ಆಳಂದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ತಾಲೂಕಿನ ಬೆಳಮಗಿ ಗ್ರಾಮದ ಹೊರವಲಯದಲ್ಲಿರುವ ಕಟ್ಟಡಕ್ಕೆ 2014ರಲ್ಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಳಾಂತರವಾದರೂ ಸಿಬ್ಬಂದಿ ಮತ್ತು ಶಿಕ್ಷಕರಿಗೆ ವಸತಿ ಗೃಹದ ಸೌಲಭ್ಯ ಲಭ್ಯವಾಗಿಲ್ಲ. ಹೀಗಾಗಿ ಕೆಲವು ಶಿಕ್ಷಕರು ಶಾಲೆಯ ಕೋಣೆಯ ಮಧ್ಯದಲ್ಲೇ ಮಲಗುವಂತಹ ದುಸ್ಥಿತಿ ಎದುರಾಗಿದೆ.
2008-09ರಲ್ಲಿ ಈ ಶಾಲೆ ಆರಂಭವಾಗಿತ್ತು. ಆ ನಂತರ ಗ್ರಾಮದ ಹೊರವಲಯ ಗುಡ್ಡದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಸ್ವಂತ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾಗಿತ್ತು. ಆದರೆ ಸಿಬ್ಬಂದಿಗೆ ವಾಸಿಸಲು ಇಲ್ಲಿಯ ವರೆಗೂ ವಸತಿ ಗೃಹದ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಅವರು ಪರದಾಡುವಂತೆ ಆಗಿದೆ.
ಮಕ್ಕಳಿಗೆ ಮೀಸಲಾಗಿದ್ದ ಯೋಗ ಕೋಣೆಯಲ್ಲೇ 13 ಶಿಕ್ಷಕರಲ್ಲಿ ಕೆಲವರು ಉಳಿಯುವಂತಾದರೆ, ವಿದ್ಯಾರ್ಥಿನಿಯರ ವಸತಿ ಕೋಣೆಯಲ್ಲೇ ಮಹಿಳಾ ಸಿಬ್ಬಂದಿ ದಿನದೂಡುವಂತೆ ಆಗಿದೆ. ಇನ್ನುಳಿದವರು ಶಾಲೆಯೊಳಗಿನ ಕೋಣೆಯ ಮಧ್ಯದಲ್ಲೇ ಬೆಡ್ ಹಾಸಿಕೊಂಡು ಮಲಗುತ್ತಿದ್ದಾರೆ. 6ರಿಂದ 10ನೇ ತರಗತಿ ವರೆಗಿನ ಈ ಶಾಲೆಯಲ್ಲಿ ತಾಲೂಕಿನ 125ವಿದ್ಯಾರ್ಥಿನಿಯರು, 125 ವಿದ್ಯಾರ್ಥಿಗಳು ಸೇರಿ ವಿವಿಧ ಗ್ರಾಮಗಳ 250 ಮಕ್ಕಳಿದ್ದಾರೆ. ಶಾಲೆಯ 13ಬೋಧಕ ಸಿಬ್ಬಂದಿಯಲ್ಲಿ ಇಬ್ಬರು ಮಹಿಳೆಯರು, 11 ಮಂದಿ ಪುರುಷ ಬೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ 8ಜನ ಅಡುಗೆಗಾಗಿ ಮಹಿಳಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರ ಸೇರಿ ಮೂವರು ಪುರುಷರು ಇದ್ದಾರೆ. ಹಾಸ್ಟೆಲ್ ವಾರ್ಡ್‌ನ್‌ಗೂ ಉಳಿಯಲು ವಸತಿ ಸೌಲಭ್ಯವಿಲ್ಲ. ಒಟ್ಟಾರೆ ಇವರ್ಯಾರಿಗೂ ವಸತಿ ಸೌಲಭ್ಯ ಹಾಗೂ ವಿಶ್ರಾಂತಿಕೋಣೆಯೇ ಇಲ್ಲದೇ ಇರುವುದು ವಿಪರ್ಯಾಸವಾಗಿದೆ.
ಬೆಳಮಗಿ ಮೊರಾರ್ಜಿ ವಸತಿ ಶಾಲೆಯಲ್ಲಿನ ಸಿಬ್ಬಂದಿಗೆ ವಸತಿ ಸೌಲಭ್ಯ ಸಮಸ್ಯೆ ಇರುವ ಕುರಿತು ಗಮನಕ್ಕಿಲ್ಲ. ಎರಡ್ಮೂರು ಬಾರಿ ಭೇಟಿ ನೀಡಿದ್ದೇನೆ. ಆದರೆ ಯಾರೂ ಗಮನಕ್ಕೆ ತಂದಿಲ್ಲ. ಶಾಲೆ ಆವರಣಗೋಡೆಗೆ ಅನುದಾನವಿಟ್ಟು, ಕಾಮಗಾರಿ ಕೈಗೊಳ್ಳಲಾಗುವುದು. ಆದರೆ ಸಿಬ್ಬಂದಿಗೆ ವಸತಿ ಸೌಲಭ್ಯ ಸಮಸ್ಯೆ ಇರುವ ಕುರಿತು ಮಾಹಿತಿಯಿಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
–ಬಸವರಾಜ ಮತ್ತಿಮಡು, ಶಾಸಕ