Advertisement
ಮೂಲಗಳ ಪ್ರಕಾರ ಕೆಲವು ಸಚಿವರೂ ಸೇರಿ 15ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ ಬರಲು ಸಿದ್ಧವಾಗಿದ್ದು, ಈ ಪೈಕಿ ಬಹುತೇಕರು ಪ್ರಸ್ತುತ ಆಡಳಿತಾರೂಢ ಕಾಂಗ್ರೆಸ್‌ನಲ್ಲಿರುವವರು. ಅದರಲ್ಲಿಯೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಎರಡು ಜಿಲ್ಲೆಗಳ ಪ್ರಭಾವಿ ಸಚಿವರು ಮತ್ತು ಒಂದು ಜಿಲ್ಲೆಯ ಸಚಿವ ಸಮಾನ ಘನತೆಯ ವ್ಯಕ್ತಿಗಳು ಈ ಗುಂಪಿನಲ್ಲಿದ್ದಾರೆ. ಉಳಿದಂತೆ ಹಳೇ ಮೈಸೂರು ಭಾಗದ ಇಬ್ಬರು ಮತ್ತು ಉತ್ತರ ಕರ್ನಾಟಕ ಭಾಗದ ಡಜನ್‌ನಷ್ಟು ಶಾಸಕರನ್ನು ಪಕ್ಷಕ್ಕೆ ಕರೆತರಲು ಬಿಜೆಪಿ ಮುಂದಾಗಿದೆ.
Related Articles
ಕಳೆದ ಆಗಸ್ಟ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಬಿಜೆಪಿ ಹೋಗುತ್ತಿರುವ ವೇಗ ಮತ್ತು ಆ ಪಕ್ಷದಲ್ಲಿ ಉಂಟಾಗಿರುವ ಒಗ್ಗಟ್ಟಿನಿಂದಾಗಿ ಈ ಹಿಂದೆ ಪಕ್ಷ ಸೇರಲು ಹಿಂದೆ ಸರಿದವರು ಕೂಡ ಈಗ ಬಿಜೆಪಿಯತ್ತ ವಾಲುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಕೆಲವು ಶಾಸಕರು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
Advertisement
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಹಳೆಯ ಕಾಂಗ್ರೆಸಿಗರನ್ನು ದೂರವಿಟ್ಟು ತಮ್ಮೊಂದಿಗೆ ಕಾಂಗ್ರೆಸ್ ಸೇರಿದವರಿಗೆ ಆದ್ಯತೆ ನೀಡುತ್ತಿರುವುದು ಮೂಲ ಕಾಂಗ್ರೆಸಿಗರಲ್ಲಿ ಬೇಸರ ತರಿಸಿದೆ. ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪಗಳೂ ಕೆಲವು ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಮುಂದುವರಿದ ಮೆಚ್ಚುಗೆ ರಾಜ್ಯದಲ್ಲಿ ಪ್ರಭಾವ ಬೀರಿದರೆ ಬಿಜೆಪಿ ಅಧಿಕಾರಕ್ಕೆ ಬರಬಹುದು. ಬಹುತೇಕ ಜನವರಿ ವೇಳೆಗೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗಾಗಿ ಜನವರಿ ಅಂತ್ಯದ ವೇಳೆ ನಿರ್ಧಾರ ಕೈಗೊಳ್ಳಲು ಶಾಸಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಂತೆ ಕಾಂಗ್ರೆಸ್‌ನ ಸ್ಥಳೀಯ ನಾಯರನ್ನು ಸಂಪರ್ಕಿಸಿದಾಗ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಿಂದ ಏಕೆ ಬಿಜೆಪಿಗೆ ಹೋಗಬೇಕು ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ಪ್ರಮುಖರನ್ನು ಸಂಪರ್ಕಿಸಿದಾಗ, ರಾಜ್ಯ ನಾಯಕರೆಡೆ ಕೈತೋರಿಸುತ್ತಿದ್ದಾರೆ.