Advertisement

ಮೂಲಗೇಣಿ ಕಾಯ್ದೆ ಜಾರಿಯಾಗಿ ದಶಕ : ಮೂಲಗೇಣಿ ಒಕ್ಕಲುಗಳಿಗೆ ಇನ್ನೂ ಸಿಗದ ನ್ಯಾಯ

12:21 PM Nov 03, 2022 | Team Udayavani |

ಮಂಗಳೂರು : ಮೂಲಗೇಣಿ ಒಕ್ಕಲುಗಳಿಗೆ ಮಾಲಕತ್ವ ನೀಡುವ ಕಾಯ್ದೆ 2012ರಲ್ಲೇ ಜಾರಿಯಾಗಿದೆ. ಇದು ನಡೆದು ಒಂದು ದಶಕವೇ ಕಳೆದರೂ ಒಕ್ಕಲುಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅನುಭೋಗಿಸುತ್ತಿರುವ ನೆಲ ಅವರದ್ದಾಗಿಲ್ಲ.

Advertisement

2012ರಲ್ಲಿ ಕಾಯ್ದೆ ಜಾರಿಯಾಗುತ್ತಿದ್ದಂತೆ ಲಕ್ಷಾಂತರ ಮಂದಿ ಒಕ್ಕಲುಗಳು ತಮ್ಮದೇ ಜಾಗದ ಕನಸು ಕಾಣುತ್ತಿದ್ದರು. 2016ರಲ್ಲಿ ಈ ಕುರಿತ ನಿಯಮಗಳ ರಚನೆಯಾಗಿ ಇನ್ನೇನು ಎಲ್ಲವೂ ಸರಿಯಾಗುತ್ತದೆ ಎನ್ನುವಾಗ ಇದರ ವಿರುದ್ಧ ಮೂಲಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿಷಯ ಇತ್ಯರ್ಥವಾಗದೆ 6 ವರ್ಷಗಳೇ ಸಂದಿವೆ.

ಮೂಲಗೇಣಿ ದಾರರಿಗೆ ಮಾಲಕತ್ವ ನೀಡಲು ಕರ್ನಾಟಕ ಮೂಲಗೇಣಿ ಅಥವಾ ಒಳಮೂಲಗೇಣಿದಾರರಿಗೆ ಮಾಲಕತ್ವವನ್ನು ಪ್ರದಾನ ಮಾಡುವ ಅಧಿನಿಯಮ 2011ನ್ನು ಕರ್ನಾಟಕ ರಾಜ್ಯಪತ್ರದಲ್ಲಿ 25-07-2012ರಂದು ಪ್ರಕಟಿಸಿತ್ತು. ಈ ಕುರಿತ ನಿಯಮಾವಳಿ 07-11-2016ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿತ್ತು.

ಸಮಸ್ಯೆಯ ಹಿನ್ನೆಲೆ
ಮೂಲಗೇಣಿ ವ್ಯವಸ್ಥೆ ಕರಾವಳಿಯ ದಕ್ಷಿಣ ಕನ್ನದ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದೆ. ಇದರ ಸುತ್ತಲೇ ಸುತ್ತುತ್ತಿರುವ ಸಮಸ್ಯೆಗೆ ಶತಮಾನದ ಇತಿಹಾಸವಿದೆ. ಬ್ರಿಟಿಷ್‌ ಆಡಳಿತ ಕಾಲದಲ್ಲಿ ಭೂಕಂದಾಯ ವಸೂಲಿ ಮಾಡುವ ಅಧಿಕಾರವನ್ನು ಸ್ಥಳೀಯವಾಗಿ ಪ್ರಭಾವಶಾಲಿ ಶ್ರೀಮಂತರಿಗೆ, ದೇವಸ್ಥಾನ, ಮಸೀದಿ, ಚರ್ಚುಗಳಿಗೆ ನೀಡಲಾಯಿತು. ಹಾಗಾಗಿ ತೀರ್ವೆ ವಸೂಲಿ ಮಾಡಿ ಮೇಲುಸ್ತುವಾರಿ ನೋಡಿಕೊಳ್ಳುವವರು ಪಾರಂಪರಿಕವಾಗಿ ಆ ಭೂಮಿಗೆ ಸಂಬಂಧಿಸಿ ಮೂಲಿದಾರರು ಅನ್ನಿಸಿ ಕೊಂಡರು. ಇದೇ ಭೂಮಿಯನ್ನು ತಲಾಂತರಗಳಿಂದ ವಾಸ್ತವಿಕವಾಗಿ ಅನುಭವಿಸಿಕೊಂಡು ಬಂದವರು ಮೂಲಗೇಣಿದಾರರು ಎಂದು ಭೂಮಿಯ ಪ್ರಮಾಣಪತ್ರದಲ್ಲಿ ನಮೂದಿಸಲಾಯಿತು.

ಸ್ವಾಧೀನವಿರುವ ಭೂಮಿಯ ಮೇಲೆ ಸಂಪೂರ್ಣ ಒಡೆತನವಿಲ್ಲದ ಕಾರಣ ಜಾಗವನ್ನು ಅಭಿವೃದ್ಧಿ ಪಡಿಸಲು ಕಷ್ಟ. ಬ್ಯಾಂಕ್‌ನಿಂದ ಸಾಲ ಪಡೆಯಲು ಬಹಳ ಕಷ್ಟ. ಮಾರುವ ಹಕ್ಕು ಪೂರ್ತಿಯಾಗಿ ಮೂಲಗೇಣಿದಾರನಿಗೆ ಇಲ್ಲ. ಇದರಿಂದಾಗಿ ಈ ಉಭಯ ಜಿಲ್ಲೆಯಲ್ಲಿರುವ ನೂರಾರು ಎಕರೆ ಭೂಮಿ ನಿರುಪಯುಕ್ತವಾಗುತ್ತಿದೆ ಮಾತ್ರವಲ್ಲ, ಮೂಲಗೇಣಿದಾರರು ತ್ರಿಶಂಕು ಸ್ಥಿತಿಯಲ್ಲಿ ಬದುಕುವ ಅನಿವಾರ್ಯದಲ್ಲಿದ್ದಾರೆ.

Advertisement

ಮೂಲಗೇಣಿದಾರರ ಅನೇಕ ವರ್ಷಗಳ ಹೋರಾಟದ ಫಲವಾಗಿ ಮೂಲಗೇಣಿದಾರರಿಗೆ ಜಮೀನಿನ ಪೂರ್ಣ ಮಾಲಕತ್ವ ಹಾಗೂ ಮೂಲಿದಾರರಿಗೆ ನ್ಯಾಯಯುತ ಪರಿಹಾರ (ಗೇಣಿಯ 500 ಅಥವಾ 1,000 ಪಟ್ಟು) ನೀಡುವ ಕಾಯ್ದೆ ಜಾರಿಗೆ ಬಂದಿತ್ತು.

ಇದನ್ನೂ ಓದಿ : ತೀರ್ಥಹಳ್ಳಿ: ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಉಗ್ರ ಹೋರಾಟ; ಪಿ.ಮಂಜುನಾಥ್

ಸರಕಾರ ಆಸಕ್ತಿ ವಹಿಸಲಿ
ನ್ಯಾಯಾಲಯದಲ್ಲಿ ಮೂಲಿದಾರರು ಪರಿಹಾರದ ಪ್ರಮಾಣದ ಬಗ್ಗೆ ತಕರಾರು ಮಾಡಿ ವಿರುದ್ಧ ದಾವೆ ಹೂಡಿದ್ದು, ಅದು ಇನ್ನೂ ವಿಚಾರಣೆಯ ಹಂತದಲ್ಲಿಯೇ ಇದೆ. ಸರಕಾರ ಮನಸ್ಸು ಮಾಡಿದ್ದರೆ ಇದರ ವಿಚಾರಣೆಗೆ ವೇಗ ತರುವ ಕೆಲಸ ಮಾಡಬಹುದಿತ್ತು ಎನ್ನುತ್ತಾರೆ ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಮಂಗಳೂರು ವಿಭಾಗದ ಅಧ್ಯಕ್ಷ ಮ್ಯಾಕ್ಸಿಂ ಡಿಸಿಲ್ವ ಮತ್ತು ಉಡುಪಿ ವಿಭಾಗದ ಅಧ್ಯಕ್ಷ ಎಸ್‌.ಎಸ್‌. ಶೇಟ್‌. ಪ್ರಸ್ತುತ ಮಂಗಳೂರಿನ ಡಾನ್‌ಬಾಸ್ಕೊ ಕಟ್ಟಡದ ಮೊದಲ ಮಹಡಿಯಲ್ಲಿ ವೇದಿಕೆಯ ಕಚೇರಿ ಕಾರ್ಯಾಚರಿಸುತ್ತಿದೆ, ಅಗತ್ಯ ವಿರುವವರು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹೊಸ ಪೀಠದಲ್ಲಿ ವಿಚಾರಣೆ ಸಾಧ್ಯತೆ
ಈಗಾಗಲೇ ಒಬ್ಬರು ನ್ಯಾಯಾಧೀಶರಿಂದ ವಿಚಾರಣೆ ಪೂರ್ಣಗೊಂಡಿದೆ. ಆಗ ಮುಖ್ಯ ನ್ಯಾಯಾಧೀಶರು ಬದಲಾದರು. ಹೊಸ ಮುಖ್ಯ ನ್ಯಾಯಾಧೀಶರು, ಈ ದಾವೆಯು ಹೊಸ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠದಿಂದ ವಿಚಾರಣೆ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಆ ಬಳಿಕ ಮತ್ತೆ ಏಕ ಸದಸ್ಯ ಪೀಠ ಆಗಬಹುದು ಎಂಬ ಅಭಿಪ್ರಾಯ ಬಂದಿದೆ. ಹೊಸ ಪೀಠ ರಚನೆಯಾಗಿದೆ, ವಿಚಾರಣೆ ಮುಂದುವರಿಯಬೇಕಿದೆ.
– ಎಂ.ಕೆ. ವಿಜಯ್‌ಕುಮಾರ್‌, ವಕೀಲರು, ಮೂಲಗೇಣಿ ಹಿತರಕ್ಷಣ ವೇದಿಕೆ

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next