Advertisement
ಕ್ರೈಸ್ತ ಧರ್ಮದ ಧಾರ್ಮಿಕ ವಿಧಿ-ವಿಧಾನ ಹಾಗೂ ಸರ್ವಧರ್ಮದ ಗಣ್ಯರ ಸಮ್ಮುಖದಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಜೆ.ಆರ್.ಲೋಬೋ, ಎನ್.ಎ.ಹ್ಯಾರಿಸ್, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
Related Articles
Advertisement
ಪ್ರಾರ್ಥನೆ: ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ವಿವಿಧ ಪ್ರಾರ್ಥನೆಯನ್ನು ಸಾಮೂಹಿಕವಾಗಿ ನೆರವೇರಿಸಿದರು. ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಮಹಾಧರ್ಮಾಧ್ಯಕ್ಷರಿಗೆ ಅರ್ಪಿಸಲು ವಿಶೇಷ ಪ್ರಾರ್ಥನೆಯೊಂದನ್ನು ಸಿದ್ಧಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅದರ ಪ್ರತಿಯನ್ನು ಎಲ್ಲರಿಗೂ ವಿತರಿಸಿ ಸಾಮೂಹಿಕವಾಗಿ ಹಾಡಿದರು. ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯದ ವ್ಯಾಪ್ತಿಯಲ್ಲಿ ಕೆಥೋಲಿಕ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಡಾ.ಬರ್ನಾರ್ಡ್ ಮೊರಾಸ್ ನೆರವೇರಿಸಿದರು.
ಗಣ್ಯರಿಂದ ಅಭಿನಂದನೆ: ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ, ಗೃಹಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಗಣ್ಯರು ಡಾ.ಬರ್ನಾರ್ಡ್ ಮೊರಾಸ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಭೋಪಾಲ್, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ಬಳ್ಳಾರಿ, ಕಾರವಾರ, ಶಿವಮೊಗ್ಗ, ಮಂಡ್ಯ ಹಾಗೂ ತಮಿಳುನಾಡಿನ ವಿವಿಧ ಚರ್ಚ್‌ನ ಧರ್ಮಾಧ್ಯಕ್ಷರು, ಧರ್ಮಗುರುಗಳು, ಸಂಘಟನಾ ಸಮಿತಿಯ ಶ್ರೇಷ್ಠಗುರುಗಳಾದ ಮೊನ್‌ಸಿಜೊnàರ್ ಎಸ್.ಜಯನಾಥನ್, ಮೊನ್‌ಸಿಜೊರ್ ಸಿ.ಫ್ರಾನ್ಸಿಸ್, ಧಾರ್ಮಿಕ ಸಮುದಾಯದ ಮಹಾಧರ್ಮಾಕ್ಷೇತ್ರದ ಪ್ರತಿನಿಧಿ ಸ್ವಾಮಿ ಕ್ಸೇವಿಯರ್ ಮನಾವತ್ ಮೊದಲಾದವರು ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಸ್ವಾಗತ: ಸಂಜೆ 5 ಗಂಟೆ ಸುಮಾರಿಗೆ ಡಾ.ಬರ್ನಾರ್ಡ್ ಮೊರಾಸ್ ಅವರನ್ನು ಸಾಂಪ್ರದಾಯಿಕವಾಗಿ ಮಕ್ಕಳ ಬ್ಯಾಂಡ್‌ನೊಂದಿಗೆ ಪ್ರಧಾನಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಆನಂತರ ಮಹಾಧರ್ಮಗುರುಗಳು, ಧರ್ಮಾಧ್ಯಕ್ಷರು, ಧರ್ಮಗುರು ಅವರನ್ನು ಪ್ರಧಾನಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆ ಕರೆದುಕೊಂಡು ಹೋದರು.
ಬೆಂಗಳೂರು ಮಹಾಧರ್ಮ ಕ್ಷೇತ್ರದ ಮಹಾಧರ್ಮಾಧ್ಯಕ್ಷರು ಹಾಗೂ ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಾದ ಡಾ.ಬರ್ನಾರ್ಡ್ ಮೊರಾಸ್ ಅವರು ತಮ್ಮ ಗುರು ದೀಕ್ಷೆಯ ಸುವರ್ಣ ಮಹೋತ್ಸವವನ್ನು ಕರ್ನಾಟಕದ ಹಾಗೂ ಇತರೆ ಧರ್ಮಾಕ್ಷರು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಭಕ್ತ ಜನತೆಯ ಸಮ್ಮುಖದಲ್ಲಿ ಬಲಿಪೂಜೆ ಅರ್ಪಿಸುವ ಮೂಲಕ ಸಂಪನ್ನಗೊಳಿಸಿದರು.