Advertisement

Shahapur ಬಿಸಿಯೂಟ ಸೇವಿಸಿ 100 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

10:30 PM Jun 14, 2024 | Team Udayavani |

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಸರ್ಕಾರಿ ಉರ್ದು ಶಾಲೆ, ಸರ್ಕಾರಿ ಪ್ರೌಢಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀರೆ ಅಗಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಹಾಗೂ ಮಹಾಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಮಧ್ಯಾಹ್ನದಿಂದಲೇ ಶುರುವಾಗಿದೆ. ರಾತ್ರಿವರೆಗೆ ಮಕ್ಕಳ ಸಂಖ್ಯೆ 100 ರ ಗಡಿ ದಾಟಿದೆ.

Advertisement

ಅನ್ನ ಸಾಂಬಾರ್ ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವರಿಗೆ ವಾಂತಿಯಾಗಿದ್ದು, ಮತ್ತೆ ಕೆಲವರಿಗೆ ಹೊಟ್ಟೆ ನೋವು, ಇನ್ನು ಕೆಲವರಿಗೆ ತಲೆ ಸುತ್ತು ಬಂದಿದೆ ಎಂದು ಹೇಳಲಾಗಿದೆ. ಅಸ್ವಸ್ಥ ಮಕ್ಕಳನ್ನು ಗ್ರಾಮದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಧ್ಯಾಹ್ನ ಊಟ ಮಾಡುವಾಗ ಕೆಲ ಮಕ್ಕಳ ಊಟದಲ್ಲಿ ಬಳೆ ಚೂರುಗಳು ಬಂದಿವೆ ಎಂದು ಬಿಸಿ ಊಟ ಸೇವಿಸಿದ ಮಕ್ಕಳು ತಿಳಿಸಿದ್ದಾರೆ.

ಆಸ್ಪತ್ರೆಗೆ ಯಾದಗಿರಿ ಶಾಸಕ ಚನ್ನೂರ ಭೇಟಿ
ಶಹಾಪುರ:ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಯಾದಗಿರಿ ಶಾಸಕ ಚನ್ನಾರಡ್ಡಿ ತುನ್ನೂರ ಮಕ್ಕಳ ಯೋಗ ಕ್ಷೇಮ ವಿಚಾರಿಸಿದರು.

ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ದೇವರ ಕೃಪೆಯಿಂದ ಅನಾಹುತ ನಡೆದಿಲ್ಲ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರಿಗೆ, ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಹಿಂದೆ ನಡೆದ ಘಟನೆಗಳು ಏನಾದವೂ ಗೊತ್ತಿಲ್ಲ ಆದರೆ ಈ ಈ ವಿಷಯದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆ ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮುಖ್ಯ ಶಿಕ್ಷಕರ ವಿರುದ್ಧ ಮಕ್ಕಳ ಆಕ್ರೋಶ
ಮಧ್ಯಾಹ್ನ ಬಿಸಿ ಊಟ ಸೇವಿಸಿದ ಸ್ವಲ್ಪ ಹೊತ್ತು ನಂತರ ಮಕ್ಕಳಲ್ಲಿ ತಲೆ ತಿರುಗುವುದು, ಹೊಟ್ಟೆ ನೋವು, ಹಾಗೂ ತಲೆ ಸುತ್ತುವುದು,, ವಾಂತಿ ಬಂದಂತಾಗುತ್ತಿದೆ ಎಂದು ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೆ ಮುಖ್ಯ ಶಿಕ್ಷಕರು ಏನು ಆಗಲ್ಲ ಮನೆಗೆ ಹೋಗಿ ವಿಶ್ರಾಂತಿ ಮಾಡಿ ಎಂದಿದ್ದಾರೆಂದು ಹೆಸರು ಹೇಳಲಿಚ್ಚಿಸದ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎನ್‍ಜಿಓ ವಿರುದ್ಧ ಕ್ರಮಕ್ಕೆ ಆಗ್ರಹ
ಗ್ರಾಮೀಣ ಪ್ರದೇಶದಲ್ಲಿ ಬಡ ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಆರ್ಥಿಕವಾಗಿ ಸದೃಢವಲ್ಲದ ಬಡವರ ಮಕ್ಕಳು ಹೆಚ್ಚಾಗಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ. ಗುಣಮಟ್ಟವಲ್ಲದ ಅಡಿಗೆ ತಯಾರಿಸಿ ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ಖಾಸಗಿ ಏನ್‍ಜಿಒ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಪ್ರದೀಪ್ ಅಣಬಿ ಆಗ್ರಹಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅಣಬಿ ಅವರು, ಎನ್‍ಜಿಓ ನಡೆಸುತ್ತಿರುವವರು ಜಿಲ್ಲಾ ಉಸ್ತುವಾರಿ ಸಚಿವರ ಸಂಬಂಧಿಯಾಗಿದ್ದಾರೆ. ಇದಕ್ಕೂ ಮೊದಲು ಇಂತಹ ಹಲವು ಘಟನೆಗಳು ನಡೆದಿವೆ. ಆದರೆ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮಕ್ಕಳ ಜೀವದ ಜತೆ ಆಟವಾಡುವದು ಎಷ್ಟರ ಮಟ್ಟಿಗೆ ಸರಿ. ಕೂಡಲೇ ಇಂತಹ ಎನ್‍ಜಿಓ ಗಳ ಪರವಾನಿಗೆ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಘಟನಾ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಬಿಸಿ ಊಟ ಸೇವಿಸಿ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಸಾಮಾನ್ಯವಾದುದಲ್ಲ. ಈ ಘಟನೆ ಬಗ್ಗೆ ಅಧಿಕಾರಿಗಳು ನಿಷ್ಪಕ್ಷಪಾತವಾದ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸಿದಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚರ ವಹಿಸಬೇಕು.
-ಚನ್ನಪ್ಪ ಆನೇಗುಂದಿ. ಜಿಲ್ಲಾಧ್ಯಕ್ಷ. ಕರ್ನಾಟಕ ಪ್ರಾಂತ ರೈತ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next