Advertisement
ಚಂದ್ರಯಾನ-3 ಮತ್ತು ಆದಿತ್ಯ ಎಲ್1 ಯಶಸ್ಸಿನ ಬೆನ್ನಲ್ಲೇ ಪ್ರಕಾಶಮಾನವಾದ ಖಗೋಳ ಎಕ್ಸ್ ಕಿರಣಗಳ ಮೂಲಗಳ ಹಿಂದಿನ ರಹಸ್ಯವನ್ನು ಅರಿಯುವ “ಎಕ್ಸ್‌ಪೋಸ್ಯಾಟ್'(ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಪ್ರಾಜೆಕ್ಟ್ ಬಗ್ಗೆ ಇಸ್ರೋ ಘೋಷಿಸಿದೆ.
ಭೂಮಿಯ ಕೆಳ ಕಕ್ಷೆಯನ್ನು ತಲುಪಲಿರುವ ಈ ಬಾಹ್ಯಾಕಾಶನೌಕೆಯಲ್ಲಿ ಎರಡು ಪ್ರಮುಖ ವೈಜ್ಞಾನಿಕ ಸಲಕರಣೆಗಳು ಇರುತ್ತವೆ. ಈ ಪೈಕಿ ಒಂದು ಪಾಲಿಕ್ಸ್(ಪೋಲಾರಿಮೀಟರ್ ಇನ್‌ಸ್ಟ್ರೆಮೆಂಟ್ ಇನ್ ಎಕ್ಸ್-ರೇಸ್). ಧ್ರುವೀಕರಣದ ಮಟ್ಟ, ಕೋನ ಸೇರಿದಂತೆ ಧ್ರುವೀಯ ಮಾನದಂಡವನ್ನು ಅಳೆಯಲು ಸಾಧ್ಯವಾಗುವಂತೆ ಪಾಲಿಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಧ್ಯಮ ಪ್ರಮಾಣದ(8-30 ಕಿಲೋ ಎಲೆಕ್ಟ್ರಾನ್ ವೋಲ್ಟ್) ಎಕ್ಸ್-ರೇ ಶಕ್ತಿಯತ್ತ ಗಮನ ಕೇಂದ್ರೀಕರಿಸಿರುತ್ತದೆ. ಎರಡನೆಯದ್ದು, ಎಕ್ಸ್‌ಸ್ಪೆಕ್ಟ್(ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಆ್ಯಂಡ್ ಟೈಮಿಂಗ್) ಸಾಧನ. ಇದು 0.8ರಿಂದ 15 ಕಿಲೋ ಎಲೆಕ್ಟ್ರಾನ್ ವೋಲ್ಟ್ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ದತ್ತಾಂಶಗಳನ್ನು ಒದಗಿಸುತ್ತದೆ.
Related Articles
ಕಪ್ಪು ರಂಧ್ರಗಳು, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ತಾರಾಪುಂಜಗಳ ನಾಭಿ, ಪಲ್ಸರ್ ವಿಂಡ್ ನೆಬ್ಯುಲೆ ಸೇರಿದಂತೆ ವಿವಿಧ ಆಕಾಶಕಾಯಗಳ ಕುರಿತು ನಮಗರಿವಿಲ್ಲದ ಕೆಲವು ಮಾಹಿತಿಗಳನ್ನು ಅರಿಯುವುದು ಇಸ್ರೋ ಉದ್ದೇಶವಾಗಿದೆ. ಸ್ಪೆಕ್ಟ್ರೋಸ್ಕೋಪಿಕ್ ಮತ್ತು ಟೈಮಿಂಗ್ ದತ್ತಾಂಶಗಳ ಮೂಲಕ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯಗಳು ಈ ಆಕಾಶಕಾಯಗಳ ಹೊರಸೂಸುವಿಕೆಯ ಕುರಿತು ಸಾಕಷ್ಟು ಒಳನೋಟಗಳನ್ನು ನೀಡಿದ್ದರೂ, ಈ ಹೊರಸೂಸುವಿಕೆಯ ನಿಖರ ಸ್ವರೂಪವು ಇನ್ನೂ ನಿಗೂಢವಾಗಿಯೇ ಉಳಿದಿದೆ. ಅದನ್ನು ಕಂಡುಹಿಡಿಯುವುದೇ ಇಸ್ರೋ ಗುರಿಯಾಗಿದೆ.
Advertisement