Advertisement

ಉಡುಪಿ: ಮಳೆ ಹಾನಿ: ಹೆಚ್ಚು ಪರಿಹಾರಧನ ಬಿಡುಗಡೆಗೆ ಒತ್ತಾಯ

09:36 AM Sep 07, 2018 | Team Udayavani |

ಉಡುಪಿ: ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿಯಾಗಿದ್ದು, ಸರಕಾರ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಜಿ.ಪಂ. ಸಭೆಯಲ್ಲಿ ಒತ್ತಾಯಿಸಲಾಗಿದೆ. ಗುರುವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ಮಾತನಾಡಿ, 139 ಕೋ.ರೂ.ಗಳಷ್ಟು ನಷ್ಟ ಆಗಿರುವ ಬಗ್ಗೆ ಅಧಿಕಾರಿಗಳು ಅಂದಾಜು ಮಾಡಿದ್ದರೂ 14 ಕೋ.ರೂ. ಮಾತ್ರ ಬಿಡುಗಡೆಯಾಗಿದೆ ಎಂದರು. 
ಸದಸ್ಯರಾದ ಗೀತಾಂಜಲಿ ಸುವರ್ಣ, ಉದಯ ಕೋಟ್ಯಾನ್‌, ಜ್ಯೋತಿ ಹರೀಶ್‌ ಕೂಡ ಸಹಮತ ಸೂಚಿಸಿದರು. ತಹಶೀಲ್ದಾರ್‌ ಪ್ರತಿಕ್ರಿಯಿಸಿ ಪ್ರತೀ ತಾಲೂಕಿನ ಹಾನಿ ವಿವರ ಒದಗಿ ಸಿದರು. ಬಿಡುಗಡೆಯಾಗಿರುವ 14 ಕೋ.ರೂ ಮೊತ್ತ ವಿನಿಯೋಗಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಸಿಇಒ ಶಿವಾನಂದ ಕಾಪಶಿ ಪ್ರತಿಕ್ರಿಯಿಸಿದರು.

Advertisement

ಬೆಳೆ ನಷ್ಟ 
5,357 ಹೆಕ್ಟೇರ್‌ ಅಡಿಕೆ ಬೆಳೆಗೆ ನಷ್ಟಆಗಿದೆ. ಸಮೀಕ್ಷೆ ನಡೆಯುತ್ತಿದ್ದು, ವರದಿ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಅಧಿಕಾರಿ ತಿಳಿಸಿದರು. 354 ರೈತರಿಗೆ ನಷ್ಟವಾಗಿದ್ದು 273 ಮಂದಿಗೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು. ಶುಕ್ರವಾರ ಆಗಮಿಸುವ ಸಿಎಂ ಬಳಿ ಹೆಚ್ಚು ಮೊತ್ತಕ್ಕೆ ಬೇಡಿಕೆ ಸಲ್ಲಿಸ ಬೇಕು ಎಂದು ಸದಸ್ಯರು ಹೇಳಿದರು. 

ಟೋಲ್‌ಗೆ ವಿರೋಧ: ನಿರ್ಣಯ 
ಒಳರಸ್ತೆಗಳಲ್ಲಿ ಟೋಲ್‌ ಸಂಗ್ರಹಿಸಬಾರದು ಹಾಗೂ ಹೆದ್ದಾರಿಯಲ್ಲಿಯೂ ಸ್ಥಳೀಯ ವಾಹನಗಳಿಂದ ಟೋಲ್‌ ಸಂಗ್ರಹಿಸಬಾರದು ಎಂದು ಜಿ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ಬೆರಳಚ್ಚು ಸಮಸ್ಯೆ ಆಗದು
ಬೆರಳಚ್ಚು ಸರಿಯಾಗದೆ ಆಧಾರ್‌ ದೊರೆಯುತ್ತಿಲ್ಲ ಎಂದು ಸದಸ್ಯರು ದೂರಿದಾಗ ಅಧಿಕಾರಿಗಳು, ಎಷ್ಟು ಪಡೆ ಯಲು ಸಾಧ್ಯವೋ ಅಷ್ಟು ಪಡೆದರೂ ಸಾಕಾಗುತ್ತದೆ. ಅಂಥ ತಂತ್ರಜ್ಞಾನ ಆಧಾರ್‌ ಕೇಂದ್ರದಲ್ಲಿದೆ. ಐರಿಸ್‌ ಸ್ಕ್ಯಾನ್‌ ಕೂಡ ಪಡೆಯುವುದರಿಂದ ಸಮಸ್ಯೆಯಾಗದು. ಹಾಸಿಗೆಯಲ್ಲೇ ಇರುವವರು ಆಧಾರ್‌ ಕೇಂದ್ರಗಳಿಗೆ ಬರಬೇಕಾಗಿಲ್ಲ. ಸಿಬಂದಿ ತೆರಳಿ ಆಧಾರ್‌ ಮಾಡಿಸಿಕೊಡುತ್ತಿದ್ದಾರೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಉದಯ ಎಸ್‌. ಕೋಟ್ಯಾನ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌ ಉಪಸ್ಥಿತರಿದ್ದರು.

Advertisement

ಬಟವಾಡಿ ಸುರೇಶ್‌, ಸುಮಿತ್‌ ಶೆಟ್ಟಿ, ಗೌರಿ ದೇವಾಡಿಗ, ದಿವ್ಯಶ್ರೀ ಅಮೀನ್‌, ಶಿಲ್ಪಾ ಜಿ. ಸುವರ್ಣ, ಚಂದ್ರಿಕಾ ಕೇಳ್ಕರ್‌ ಚರ್ಚೆಗಳಲ್ಲಿ ಪಾಲ್ಗೊಂಡರು. ಸಿಎಂ ಭೇಟಿ ಹಿನ್ನೆಲೆಯಲ್ಲಿ ಜಿ.ಪಂ. ಸಭೆ ಯನ್ನು ಮಧ್ಯಾಹ್ನದವರೆಗೆ ಮಾತ್ರ ನಡೆಸಿ ಸೆ.11ಕ್ಕೆ ಮುಂದೂಡಲಾಯಿತು.

ಹಳೆ ಅರ್ಜಿಗೆ ರೇಷನ್‌ ಕಾರ್ಡ್‌ ಇಲ್ಲ
ಅರ್ಜಿ ಸಲ್ಲಿಸಿದವರಿಗೆ ರೇಷನ್‌ ಕಾರ್ಡ್‌ ಸಿಕ್ಕಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ, 2018ರ ಜುಲೈಗಿಂತ ಮೊದಲು ಕುಟುಂಬದ ಎಲ್ಲರ ಆದಾಯ ಪ್ರಮಾಣ ಪತ್ರವನ್ನು ನೀಡಬೇಕಿತ್ತು. ನೀಡದವರಿಗೆ ಕಾರ್ಡ್‌ ಸಿಕ್ಕಿಲ್ಲ. ಜುಲೈ ಅನಂತರ ಕುಟುಂಬದ ಒಬ್ಬ ಸದಸ್ಯನ ಆದಾಯ ಪ್ರಮಾಣ ಪತ್ರ ಸಾಕು ಎಂಬ ನಿಯಮ ಜಾರಿಗೆ ಬಂದಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next