ಹೊಸದಿಲ್ಲಿ : ವಿಳಂಬವಾಗಿಯಾದರೂ ನೈಋತ್ಯ ಮಾನ್ಸೂನ್ ಇಂದು ಶನಿವಾರ ಕೇರಳ ಕರಾವಳಿಗೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.
ಆ ಪ್ರಕಾರ 24 ತಾಸೊಳಗೆ ಕರ್ನಾಟಕ ಕರಾವಳಿಗೆ ಮುಂಗಾರು ಆಗಮಿಸಲಿದ್ದು ಬಹುದಿನಗಳಿಂದ ಮಳೆಗಾಗಿ ಆಗಸದತ್ತ ಮುಖ ಮಾಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಮುಂಗಾರು ಮಳೆಯ ಸಿಂಚನವಾಗಲಿದೆ.
ಕೇರಳದ ತಿರುವನಂತಪುರ, ಕೊಲ್ಲಂ, ಅಳಪ್ಪುಝ ಮತ್ತು ಎರ್ನಾಕುಳಂ ಜಿಲ್ಲೆಗಳಿಗೆ ಸಂಬಂಧಿಸಿ ಆರೆಂಜ್ ಅಲರ್ಟ್ ಜಾರಿ ಮಾಡಲಾಗಿದೆ. ಇದರ ಪ್ರಕಾರ ಜೂನ್ 10ರಂದು ಈ ಜಿಲ್ಲೆಗಳಲ್ಲಿ ಭಾರಿಯಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚಿಸಲಾಗಿದೆ.
ಇದೇ ವೇಳೆ ಭಾರೀ ಮಳೆಯ ಯೆಲ್ಲೋ ಅಲರ್ಟ್ ಸೂಚನೆಯನ್ನು ಕೇರಳದ ಇತರ ಏಳು ಜಿಲ್ಲೆಗಳಿಗೆ ಸಂಬಂಧಿಸಿ ಜೂನ್ 9 ಭಾರೀ ಮಳೆಗೆ ಮತ್ತು ಐದು ಜಿಲ್ಲೆಗಳಿಗೆ ಜೂನ್ 10ರ ಭಾರೀ ಮಳೆಗೆ ಸಂಬಂಧಪಟ್ಟು ನೀಡಲಾಗಿದೆ.
ಮಾನ್ಸೂನ್ ಪ್ರವೇಶ ವಿಳಂಬವಾಗಿರುವುದನ್ನು ಅನುಸರಿಸಿ ಉತ್ತರ ಭಾರತದ ಬಹು ಭಾಗವನ್ನು ಈಗ ಕಾಡುತ್ತಿರುವ ತೀವ್ರತಮ ಉಷ್ಣತೆಯು ಇನ್ನೂ ಒಂದು ವಾರ ಕಾಲ ತನ್ನ ಪ್ರತಾಪವನ್ನು ತೋರಿಸಲಿದೆ ಎಂದೂ ಐಎಂಡಿ ಹೇಳಿದೆ.