ಬೀದರ: ಬದುಕಿನ ನಿಜದ ನಿಲುವನ್ನು ಅರಿಯಲಾರದೆ ಮಾನವ ಪವಿತ್ರವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ. ಶರಣರ ಸತ್ಸಂಗದಲ್ಲಿದ್ದಾಗ ಮನಸ್ಸು ಘನ ಮನಸ್ಸಾಗುತ್ತದೆ ಎಂದು ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು ನುಡಿದರು.
ನಗರದ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ನಡೆದ 137ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಂತಹ ಬಡತನವಿದ್ದರೂ ದೇವರು ನಮಗೆ ಕೊಟ್ಟಿರುವುದರಲ್ಲಿಯೇ ಸಮಾಧಾನ, ಸಂತೃಪ್ತಿ ಮತ್ತು ಆನಂದದಿಂದಿ ರಬೇಕು. ನಮ್ಮ ಹೃದಯದಿಂದ ನಗು ಬರುವಂತಿರಬೇಕು. ಸದಾ ಪ್ರಸನ್ನ ಚಿತ್ತದಿಂದಿರಬೇಕು. ಆವಾಗ ಮಾತ್ರ ಜೀವನ ಯಾತ್ರೆ ಪಾರಮಾರ್ಥಿಕತೆಯೆಡೆಗೆ ಸಾಗುತ್ತದೆ ಎಂದರು.
ವೈದ್ಯಾಧಿಕಾರಿ ಡಾ| ಕೈಲಾಸ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಯೊಬ್ಬರು ಧ್ಯಾನ, ಶರಣರ ಸತ್ಸಂಗ ಮಾಡುವುದರಿಂದ ಕಾಯಾ, ವಾಚಾ, ಮನಸಾ ಶುದ್ಧೀಕರಣವಾಗುತ್ತದೆ. ಉಸಿರಾಟದ ಮೇಲೆ ಮನಸ್ಸು ಕೇಂದ್ರಿಕೃತ ಮಾಡಿಕೊಂಡು ಧ್ಯಾನ ಮಾಡಬೇಕು. ನಮ್ಮ ಮನಸ್ಸು ಖಾಲಿಯಾಗಿದ್ದಾಗ ಮಾತ್ರ ಪ್ರಕೃತಿಯಲ್ಲಿನ ಆಗಾಧವಾದ ವಿಶ್ವಪ್ರಾಣ ಶಕ್ತಿಯು ನಮ್ಮ ಬ್ರಹ್ಮರಂದ್ರದ ಮೂಲಕ ನಮ್ಮ ದೇಹದೊಳಗೆ ಪ್ರವೇಶಿಸುತ್ತದೆ. ಇದರಿಂದ ನಮ್ಮ ಅಂತರಂಗದಲ್ಲಿ ಆಧ್ಯಾತ್ಮಿಕ ಮಹಾಶಕ್ತಿಯು ಪ್ರಕಟಗೊಳ್ಳುತ್ತದೆ ಎಂದು ತಿಳಿಸಿದರು.
ಸುವರ್ಣಾ ಚಿಮಕೋಡೆ ಅವರು ಅನುಭಾವ ಮಂಡಿಸಿ, ಶರಣರ ವಚನಗಳಲ್ಲಿ ಜ್ಞಾನ ಮತ್ತು ಅನುಭಾವದ ಸಾಗರವಿದೆ. ಜಗತ್ತು ಹೇಗೆ ಬದುಕಬೇಕೆಂಬುವುದು ಶರಣರ ವಚನಗಳು ನಮಗೆ ತಿಳಿಸಿಕೊಡುತ್ತವೆ. ಮಾನವ ಧನ, ಧರೆ ಮತ್ತು ಮಾನಗಳೆಂಬ ಮೂರು ಸಂಕೋಲೆಗಳಿಂದ ಹೊರಬಂದು ಆತ್ಮಸಾಕ್ಷಿಯಿಂದ ಹೆದರದೆ, ಬೆದರದೆ ಶರಣರಂತೆ ಪ್ರಸನ್ನ ಚಿತ್ತದಿಂದ ಜೀವನ ನಡೆಸಿಕೊಂಡು ಪರಮಾನಂದ ಪಡೆಯಬೇಕೆಂದರು.
ಮಹಾನಂದಾ ಪ್ರೊ| ಪಂಡಿತ ಪಾಟೀಲ ಅವರು ಬಸವ ಪೂಜೆ ನಡೆಸಿಕೊಟ್ಟರು. ಮಹಾಲಿಂಗ ಸ್ವಾಮಿಜಿ ನೇತೃತ್ವ ವಹಿಸಿದ್ದರು. ಡಾ| ನಾಗೇಶ ಪಾಟೀಲ ದಂಪತಿಗೆ ಸನ್ಮಾನಿಸಲಾಯಿತು. ಪ್ರೊ| ಉಮಾಕಾಂತ ಮೀಸೆ ನಿರೂಪಿಸಿದರು. ಯೋಗೆಂದ್ರ ಯದಲಾಪುರೆ ವಂದಿಸಿದರು.