Advertisement

ಮೂಡಬಿದಿರೆಯಲ್ಲಿ ಶ್ರಮಣ ಸಂಸ್ಕೃತಿ ಸಮ್ಮೇಳನ

12:53 PM Apr 13, 2017 | Harsha Rao |

ಮೂಡಬಿದಿರೆ: ಜೈನ ಧರ್ಮ, ಸಂಸ್ಕೃತಿಗೆ ಸಂಬಂಧಿಸಿದ 4,000ಕ್ಕೂ ಅಧಿಕ ತಾಡವೋಲೆ ಗ್ರಂಥಗಳಿರುವ ರಮಾರಾಣಿ ಶೋಧ ಸಂಸ್ಥಾನಕ್ಕೆ ಕನಿಷ್ಠ ಒಂದು ಕೋಟಿ ರೂ. ಅನುದಾನ ನೀಡಲು ಮತ್ತು ವಿಶೇಷ ನಿರ್ದೇಶಕರನ್ನು ನಿಯೋಜಿಸಲು ಸರಕಾರ ಮುಂದಾಗಬೇಕು ಎಂದು ಶ್ರೀ ಜೈನಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

Advertisement

ಸಾವಿರಕಂಬದ ಬಸದಿಯಲ್ಲಿ ಮಂಗಳವಾರ ರಾತ್ರಿ ನಡೆದ ಶ್ರಮಣ ಸಂಸ್ಕೃತಿ ಸಮ್ಮೇಳನದಲ್ಲಿ ಆಶೀರ್ವಚನವಿತ್ತ ಅವರು ಸ್ವಾಧ್ಯಾಯ, ತಪ, ಭಕ್ತಿ ಮೂಲಕ ಚಾರಿತ್ರವನ್ನು ಉಜ್ವಲಗೊಳಿಸಲು ಪ್ರಯತ್ನಿಸಬೇಕು, ಉತ್ತಮ ಚಾರಿತ್ರ ಹೊಂದಿದವರೇ ಶ್ರಮಣರು’ ಎಂದು ನುಡಿದರು.

ಬಸದಿ ಹೊರಾಂಗಣಕ್ಕೆ ಶಿಲಾಹಾಸು: ಅಭಯಚಂದ್ರ
ಈಗಾಗಲೇ ರೂ. ಒಂದು ಕೋಟಿ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಿದ್ದು ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ರೂ. 70 ಲಕ್ಷ ಒದಗಿಸುವ ಜತೆಗೆ ಸಾವಿರ ಕಂಬದ ಬಸದಿಯ ಹೊರಾಂಗಣಕ್ಕೆ ಕಲ್ಲು ಹಾಸಲು ಪ್ರತ್ಯೇಕ ಅನುದಾನ ನೀಡಲು ಪ್ರಯತ್ನಿಸುವುದಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಅಭಯಚಂದ್ರ ಹೇಳಿದರು ಹಿರಿಯ ವಕೀಲ ಕಾರ್ಕಳದ ಎಂ.ಕೆ. ವಿಜಯಕುಮಾರ್‌ ಅವರು ಶ್ರಮಣ ಸಂಸ್ಕೃತಿ ಸಮ್ಮೇಳನವನ್ನು ಉದ್ಘಾಟಿಸಿದರು.

ಸರ್ವಜೀವಿಗಳನ್ನೂ ರಕ್ಷಿಸುವ ಧರ್ಮವೇ ಶ್ರಮಣ ಸಂಸ್ಕೃತಿಯ ಮೂಲ ಎಂದು ಹೇಳಿದ ಅವರು ಅಹಿಂಸೆಯನ್ನು ಪ್ರತಿಪಾದಿಸಿದ ಈ ನಾಡಿನಲ್ಲಿ ಗೋ ಹತ್ಯೆ ನಡೆಯುತ್ತಿರುವುದನ್ನು ಸಾರ್ವಜನಿಕವಾಗಿ ಪ್ರತಿಪಾದಿಸುವವರೂ ಇದ್ದಾರೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಮಂಗಳೂರು, ಬಿ. ವಿಮಲ್‌ ಕುಮಾರ್‌ ಮೂಡಬಿದಿರೆ, ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಶಿರ್ತಾಡಿ, ಉದ್ಯಮಿ ಪುಷ್ಟರಾಜ್‌ ಜೈನ್‌ ಮಂಗಳೂರು, ವಿಜಯಲಕ್ಷ್ಮೀ ಆರಿಗ ಭಾಗಧಿವಹಿಸಿದರು. ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್‌ ಕುಮಾರ್‌, ಆನಡ್ಕ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು. ಅಂಡಾರು ಗುಣಪಾಲ ಹೆಗ್ಡೆ ನಿರೂಪಿಸಿ, ಪ್ರೊ| ಸುದರ್ಶನ್‌ ಕುಮಾರ್‌ ವಂದಿಸಿದರು. ಬಳಿಕ ಹಿರಿಯ ರಥೋತ್ಸವ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next