Advertisement

ಮೂಲ್ಕಿ ನಗರ ಪಂಚಾಯತ್‌ನ ಮಾಸಿಕ ಸಭೆ

11:42 AM Jan 06, 2018 | Team Udayavani |

ಮೂಲ್ಕಿ: ಇಲ್ಲಿನ ನಗರ ಪಂಚಾಯತ್‌ನ ಮಾಸಿಕ ಸಭೆಯು ಅಧ್ಯಕ್ಷ ಸುನೀಲ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಚಿತ್ರಾಪು ಮತ್ತು ಬಪ್ಪನಾಡು ಗ್ರಾಮದ ಕುದ್ರು ಮುಂತಾದೆಡೆ ಫಲವತ್ತಾದ ಭೂಮಿಗೆ ಉಪ್ಪು ನೀರು ನುಗ್ಗುವುದನ್ನು ತಡೆಯಲು ಸಣ್ಣ ನೀರಾವರಿ ಇಲಾಖೆಗೆ ಕೇಳಿಕೊಂಡರೆ, ಇದೆಲ್ಲ ನ.ಪಂ.ನಿಂದ ಮಾತ್ರ ಸಾಧ್ಯ ನಮ್ಮಲ್ಲಿ ಅವಕಾಶ ಇಲ್ಲ ಎಂಬ ಉತ್ತರ ಬರುತ್ತಿದೆ. ಆದುದರಿಂದ ಆದಷ್ಟು ಪ್ರಮಾಣದಲ್ಲಿ ತಾತ್ಕಾಲಿಕ ಯೋಜನೆಗಳನ್ನು ನಡೆಸಿ ಭೂಮಿ ಉಳಿಸಿಕೊಳ್ಳಲು ಪಂಚಾಯತ್‌ ತೀರ್ಮಾನಿಸಿತು.

ನ.ಪಂ. ವ್ಯಾಪ್ತಿಯಲ್ಲಿ ಶಾಸಕರ ಅನುದಾನದಿಂದ ನಡೆಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿದಿಗಳನ್ನು ಆಮಂತ್ರಿಸುವುದಿಲ್ಲ ಇದು ಸರಿಯಲ್ಲ ಎಂದು ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌ ಹೇಳಿದರು. ಉತ್ತರಿಸಿದ ವಿಮಲಾ ಪೂಜಾರಿ ನೀವು ಕೂಡಾ ಇದನ್ನೆ ಮಾಡುತ್ತಿರಿ. ಆದರೆ ನಾವು ತಪ್ಪು ಮಾಡಿರುವುದನ್ನು ಮುಂದೆ ಸರಿಪಡಿಸುವ ಭರವಸೆಯಿತ್ತರು. ಕಾರ್ನಾಡು ಸದಾಶಿವ ರಾವ ನಗರ ಪರಿಸರದ ಬಾರ್‌ಗಳಿಗೆ ನೀಡಿದ ಶೋಕಾಸ್‌ ನೋಟಿಸುಗಳಿಗೆ ಬಂದಿರುವ ಉತ್ತರವನ್ನು ಸಭೆಯಲ್ಲಿ ತಿಳಿಸಲಾಯಿತು. ಈ ಬಗ್ಗೆ ಮುಂದಿನ ಕ್ರಮ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು. ನ.ಪಂ.ನ ಪೌರ ಕಾರ್ಮಿಕರಿಗೆ ಸುರಕ್ಷೆ ಪರಿಕರ ಮತ್ತು ಸಮವಸ್ತ್ರಗಳನ್ನು ವಿತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಮುಂದಿನ ಅವಧಿಗೆ ಎಂಟು ಮಂದಿ ಸದಸ್ಯರ ಸ್ಥಾಯೀ ಸಮಿತಿ ಸದಸ್ಯರನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯಾಧಿಕಾರಿ ಇಂದು ಎಂ. ಅವರು ಸಭೆಯ ನಡವಳಿಕೆ ದಾಖಲಿಸಿಕೊಂಡರು. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್‌ ಶೆಟ್ಟಿ ಜಿ.ಎಂ. ಮತ್ತು ನ.ಪಂ.ನ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೀರಿನ ಕೊರತೆ 
ಸರಕಾರಿ ಆಸ್ಪತ್ರೆಯ ಬಳಕೆಯ ನೀರಿನ ಕೊರತೆ ಹೆಚ್ಚಾಗಿದೆ. ನ.ಪಂ. ನಿಂದ ಇದಕ್ಕೆ ಸಹಕಾರ ನೀಡಬೇಕು ಎಂದು ಮೂಲ್ಕಿ ನಗರ ಪಂಚಾಯತ್‌ ನ ಮಾಸಿಕ ಸಭೆಯಲ್ಲಿ ವೈದ್ಯಾಧಿಕಾರಿ ಡಾ| ಮಧುಸೂದನ್‌ ಮನವಿ ಮಾಡಿದರು. ನಗರ ಪಂಚಾಯತ್‌ ಈಗಾಗಲೇ ನೀರಿನ ಸಂಪರ್ಕ ಕೊಟ್ಟಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಲು ತೀರ್ಮಾನಿಸಿತು.

Advertisement

ಪ್ರತಿಭಟನೆಗೆ ಸ್ಪಂದನೆ
ಕಾರ್ನಾಡು ಸದಾಶಿವ ರಾವ್‌ ನಗರದ ಜನರ ನೀರಿನ ಪ್ರತಿಭಟನೆಗೆ ನಗರ ಪಂಚಾಯತ್‌ ಸ್ಪಂದಿಸಿದೆ ಎಂದು ನಗರ ಪಂಚಾಯತ್‌ನ ವಿಪಕ್ಷ ನಾಯಕಿ ವಿಮಲಾ ಪೂಜಾರಿ ಕೃತಜ್ಞತೆ ಸೂಚಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅಧ್ಯಕ್ಷ ಸುನೀಲ್‌ ಆಳ್ವ ಪ್ರತಿಭಟನೆಗೆ ಸ್ಪಂದಿಸಿ ಈ ಕ್ರಮ ನಡೆದಿಲ್ಲ. ನೀವು ಪ್ರತಿಭಟನೆ ನಡೆಸುವ ದಿನದಂದೂ ನೀರಿನ ಸಮಸ್ಯೆಯ ಬಗ್ಗೆ ಇರಲಿಲ್ಲ. ಕಾಮಗಾರಿ ಪೂರ್ಣಗೊಂಡಿದ್ದು , ಕೇವಲ ಸ್ವಿಚ್‌ ಹಾಕುವ ಕೆಲಸ ಬಾಕಿಯಿತ್ತು ಅದನ್ನು ಮಾಡಿದ್ದೇವೆ ಎಂದರು. ಇದೆಲ್ಲ ಗೊತ್ತಿದ್ದರೂ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂದಾಗ ನನಗೆ ಈ ವಿಷಯ ಗೊತ್ತೆ ಇಲ್ಲ ಎಂದು ವಿಮಲಾ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next