Advertisement

ಮುಂಗಾರು ಪೂರ್ವ ಮಳೆಗೆ ತಂಪಾದ ಇಳೆ

06:26 PM May 14, 2022 | Team Udayavani |

ಗದಗ: ಸತತ ಮೂರ್‍ನಾಲ್ಕು ವರ್ಷಗಳಿಂದ ವರುಣ ದೇವನ ಕಣ್ಣಾಮುಚ್ಚಾಲೆಯಿಂದ ನೇಗಿಲ ಯೋಗಿ ನಲುಗಿ ಹೋಗಿದ್ದಾನೆ. ಆದರೆ, ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಈ ಬಾರಿ ಮಳೆ ಕೈಹಿಡಿಯುವ ಭರವಸೆಯೊಂದಿಗೆ ರೈತಾಪಿ ಜನರು ಮತ್ತೆ ಜಮೀನಿನತ್ತ ಮುಖ ಮಾಡಿದ್ದಾರೆ. ಮುಂಗಾರು ಬಿತ್ತನೆಗೆ ಕೃಷಿ ಜಮೀನುಗಳನ್ನು ಸಿದ್ಧಗೊಳಿಸುತ್ತಿದ್ದಾರೆ.

Advertisement

2019ರಿಂದ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಸಕಾಲಕ್ಕೆ ಮಳೆಯಾಗದೇ ನಿರೀಕ್ಷಿತ ಬೆಳೆ ಬಾರದೇ ರೈತ ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಆದರೆ, ಈ ಬಾರಿ ಏಪ್ರಿಲ್‌ ಅಂತ್ಯದಿಂದಲೇ ಮುಂಗಾರು ಪೂರ್ವ ಮಳೆ ಚುರುಕಾಗಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಈ ವರ್ಷ ಉತ್ತಮ ಮಳೆ, ಬೆಳೆ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭಾರೀ ಉತ್ಸಾಹದಿಂದ ಜಮೀನುಗಳನ್ನು ಹದಗೊಳಿಸುವುದು, ಕಸ-ಕಡ್ಡಿ ಆರಿಸಿ ಹೊಲ ಸ್ವತ್ಛಗೊಳಿಸಿದ್ದಾರೆ. ಕೆಲವರು ಬಿತ್ತನೆಗೆ ಅನುಕೂಲ ವಾಗುವಂತೆ ಮಾಡಿದ್ದರೆ, ಇನ್ನೂ ಕೆಲವರು ಅದಾಗಲೇ ಜಮೀನುಗಳನ್ನು ಹರಗಿ ಸಮತಟ್ಟುಗೊಳಿಸಿದ್ದಾರೆ.

ಕಳೆದ ಎರಡು ವರ್ಷಗಳ ಕಾಲ ಕಾಡಿದ ಮಹಾಮಾರಿ ಕೋವಿಡ್‌ನಿಂದಾಗಿ ಪಟ್ಟಣ ಪ್ರದೇಶಗಳಿಂದ ಸಾಕಷ್ಟು ಕುಟುಂಬಗಳು ಸ್ವಗ್ರಾಮಗಳಿಗೆ ಮರಳಿವೆ. ಅವರಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮಾತ್ರ ಮತ್ತೆ ಗುಳೆ ಹೋಗಿದ್ದನ್ನು ಹೊರತುಪಡಿಸಿದರೆ, ಬಹುತೇಕರು ಗ್ರಾಮದಲ್ಲೇ ಉಳಿದುಕೊಂಡಿದ್ದಾರೆ. ಸ್ವಂತ ಹಾಗೂ ಇತರರಿಂದ ಲಾವಣಿ ಪಡೆದ ಜಮೀನುಗಳಲ್ಲಿ ಕೃಷಿ ಮಾಡಲು ಮುಂದಗಿದ್ದಾರೆ. ಇನ್ನೂ ಕೆಲವರು ಗ್ರಾಮದಲ್ಲೇ ಕೃಷಿ ಕಾರ್ಮಿಕರಾಗಿ ದುಡಿಯಲು ಮುಂದಾಗಿದ್ದಾರೆ. ಪರಿಣಾಮ ಕೃಷಿ ಕೂಲಿಕಾರರ ಸಮಸ್ಯೆ ತಕ್ಕ ಮಟ್ಟಿಗೆ ನಿವಾರಣೆಯಾಗಿದ್ದು, ಕೃಷಿ ಕ್ಷೇತ್ರ ಕಳೆಗಟ್ಟಿದೆ.

3 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಸಾಧ್ಯತೆ: ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 30,0600 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಮಳೆ ಸುರಿಯುತ್ತಿದ್ದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ಸಂಭವವಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಆ ಪೈಕಿ ಪ್ರಮುಖವಾಗಿ ಗೋವಿನ ಜೋಳ 102231 ಹೆ., ಹೆಸರು 1,022,36 ಹೆ., ಶೇಂಗಾ 39,900 ಹೆ., ಸೂರ್ಯಕಾಂತಿ 11250 ಹೆ., ತೊಗರಿ 1082 ಹೆ., ಹಾಗೂ ಹತ್ತಿ 33000 ಹೆ., ಸಜ್ಜೆ 2653 ಹೆ., ಪ್ರದೇಶದಲ್ಲಿ ಬಿತ್ತನೆಯಾಗುವ ಸಾಧ್ಯತೆಗಳಿವೆ. ಅದಕ್ಕೆ ಅನುಗುಣವಾಗಿ 94315 ಕ್ವಿಂಟಲ್‌ ಬಿತ್ತನೆಗೆ ವಿವಿಧ ಬೆಳೆಗಳ ಬೀಜ ಬೇಕಾಗುತ್ತವೆ. ಆದರೆ, ಬಿತ್ತನೆ ಬೀಜಗಳ ಬದಲಾವಣೆ ಅನುಪಾತದನ್ವಯ 45952 ಕ್ವಿಂಟಲ್‌ ಬೀಜಕ್ಕೆ ಬೇಡಿಕೆ ಬರಬಹುದು. ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿಗೆ ಒತ್ತು ನೀಡಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಮುಂಗಾರು ಪೂರ್ವದಲ್ಲೇ ಮಳೆಯಬ್ಬರ: ಬಯಲು ಸೀಮೆ ಗದಗ ಜಿಲ್ಲೆ ಕಳೆದ ಒಂದೂವರೆ ದಶಕದಲ್ಲಿ ಮಳೆ ಕೊರತೆಯಿಂದ ಬರಗಾಲ ಅನುಭವಿಸಿದ್ದೇ ಹೆಚ್ಚು. ಆದರೆ, 2019 ರಿಂದ ಈಚೆಗೆ ಮಳೆ ಉತ್ತಮವಾಗುತ್ತಿದೆ. ಕೆಲವೊಮ್ಮೆ ವಾಡಿಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಕೆರೆ, ಹಳ್ಳ, ಕೊಳ್ಳ ಸೇರಿದಂತೆ ಜಲಮೂಲಗಳು ಜೀವಜಲದಿಂದ ಕಂಗೊಳಿಸುವಂತೆ ಮಾಡುತ್ತಿದೆ. ಅಲ್ಲದೇ, ಕೃಷಿ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದೆ. ಆದರೆ, ರೋಹಿಣಿ ಮಳೆಯೇ ನಮ್ಮ ಭಾಗಕ್ಕೆ ಮುಖ್ಯವಾಗಿದೆ ಎನ್ನುತ್ತಾರೆ ಹೊಸಳ್ಳಿಯ ರೈತ ಮುತ್ತಣ್ಣ ಹಾವಣ್ಣವರ.

Advertisement

ವಾಡಿಕೆಗಿಂತ ಹೆಚ್ಚು ಮಳೆ: ಈ ಬಾರಿ ಜನವರಿಯಿಂದ ಮೇ 12ರ ವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದರಲ್ಲೂ ಏಪ್ರಿಲ್‌ ಅಂತ್ಯದಿಂದ ಮಳೆ ಚುರುಕಾಗಿದೆ. ಜಿಲ್ಲೆಯ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಎರಡು ಪಟ್ಟು ಹೆಚ್ಚಿನ ಮಳೆ ಸುರಿದಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ವಾಡಿಕೆಯಂತೆ 60.8 ಮಿ.ಮೀ. ಪೈಕಿ 143.4 ಮಿ.ಮೀ., ಶಿರಹಟ್ಟಿಯಲ್ಲಿ ಸರಾಸರಿ 66.5 ಮಿ.ಮೀ. ನಲ್ಲಿ 110.8 ಮಿ.ಮೀ. ನಷ್ಟು ಮಳೆಯಾಗಿದೆ. ರೋಣದಲ್ಲಿ 72 ಮಿ.ಮೀ.,
ಗದಗ ಮತ್ತು ಮುಂಡರಗಿಯಲ್ಲಿ 67ಮಿ.ಮೀ., ನರಗುಂದದಲ್ಲಿ 63ಮಿ.ಮೀ., ಗಜೇಂದ್ರಗಡದಲ್ಲಿ 55 ಮಿ.ಮೀ. ಮಳೆಯಾಗಿದೆ ಎನ್ನಲಾಗಿದೆ.

ಮುಂಗಾರು ಪೂರ್ವದಲ್ಲಿ ಮಳೆಯಾಗುವುದು ಅಪರೂಪ. ಆದರೆ, ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಮೇ ಅಂತ್ಯದ ವರೆಗೆ ಶೇ.30 ರಷ್ಟು ಆಗಬೇಕಿದ್ದ ಮಳೆ ಶೇ.50 ರಷ್ಟು ಸುರಿದಿದೆ. ಇದರಿಂದ ಮೇ 15ರ ನಂತರ ಹೆಸರು ಬಿತ್ತುವವರಿಗೆ ಹೆಚ್ಚು ಅನುಕೂಲ. ಆದರೂ, ಮುಂಗಾರು ಮಳೆಯೂ ಉತ್ತಮವಾದರೆ ಮಾತ್ರ ಉತ್ತಮ ಬೆಳೆ ನಿರೀಕ್ಷಿಸಲು ಸಾಧ್ಯ.
ಜಿಯಾವುಲ್ಲಾ ಕೆ.,
ಕೃಷಿ ಇಲಾಖೆ ಜಂಟಿ ನಿರ್ದೇಶಕರು

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next