ಮೂಡುಬಿದಿರೆ: ಶುದ್ಧ ಹವೆಗಾಗಿ ಬಹಳ ಹಿಂದಿನಿಂದಲೂ ಹೆಸರಾಗಿರುವ ಮೂಡುಬಿದಿರೆಯಲ್ಲಿ ಅಲ್ಲಲ್ಲಿ ಪಾರ್ಕ್‌ಗಳನ್ನು ನಿರ್ಮಿಸ ತೊಡಗಿ ಐದು ದಶಕಗಳೇ ಸಂದಿವೆ. ಜ್ಯೋತಿನಗರದ ಗಾಂಧಿ ಜನ್ಮ ಶತಾಬ್ಧ ಪಾರ್ಕ್, ಮಹಾವೀರ ಕಾಲೇಜು ಬಳಿಯ ಕೀರ್ತಿ ನಗರದಲ್ಲಿರುವ ರೋಟರಿ ಟೆಂಪಲ್ ಟೌನ್ ಪಾರ್ಕ್ ಇಂತಹ ಉದ್ಯಾನವನಗಳು, ಕಡಲಕೆರೆಯಲ್ಲಿ ಹೊಸದಾಗಿ ತೆರೆದುಕೊಂಡಿರುವ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್, ಬದಿಯಲ್ಲೇ ಇರುವ ಬಿದಿರು ವನ ಜನಮನ ಸೆಳೆಯುತ್ತಿವೆ. ಆದರೆ, ಜನವಸತಿ ಪ್ರದೇಶಗಳ ಪರಿಸರದ ಕೆಲವು ಉದ್ಯಾನವನಗಳು ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ಅವುಗಳ ಸೌಂದರ್ಯವನ್ನು ಕಳೆದುಕೊಳ್ಳುತ್ತಿವೆ.
ಹುಡ್ಕೋ ಕಾಲನಿ
ಹುಡ್ಕೋ ಕಾಲನಿಯ ಉದ್ಯಾನವನದಲ್ಲಿ ಹುಲ್ಲು ಬೆಳೆದು ನಿಂತಿದೆ. ಇದರಿಂದ ಸರೀಸೃಪಗಳು ಅಡಗಿರುವ ಭೀತಿಯಿದೆ. ಹೂವಿನಗಿಡಗಳಿದ್ದರೂ, ಆಕರ್ಷಣೀಯವಾಗಿಲ್ಲ. ಜೋಕಾಲಿ, ಜಾರುಬಂಡಿ ಮತ್ತಿತರ ಆಟದ ಪರಿಕರ, ವ್ಯವಸ್ಥೆಗಳು ನಾ ದುರಸ್ತಿಯಾಗಿವೆ. ಪಾರ್ಕ್ ಒಂದು ಮೂರು ಬಾಗಿಲು ಎಂಬಂತಿದೆ. ಎರಡು ದ್ವಾರಗಳು ಬಂದ್ ಆಗಿ, ಬೀಗಗಳಿಗೆ ತುಕ್ಕು ಹಿಡಿದಿದೆ. ಇಡೀ ಪಾರ್ಕ್ ನಿರ್ವಹಣೆಯಿಲ್ಲದೇ ಸೊರಗುತ್ತಿವೆ.
ಜ್ಯೋತಿ ನಗರ ಸಂಗಮ ಸ್ಥಾನ ವೃತ್ತ
ಜ್ಯೋತಿ ನಗರದಲ್ಲಿ ಮೂರು ಮಾರ್ಗಗಳ ಸಂಗಮ ಸ್ಥಾನದ ವೃತ್ತದ ಬಳಿ ಇರುವ ಪುಟ್ಟ ಪಾರ್ಕ್ ಹಲವರ ಪೋಷಣೆಯ ಶಿಶುವಾಗಿ ಬೆಳೆಯುತ್ತ ಬಂದಿದ್ದು ಕೆಲವರು ಹೊಸವರ್ಷಾಚರಣೆ ಮಾಡುವ, ಕೆಲವರು ಗಿಡಮೂಲಿಕೆ ಗಳನ್ನು ನೆಡುವುದೇ ಮೊದಲಾದ ಕಾರ್ಯಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಒಂದಷ್ಟು ತರಗೆಲೆ ರಾಶಿ ಬಿದ್ದಿದೆ. ಜಾರು ಬಂಡಿಯಲ್ಲೂ ತರಗೆಲೆ ರಾಶಿ. ಮಕ್ಕಳ ಜೋಕಾಲಿಯ ಹಲಗೆ ಕುಂಬಾಗಿ ಜೀರ್ಣವಾಗಿ ಅಪಾಯಕಾರಿಯಾಗಿದೆ.
ಸೌಲಭ್ಯ ಒದಗಿಸಿ
ಬೆಳೆದ ಹುಲ್ಲನ್ನೇನೋ ಕತ್ತರಿಸಿ ಹಾಕಿದ್ದಾರೆ. ಉಳಿದಂತೆ ಉದ್ಯಾನವನ ಅನಾಕರ್ಷಕಣೀಯವಾಗಿದೆ. ಪುರಸಭೆಯ ಕಡೆಯಿಂದ ನೀರು ಹಾಯಿಸಲಾಗುತ್ತಿದೆ. ಉಳಿದಂತೆ ಈ ಪಾರ್ಕ್‌ನಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.
ಇಂತಹ ಪಾರ್ಕ್‌ಗಳಿಗೆ ಪುರಸಭೆಯಾಗಲೀ, ಸ್ಥಳೀಯ ಸಂಘಟನೆಗಳಾಗಲೀ ನಡೆಸಬಹುದಾದ ಕಾಯಕಲ್ಪ ಪ್ರಕ್ರಿಯೆಯಲ್ಲಿ ಸ್ಥಳೀಯ ಯುವಮನಸ್ಸುಗಳೂ ಕೈಜೋಡಿಸಲು ಮುಂದೆ ಬರಬೇಕಾಗಿದೆ.
13 ಲಕ್ಷ ರೂ. ವೆಚ್ಚದ ಪಾರ್ಕ್‌ಗಿಲ್ಲ ಪೋಷಣೆ!
ಹುಡ್ಕೋ ಪ್ರಾಂತ್ಯ ಶಾಲೆಯ ಉತ್ತರಕ್ಕೆ ಹುಡ್ಕೋ ಕಾಲನಿಯ ಇನ್ನೊಂದು ಭಾಗದಲ್ಲಿ 2016ರಲ್ಲಿ ಪುರಸಭೆಯಿಂದ 13ನೇ ಹಣಕಾಸು ಯೋಜನೆಯಡಿ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನವು ದಿನೇ ದಿನೇ ತನ್ನ ಸೌಂದರ್ಯವನ್ನು ಕಳೇದುಕೊಳ್ಳುತ್ತಿದೆ. ಗಿಡಗಳ ಪೋಷಣೆಗೆ ನೀರೊಂದು ಬಿಟ್ಟು ಬೇರೇನೂ ವ್ಯವಸ್ಥೆ ಇರುವಂತೆ ಕಾಣುವುದಿಲ್ಲ. ಅಲ್ಲದೇ, ಈ ಪಾರ್ಕ್‌ಗೆ ನಿಗದಿತ ವೇಳಾ ಪಟ್ಟಿ ಇಲ್ಲ. ಕಬ್ಬಿಣದ ಈಟಿಗಳಂತಿರುವ ಗ್ರಿಲ್‌ಗಳ ಸಾಲುಹೊತ್ತ ಆವರಣ ಗೋಡೆಯನ್ನು ಹಾರಿ ಬಂದು ಪಾರ್ಕ್ ಪ್ರವೇಶ ಮಾಡಿ ರಾತ್ರಿ ಹತ್ತಾದರೂ ಹೊರಡದೆ, ಪರಿಸರದ ಪ್ರಶಾಂತತೆಗೆ ಧಕ್ಕೆ ತರುವ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಈ ಪಾರ್ಕ್‌ನ ಸುತ್ತ ಸುಳಿದಾಡುತ್ತಿದೆ. ಈ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೂ ಬಂದಿದ್ದರೂ, ಪಾರ್ಕ್‌ನ್ನು ಸುಸ್ಥಿತಿಗೆ ತರುವ, ಅಭಿವೃದ್ಧಿಗೊಳಿಸುವ ಸಂಗತಿಗಳು ಪ್ರಗತಿ ಕಂಡಿಲ್ಲ
ಧನಂಜಯ ಮೂಡುಬಿದಿರೆ