸ್ ಆಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಕ್ಕೆ ಹೋದವರು ಅಲ್ಲಿದ್ದು ವಾಪಸ್ಸಾಗುತ್ತಿದ್ದಾರೆಂದು ಹೇಳಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಲವರು, ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸ್ಫೋಟದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಂತಹ ಘನಘೋರ ಘಟನೆ ನಡೆಯಬಾರದಿತ್ತು. ಕೃತ್ಯ ನಿಜಕ್ಕೂ ಖಂಡನೀಯ.
ನಾವು ತಂಗಿದ್ದ ಸ್ಥಳದ ಸ್ವಲ್ಪ ದೂರದಲ್ಲೇ ಸ್ಫೋಟ ಸಂಭವಿಸಿತ್ತು. ಅಲ್ಲದೆ, ಕೊಲಂಬೊದಲ್ಲಿ ಕರ್ಫ್ಯೂ ಜಾರಿ ಮಾಡಿದ್ದು, ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು. ನಾವು ಸ್ವದೇಶಕ್ಕೆ ಬಂದದ್ದು ನಮಗೆ ಸಮಾಧಾನವಾಗಿದೆ ಎಂದು ಹೇಳಿದರು.
ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಒಂದು ರೀತಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ಏನಾಗುತ್ತೋ ಎಂಬ ಭಯ ಜನರಲ್ಲಿ ಮೂಡಿದೆ. ಪ್ರವಾಸಿಗರಲ್ಲೂ ಸಾಕಷ್ಟು ಆತಂಕ ಮನೆ ಮಾಡಿತ್ತು ಎಂದು ತಿಳಿಸಿದರು.
ಬಾಂಬ್ ಸ್ಫೋಟದ ನಂತರ ಕಳೆದ 24 ಗಂಟೆಗಳಲ್ಲಿ ನಾವು ಎಂದು ನಮ್ಮ ಮನೆ ತಲುಪುತ್ತೇವೋ ಎಂಬ ಆತಂಕವಿತ್ತು.ನಾವು ನಮ್ಮ ದೇಶಕ್ಕೆ ಬಂದಿದ್ದು ಸಮಾಧಾನ ತಂದಿದೆ ಎಂದು ಹೇಳಿದರು.
ನಾವುಗಳು ಶ್ರೀಲಂಕಾದಿಂದ ಬಂದೆವು. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ 7 ಕಡೆ ಸ್ಫೋಟವಾಗಿತ್ತು. ಶ್ರೀಲಂಕಾ ಸರ್ಕಾರ ಮತ್ತು ಹೋಟೆಲ್‌ನ ಆಡಳಿತ ಮಂಡಳಿ ಎರಡು ದಿನಗಳ ಕಾಲ ನಮಗೆ ಸೂಕ್ತ ಭದ್ರತೆ ನೀಡಿತ್ತು. ಇದೀಗ ಖುಷಿಯಾಗಿದೆ.
-ವಿಜಯಭಾಸ್ಕರ್ ಜಯನಗರ ನಿವಾಸಿ