ಉಡುಪಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೂರ್ವ ಮುಂಗಾರಿನಲ್ಲಿ ಕಡಿಮೆ ಮಳೆಯಾದರೂ, ಈ ಬಾರಿಯ ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯ ಹವಾಮಾನ ಇಲಾಖೆಯೇ ಈ ಮಾಹಿತಿ ನೀಡಿದ್ದು, ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದೆ ಎನ್ನುವ ಮೂಲಕ ಕೃಷಿಕರಿಗೆ ಸಿಹಿ ಸುದ್ದಿ ನೀಡಿದೆ.
ಕಳೆದ ಬಾರಿ ಸುಮಾರು ಶೇ. 25 ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರೆ, ಈ ಬಾರಿ ಶೇ. 10 ರಷ್ಟು ಅಂದರೆ ವಾಡಿಕೆಗೆ ಹೋಲಿಸಿದರೆ ಶೇ. 90 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮುಂಗಾರಿನಲ್ಲಿ (ಜೂನ್‌ನಿಂದ ಸೆಪ್ಟೆಂಬರ್) ಉಡುಪಿ ಜಿಲ್ಲೆಯಲ್ಲಿ 4,071 ಮಿ. ಮೀ. ನಷ್ಟು ವಾಡಿಕೆ ಮಳೆಯಾಗಬೇಕು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,441 ಮೀ. ಮೀ. ನಷ್ಟು ವಾಡಿಕೆ ಮಳೆಯಾಗಬೇಕು. ವರ್ಷದಿಂದ ವರ್ಷಕ್ಕೆ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಇಳಿಮುಖವಾಗುತ್ತಿದ್ದರೂ, ಈ ಬಾರಿ ವಾಡಿಕೆಯಷ್ಟು ಮಳೆಯಾಗಲಿದೆ.
ಮುಂಗಾರು ಮಳೆ ಆರಂಭವಾಗಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ. ಕಳೆದ 1 ವಾರದಲ್ಲಿ ಕರಾವಳಿಯಲ್ಲಾಗಿರುವ ಒಟ್ಟಾರೆ ಮಳೆ ಪ್ರಮಾಣ ಉತ್ತಮವಾಗಿದೆ. 62.5 ಮಿ. ಮೀ. ವಾಡಿಕೆ ಮಳೆಯಾಗಬೇಕಿದ್ದರೆ, ಈ ಬಾರಿ 79. 3 ಮಿ. ಮೀ. ನಷ್ಟು ಅಂದರೆ ಶೇ. 27 ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ದ. ಕ. ದಲ್ಲಿ 77 ಮಿ. ಮೀ. ವಾಡಿಕೆಯಾದರೆ, 72. 4ಮೀ. ಮೀ. ಮಳೆ ಬಂದಿದೆ. ಉಡುಪಿಯಲ್ಲಿ 93.1 ಮಿ. ಮೀ. ವಾಡಿಕೆಯಾದರೆ, 98.2 ಮಿ.ಮೀ. ಮಳೆ ಬಂದಿದೆ. ಒಟ್ಟಾರೆ ಕಾರ್ಕಳ, ಕುಂದಾಪುರ ಭಾಗದಲ್ಲಿ ಆಗಾಗ ಉತ್ತಮ ಮಳೆಯಾದದ್ದು ಬಿಟ್ಟರೆ, ಉಡುಪಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ.
ಉಡುಪಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಇಳಿಮುಖವಾಗಿದೆ. 2011ರಲ್ಲಿ ಮಾತ್ರ ನಿರೀಕ್ಷೆಯಷ್ಟು ಅಂದರೆ ಕೇವಲ ಶೇ. 1 ರಷ್ಟು ಮಾತ್ರ ಮಳೆ ಕಡಿಮೆ ಬಂದಿತ್ತು. ಆನಂತರದ ವರ್ಷಗಳಲ್ಲಿ ಶೇ. 20 ಹಾಗೂ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕಡಿಮೆ ಬರುತ್ತಿದೆ. ದ. ಕನ್ನಡ ಜಿಲ್ಲೆಯಲ್ಲಿಯೂ 2013ರಲ್ಲಿ ಮಾತ್ರ ಶೆ. 6 ರಷ್ಟು ಹೆಚ್ಚಿನ ಮಳೆ ಬಂದರೆ, ಆನಂತರದ ವರ್ಷಗಳಲ್ಲಿ ಇಳಿಕೆಯಾಗಿದೆ. ಆದರೆ ಈ ಬಾರಿ ಮುಂಗಾರು ಪೂರ್ವ ಮಳೆ ಹೆಚ್ಚಾಗಿ ರಾತ್ರಿ ವೇಳೆ ಬಂದಿರುವುದರಿಂದ ಈ ಮುಂಗಾರು ಆಶಾದಾಯಕವಾಗಿರಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಮುಂಗಾರು ಆಶಾದಾಯಕ
ಹಿಂದಿನ ವರ್ಷಗಳಿಗಿಂತ ಈ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಜಾಸ್ತಿ ಅಲ್ಲದಿದ್ದರೂ ಕನಿಷ್ಠ ವಾಡಿಕೆಗಿಂತ ಸುಮಾರು ಶೇ. 10ರಷ್ಟು ಮಾತ್ರ ಕಡಿಮೆ ಮಳೆಯಾಗಬಹುದು .
-ಎಸ್. ಎಸ್. ಎಂ. ಗವಾಸ್ಕರ್, ರಾಜ್ಯ ನೈಸರ್ಗಿಕ ವಿಕೋಪ ಬೆಂಗಳೂರು ಕೇಂದ್ರದ ಉಸ್ತುವಾರಿ ವಿಜ್ಞಾನಿ
– ಪ್ರಶಾಂತ್ ಪಾದೆ