ಪುಣೆ, ಜೂ. 15: ಸಾಂಗ್ಲಿ- ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರತಿವರ್ಷ ಉಂಟಾಗುವ ಪ್ರವಾಹ ಪರಿಸ್ಥಿತಿ ಕುರಿತು ಪುಣೆಯ ಅನಂತರಾವ್ ಪವಾರ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಸಂಶೋಧನೆ ಮತ್ತು ಪುಣೆಯ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ. ಇಲ್ಲಿಯ ತನಕ ಕೆಲವೊಂದು ವಿಷಯಗಳ ಸಂಶೋಧನೆ ನಡೆಸಿ ತಜ್ಞರು ವರದಿ ಸಲ್ಲಿಸಿದ್ದಾರೆ. ಅದಲ್ಲದೆ ಎರಡೂ ಜಿಲ್ಲೆಗಳ ಪರಿಸ್ಥಿತಿ ಕುರಿತು ಹೆಚ್ಚಿನ ಸಂಶೋಧನೆಗಾಗಿ ಸರಕಾರದ ವತಿಯಿಂದ ನಿಧಿ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಭರವಸೆ ನೀಡಿದ್ದಾರೆ.
ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಉಂಟಾಗುವ ಮಳೆ ಪ್ರವಾಹ ಪರಿಸ್ಥಿತಿ ಕುರಿತು ವಿಶೇಷ ಸಭೆ ಪುಣೆ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಯಿತು. ಈ ವೇಳೆ ತಜ್ಞರು ನಡೆಸಿದ ಸಂಶೋಧನೆ ವರದಿಯನ್ನು ಪರಿಶಿಲಿಸಿದ ಡಿಸಿಎಂ ಅಜಿತ್ ಪವಾರ್ ಅವರು ಕ್ರಮಗಳನ್ನು ಸೂಚಿಸಿದರು. ಈ ಬಗ್ಗೆ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅವರೊಂದಿಗೆ ಸಮಾಲೋಚಿಸಿ ಕ್ರಮಗಳ ನಿರ್ದೇಶನವನ್ನು ನಿರ್ಧರಿಸಲಾಗುವುದು ಎಂದರು.
ಕೃಷ್ಣ ಕಣಿವೆ ಪ್ರವಾಹ ಮತ್ತು ಪರಿಹಾರಗಳ ಕುರಿತು ತಜ್ಞರು ಮಂಡಿಸಿದ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಕೃಷ್ಣ ನದಿಯ ಪ್ರವಾಹದಿಂದ ಕೊಯ್ನಾ, ರಾಧನಗರಿ ಮತ್ತು ಇತರ ಅಣೆಕಟ್ಟುಗಳಲ್ಲಿ ಶೇಕಡಾ 30ರಿಂದ 40ರಷ್ಟು ನೀರು ಒಳಹರಿವು ಸಂಗ್ರಹಿಸಬಹುದು. ಆದರೆ ಮಳೆಗಾಲದಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಹೊಸ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಕೊಯ್ನಾ ಅಣೆಕಟ್ಟಿನ ನೀರಿನ ಮಟ್ಟಕ್ಕೆ ಸಿದ್ಧಪಡಿಸಿದ ವೇಳಾಪಟ್ಟಿಯನ್ನು ಅಣೆಕಟ್ಟು ಜೀರ್ಣೋದ್ಧಾರ ಸಮಿತಿಯ ದೀಪಕ್ ಮೊಡಕ್ ಮಂಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ಅಜಿತ್ ಪವಾರ್ ಅವರು ತಜ್ಞರು ನಡೆಸಿದ ಸಂಶೋಧನೆಗೆ ಸಂಬಂಧಿಸಿದಂತೆ ಮುಂದಿನ ನಿರ್ದೇಶನವನ್ನು ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಅವರೊಂದಿಗೆ ಸಮಾಲೋಚಿಸಿ ತೀರ್ಮಾನಿಸಬೇಕು. ಈ ಎರಡು ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಯ ಆಧಾರದ ಮೇಲೆ ಹೆಚ್ಚಿನ ಸಂಶೋಧನೆಗಾಗಿ ರಾಜ್ಯ ಸರಕಾರ ಆರ್ಥಿಕ ನೆರವು ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.