ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನವನ್ನು ಸೋಮವಾರ ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ವೇಳಾಪಟ್ಟಿಯ ಪ್ರಕಾರ ಆ.12ರಂದು ಲೋಕಸಭೆ, ರಾಜ್ಯಸಭೆ ಕಲಾಪ ಮುಕ್ತಾಯವಾಗಬೇಕಾಗಿತ್ತು.
ಲೋಕಸಭೆಯಲ್ಲಿ ದಿನದ ಕಲಾಪ ಅಂತ್ಯಗೊಂಡ ಅನಂತರ ಸಭಾಧ್ಯಕ್ಷ ಓಂ ಬಿರ್ಲಾ ಮುಂಗಾರು ಅಧಿವೇಶನದ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುತ್ತಿರುವುದಾಗಿ ಪ್ರಕಟಿಸಿದರು. ಹಾಲಿ ಅಧಿವೇಶನದಲ್ಲಿ 16 ದಿನಗಳ ಕಾಲ ಕಲಾಪ ನಡೆದಿದ್ದು, ಏಳು ಮಸೂದೆಗಳನ್ನು ಅಂಗೀಕಾರ ಮಾಡಲಾಗಿದೆ ಎಂದರು.
ರಾಜ್ಯಸಭೆಯಲ್ಲಿ ಸಭಾಪತಿ ಮತ್ತು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಬಗ್ಗೆ ಪ್ರಕಟಿಸಿದರು. ಈ ಅಧಿವೇಶನ 16 ದಿನ ನಡೆದಿದ್ದು, 38 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ.
ಆದರೆ, 47 ಗಂಟೆಗಳು ವಿಪಕ್ಷಗಳ ಧರಣಿಯಿಂದ ವ್ಯರ್ಥವಾಗಿದೆ ಎಂದರು. ವಿಪಕ್ಷಗಳು, ಆಡಳಿತ ಪಕ್ಷಗಳ ಸಂಸದರ ಕೋರಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆ.
ಸಂಸದರ ಸಸ್ಪೆಂಡ್: ಲೋಕಸಭೆಯಿಂದ ನಾಲ್ವರು ಸಂಸದರನ್ನು ಅನುಚಿತವಾಗಿ ವರ್ತಿಸಿದ್ದಕ್ಕೆ ಸಸ್ಪೆಂಡ್ ಮಾಡಲಾಗಿತ್ತು. ಮೊದಲ 2 ವಾರಗಳು ಬೆಲೆ ಏರಿಕೆ, ಸಸ್ಪೆಂಡ್ ವಿಚಾರಕ್ಕೆ ಕೋಲಾಹಲ ಉಂಟಾಗಿ, ಕಲಾಪ ನಡೆಸಲು ಸಾಧ್ಯವಾಗಿರಲಿಲ್ಲ. ಅವರು ಕ್ಷಮೆ ಕೋರಿದ್ದರಿಂದ ಕಲಾಪ ಸುಗಮವಾಗಿ ನಡೆದಿತ್ತು. ರಾಜ್ಯಸಭೆಯಿಂದ 23 ಮಂದಿ ಸಂಸದರನ್ನು ಸಸ್ಪೆಂಡ್ ಮಾಡಲಾಗಿತ್ತು.