Advertisement

ಮುಂಗಾರು ಪೂರ್ವ ಮಳೆ : ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಕಡಿಮೆ

03:22 PM May 25, 2017 | Team Udayavani |

ಉಡುಪಿ: ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ತೀವ್ರ ಕುಸಿತಗೊಂಡಿದ್ದು, ನಗರದ ಕುಡಿಯುವ ನೀರಿನ ಸಮಸ್ಯೆಗೆ ಅದು ಕೂಡ ಒಂದು ಕಾರಣವಾಗಿದೆ. ಮುಂಗಾರು ಆರಂಭಕ್ಕೂ ಮುನ್ನ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಜನವರಿಯಿಂದ ಮೇ 24ರ ವರೆಗೆ ವಾಡಿಕೆಯಂತೆ 120.10 ಮಿ.ಮೀ. ಮಳೆಯಲ್ಲಿ 100.18 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ. 17ರಷ್ಟು ಕಡಿಮೆ ಮಳೆಯಾಗಿದೆ. 

Advertisement

ಕಳೆದ ಜನವರಿಯಿಂದ ಮೇ 24ರ ವರೆಗೆ ದ.ಕ. ಜಿಲ್ಲೆಯಲ್ಲಿ  ವಾಡಿಕೆಯಂತೆ 172 ಮಿ.ಮೀ. ಮಳೆಯಾಗಬೇಕಿದ್ದು, ಆದರೆ ಈ ಬಾರಿ 184 ಮಿ.ಮೀ. ಮಳೆಯಾಗಿದ್ದು, ಶೇ. 7ರಷ್ಟು ಕಡಿಮೆ ಮಳೆಯಾಗಿದೆ. ಉಡುಪಿಯಲ್ಲಿ 132 ಮಿ.ಮೀ. ಮಳೆಯಾಗಬೇಕಿದ್ದು, ಈ ಬಾರಿ ಕೇವಲ 83.25 ಮಿ.ಮೀ. ಮಳೆಯಾಗಿದೆ. ಅಂದರೆ ಶೇ. 37ರಷ್ಟು ಕಡಿಮೆ  ಮಳೆ ಬಂದಿದೆ.

ಸುಳ್ಯ, ಪುತ್ತೂರು, 
ಬೆಳ್ತಂಗಡಿಯಲ್ಲಿ ಹೆಚ್ಚಳ

ತಾಲೂಕುವಾರು ಮುಂಗಾರು ಪೂರ್ವ ಮಳೆಯ ಪ್ರಮಾಣವನ್ನು ನೋಡಿದರೆ ಸುಳ್ಯದಲ್ಲಿ ಶೇ. 31, ಪುತ್ತೂರಿನಲ್ಲಿ ಶೇ. 24 ಹಾಗೂ ಬೆಳ್ತಂಗಡಿಯಲ್ಲಿ ಶೇ. 16ರಷ್ಟು ಮಳೆ ವಾಡಿಕೆಗಿಂತ ಹೆಚ್ಚು ಬಂದಿದೆ. ಬಂಟ್ವಾಳ ಶೇ. – 24, ಮಂಗಳೂರು – 34, ಕುಂದಾಪುರ ಶೆ. – 15, ಕಾರ್ಕಳ ಶೇ. – 40 ಹಾಗೂ ಉಡುಪಿಯಲ್ಲಿ ಶೇ. – 64ರಷ್ಟು ಕಡಿಮೆ ಮಳೆಯಾಗಿದೆ. 

ಇನ್ನು ಮೇ ತಿಂಗಳಲ್ಲಿ ಒಟ್ಟಾರೆ 83.70ರಷ್ಟು ಮಳೆಯಾಗಬೇಕಿದ್ದು, 81.60ರಷ್ಟು ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು, ಶೇ. 21ರಷ್ಟು ಮಳೆ ಹೆಚ್ಚು ಬಂದಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮೇ ಯಲ್ಲಿ ವಾಡಿಕೆಗಿಂತ ಶೇ. 23 ರಷ್ಟು ಕಡಿಮೆ ಮಳೆಯಾಗಿದೆ. 

ಮೇ ತಿಂಗಳಲ್ಲಿ ಕಾರ್ಕಳದಲ್ಲಿ 113 ಮಿ.ಮೀ. ಮಳೆಯಲ್ಲಿ 79 ಮಿ.ಮೀ. ಮಳೆಯಾಗಿದೆ. ಕುಂದಾಪುರದಲ್ಲಿ ಶೇ. 6ರಷ್ಟು ಹೆಚ್ಚು ಮಳೆಯಾಗಿದ್ದು, 93 ಮಿ. ಮೀ. ಮಳೆಯಾಗಿದೆ.

Advertisement

ತಾಲೂಕಿನ ವಾಡಿಕೆ ಮಳೆ 87.3 ಮಿ. ಮೀ. ಆಗಿದೆ. ಇನ್ನು ಉಡುಪಿ ತಾಲೂಕಿನಲ್ಲಿ 100.5 ಮಿ.ಮೀ. ವಾಡಿಕೆ ಮಳೆಯಲ್ಲಿ ಕೇವಲ 41.8 ಮಿ. ಮೀ. ಮಾತ್ರ ಮಳೆಯಾಗಿದೆ. 

ಇದೇ ಕಾರಣದಿಂದ ಬಜೆ ಜಲಾಶ ಯವು ಇದೇ ಮೊದಲ ಬಾರಿಗೆ ಸಂಪೂರ್ಣ ಬತ್ತಿದ ಸ್ಥಿತಿಯಲ್ಲಿದೆ.ಇದರಿಂದ ನಗರಸಭಾ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿಯೂ ಸಮಸ್ಯೆ ಗಳಾಗಿವೆ. 

ಮುಂಗಾರಿನಲ್ಲಿ
ಉತ್ತಮ ಮಳೆ ನಿರೀಕ್ಷೆ

ಮುಂಬರುವ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ  ಮುನ್ಸೂಚನೆ ಸಿಕ್ಕಿದೆ.ಜಿಲ್ಲೆಯ ಜನತೆಗೆ ಇದೊಂದು ಆಶಾದಾಯಕ ಬೆಳವಣಿಗೆ.ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎನ್ನುವುದಾಗಿ ರಾಜ್ಯ ನೈಸರ್ಗಿಕ ವಿಕೋಪ ಬೆಂಗಳೂರು ಕೇಂದ್ರದ ಉಸ್ತುವಾರಿ ವಿಜ್ಞಾನಿ ಎಸ್‌.ಎಸ್‌.ಎಂ. ಗವಾಸ್ಕರ್‌ ಅವರು ತಿಳಿಸಿದ್ದಾರೆ.ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನು ಒಂದು ವಾರದಲ್ಲಿ ಉಡುಪಿ ಜಿಲ್ಲೆಯ ಅಲ್ಲಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ತಿಳಿದು ಬಂದಿದೆ.

ಮೇ 30ಕ್ಕೆ ಮುಂಗಾರು ಪ್ರವೇಶ
ಬೆಂಗಳೂರು:
ಮುಂಗಾರು ಮಾರುತ ನಿರೀಕ್ಷಿತ ರೀತಿಯಲ್ಲಿ ಸಾಗುತ್ತಿದ್ದು, 48 ಗಂಟೆಗಳಲ್ಲಿ ಬಂಗಾಲಕೊಲ್ಲಿಯನ್ನು ಪೂರ್ತಿಯಾಗಿ ಆವರಿಸಲಿದೆ. ಬಂಗಾಲಕೊಲ್ಲಿಯಲ್ಲಿ ಮುಂಗಾರುಗೆ ಪೂರಕ ಎಂಬಂತೆ ಮೇಲ್ಮೆ„ ಸುಳಿಗಾಳಿ ಕೂಡ ಇದ್ದು, ಗಾಳಿಯ ವೇಗ ಇದೇ ರೀತಿ ಮುಂದುವರಿದರೆ ಈಗಾಗಲೇ ತಿಳಿಸಿರುವಂತೆ ಮೇ 30ರ ಆಸುಪಾಸಿನಲ್ಲಿ ಮುಂಗಾರು ಭಾರತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಕೇಂದ್ರ ತಿಳಿಸಿದೆ. 

ಕೇರಳಕ್ಕೆ ಪ್ರವೇಶಿಸಿದ ಎರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೂ ಮುಂಗಾರು ಪ್ರವೇಶಿಸಲಿದೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯದ ವಿವಿಧೆಡೆ ಮುಂಗಾರುಪೂರ್ವ ಮಳೆಯಾಗುತ್ತಿದೆ. ಇದು ಇನ್ನೂ ಕೆಲವು ದಿನ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ ಮಳೆಯಾಗುತ್ತಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಈ ವಾರದಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಕೇಂದ್ರದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next