ಮೂಡಬಿದಿರೆ: ಏಳು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ರಕ್ಷಣಾ ಇಲಾಖೆಗೆ ಸೇರಿದ್ದ 28.35 ಎಕ್ರೆ ವಿಸ್ತೀರ್ಣವಿರುವ ಸ್ವರಾಜ್ಯ ಮೈದಾನವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ ಕ್ರಮವನ್ನು ರಕ್ಷಣಾ ಇಲಾಖೆಯ ರಾಜ್ಯ ಕಚೇರಿ (ಡಿಫೆನ್ಸ್ ಎಸ್ಟೇಟ್ಸ್ ಆಫೀಸ್) ಅಸಿಂಧು ಎಂದು ಘೋಷಿಸಿದ್ದು, ತತ್‌ಕ್ಷಣವೇ ಸ್ವರಾಜ್ಯ ಮೈದಾನದ ಆರ್‌ಟಿಸಿಯನ್ನು ರಕ್ಷಣಾ ಇಲಾಖೆ ಹೆಸರಿಗೆ ತಿದ್ದುಪಡಿ ಮಾಡಿ ರಕ್ಷಣಾ ಇಲಾಖೆಗೆ ಒಪ್ಪಿಸುವಂತೆ ಸೂಚಿಸಿದೆ. ಈ ಮೂಲಕ ಸೋಮವಾರ ಹೆಚ್ಚು ಕಡಿಮೆ ಯೋಜಿತವಾಗಿ ನಡೆದ ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆಗೆ ಹೊಸ ಆಯಾಮ ದೊರಕಿದಂತಾಗಿದೆ.
ನ. 3ರ ದಿನಾಂಕ ಹೊತ್ತ ಪತ್ರದ ಪ್ರತಿಗಳು ಕ್ರಮವಾಗಿ ರಾಜ್ಯ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ, ಮೂಡಬಿದಿರೆ ತಹಶೀಲ್ದಾರ್, ಸಾಮಾಜಿಕ ಕಾರ್ಯಕರ್ತ ಸುದರ್ಶನ ಎಂ. ಹಾಗೂ ಸ್ವರಾಜ್ಯ ಮೈದಾನ ಹೋರಾಟ ಸಮಿತಿಯ ಸಂಚಾಲಕ ವಕೀಲ ಚೇತನ್ ಕುಮಾರ್ ಶೆಟ್ಟಿ ಅವರಿಗೆ ರಿಮೈಂಡರ್ ತ್ರೀ-ಮೋಸ್ಟ್ ಅರ್ಜೆಂಟ್ /ಸ್ಪೀಡ್ ಪೋಸ್ಟ್‌ನಲ್ಲಿ ರವಾನಿಸಲ್ಪಟ್ಟಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇತನ್ ಕುಮಾರ್ ಶೆಟ್ಟಿ, ತಮಗೆ ಈ ಪತ್ರದ ಪ್ರತಿ ನ. 4ರಂದು ಬಂದಿದ್ದು ಆ ಪ್ರಕಾರ ನ. 14ರೊಳಗೆ ಜಿಲ್ಲಾಧಿಕಾರಿ ಯವರು ಸ್ವರಾಜ್ಯ ಮೈದಾನದ ಆರ್‌ಟಿಸಿಯನ್ನು ರಕ್ಷಣಾ ಇಲಾಖೆಯ ಹೆಸರಿಗೆ ಮಾಡಿಕೊಡಬೇಕಾಗಿದೆ ಎಂದು ಪತ್ರದ ಪ್ರತಿಯನ್ನು ಪ್ರದರ್ಶಿಸಿದರು.
ಕ್ರೀಡೆ, ಧಾರ್ಮಿಕ, ರಾಜಕೀಯ ಚಟುವಟಿಕೆಗಳಿಗೆ ಸೂಕ್ತ ಅವಕಾಶ ಕಲ್ಪಿಸುತ್ತಿದ್ದ ಸ್ವರಾಜ್ಯ ಮೈದಾನದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣದ ಬಗ್ಗೆ ನಿರ್ಣಯವಾಗಿದೆಯೇ? ತಾತ್ಕಾಲಿಕವೋ? ತಾತ್ಕಾಲಿಕ ನಿರ್ಮಾಣ ಮಾಡಿದವರಾರು? ಎಷ್ಟು ಮೊತ್ತದಲ್ಲಿ ಈ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣವಾಗಿದೆ? ಎಂದು ಚೇತನ್ ಕುಮಾರ್ ಪ್ರಶ್ನಿಸಿದರು. ಮೈದಾನ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದಕ್ಕೆ ತಮ್ಮ ವಿರೋಧವೇ ಹೊರತು ಅಲ್ಲಿನ ಸ್ಟೇಡಿಯಂ ಮತ್ತು ಇತರ ಕ್ರೀಡಾ ಚಟುವಟಿಕೆಗಳಿಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಮಿತಿ ಸಹಸಂಚಾಲಕ ಸೋಮನಾಥ ಕೋಟ್ಯಾನ್ ಮಾತನಾಡಿ, ಯಾವುದೇ ನೋಟಿಸ್ ಕೊಡದೆ, ಸೋಮವಾರ ಪೊಲೀಸ್ ದಬ್ಟಾಳಿಕೆಯೊಂದಿಗೆ, ಅಂಗಡಿಗಳಿಗೆ ಬೀಗ ಹಾಕಿ, ಎತ್ತಂಗಡಿ ಮಾಡಿಸ ಲಾಗಿದೆ, ಇದು ಅಮಾನವೀಯ ಎಂದರು.
ಸುತ್ತಲೂ ಆವರಿಸಿರುವ ರಸ್ತೆಗಾಗಿ ಕಾನೂನು ಪ್ರಕಾರ ಬಿಟ್ಟುಬಿಡಬೇಕಾದ ಜಾಗವನ್ನು ಲೆಕ್ಕಿಸಿದರೆ ಅಷ್ಟು ಜಾಗ ಬಿಟ್ಟು ಉಳಿದ ಎಷ್ಟು ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಲು ಸಾಧ್ಯ? ಇಷ್ಟಕ್ಕೂ ಪ್ರಾಚ್ಯವಸ್ತು ಇಲಾಖೆ, ಹೆದ್ದಾರಿ ಪ್ರಾಧಿಕಾರದೆದುರು ಬಂದಿರುವ ಆಕ್ಷೇಪಣೆಗಳ ನಡುವೆ ಹೇಗೆ ಮಾರುಕಟ್ಟೆ ನಿರ್ಮಾಣವಾಗಲು ಸಾಧ್ಯ? ಎಂಬಿತ್ಯಾದಿ ಸಂಶಯಗಳನ್ನೂ ಅವರು ವ್ಯಕ್ತಪಡಿಸಿದರು.
ಸದಸ್ಯ ಗೋಪಾಲ ಶೆಟ್ಟಿಗಾರ್ ಅವರು ಕಳೆದ 3 ವರ್ಷಗಳಿಂದಲೂ ಮಾರುಕಟ್ಟೆ ಅಂಗಡಿಗಳ ಪರವಾನಿಗೆ ನವೀಕರಿಸಿಲ್ಲ, ಸ್ಥಳಾಂತರದ ಫಲಾನುಭವಿಗಳು ಯಾರ್ಯಾರು ಎಂಬ ಪಟ್ಟಿಯನ್ನೂ ಕೊಟ್ಟಿಲ್ಲ’ ಎಂದು ಆಪಾದಿಸಿದರು. ಸದಸ್ಯ ಅಮರ್ ಕೋಟೆ ಅವರು ಉಪಸ್ಥಿತರಿದ್ದರು.