Advertisement

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

12:50 AM Jun 17, 2024 | Team Udayavani |

ಬೆಂಗಳೂರು: ಕಳೆದ 15 ದಿನಗಳಲ್ಲಿ ರಾಜ್ಯದ 19 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹಿಂದಿನ ವರ್ಷದ ಮುಂಗಾರು ಅವಧಿಯಲ್ಲಿ 233 ತಾಲೂಕುಗಳ ಮೇಲೆ ಆವರಿಸಿದ್ದ ಬರದ ಕಾರ್ಮೋಡ ನಿಧಾನವಾಗಿ ಸರಿಯತೊಡಗಿದೆ.

Advertisement

ಈ ಬಾರಿ ಮುಂಗಾರುಪೂರ್ವ ಮಳೆಯೂ ಜೀವ ತುಂಬಿದ್ದು, ಮುಂಗಾರು ಮಳೆಯ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇದರೊಂದಿಗೆ ರೈತರ ಗದ್ದೆಗಳಲ್ಲಿಯೂ ಬಿತ್ತನೆ ಚಟುವಟಿಕೆ ಗರಿಗೆದರಿ ಉತ್ತಮ ಮಳೆ, ಒಳ್ಳೆಯ ಫ‌ಸಲಿನ ನಿರೀಕ್ಷೆಗೆ ಅಡಿಪಾಯ ಬಿದ್ದಿದೆ.

ಜೂ. 1ರಿಂದ ಜೂ. 15ರ ವರೆಗೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ, ಬೀದರ್‌, ಗದಗ, ಕೊಪ್ಪಳ, ರಾಯಚೂರು, ವಿಜಯನಗರ, ಯಾದಗಿರಿ, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಸೇರಿ 19 ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಹೆಚ್ಚಳವಾಗಿದೆ.

ಉತ್ತರ ಕನ್ನಡ, ಬೆಳಗಾವಿ, ಧಾರವಾಡ ಮತ್ತು ಕಲಬುರಗಿಯಲ್ಲಿ ಭಾರೀ ಮಳೆಯಾಗಿದೆ.

ವಾಡಿಕೆಗಿಂತ 32.6 ಸೆಂ.ಮೀ. ಹೆಚ್ಚು ಮಳೆ
ಕಳೆದ ವರ್ಷ ತಡವಾಗಿ ರಾಜ್ಯ ಪ್ರವೇಶಿಸಿದ್ದ ಮುಂಗಾರು ಜೂನ್‌ ಕೊನೆಯ ವಾರಕ್ಕೆ ಇಡೀ ರಾಜ್ಯ ವ್ಯಾಪಿಸಿತ್ತು. ಸಾಧಾರಣವಾಗಿ ಜೂ. 15ರ ವೇಳೆಗೆ 88.9 ಸೆಂ.ಮೀ. ವಾಡಿಕೆ ಮಳೆಯಾಗುತ್ತದೆ. ಕಳೆದ ವರ್ಷ ಜೂನ್‌ ಇಡೀ ತಿಂಗಳಲ್ಲಿ 95 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ. 53ರಷ್ಟು ಕಡಿಮೆ ಮಳೆ ಬಿದ್ದಿತ್ತು. ಈ ವರ್ಷ ಈಗಲೇ 121.5 ಸೆಂ.ಮೀ ಮಳೆಯಾಗಿ ವಾಡಿಕೆಗಿಂತ ಶೇ. 37 ಹೆಚ್ಚು ಮಳೆಯಾಗಿದೆ.

Advertisement

ಉ.ಒಳನಾಡಿನಲ್ಲಿ ಹೆಚ್ಚು
ರಾಜ್ಯದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಹಾವೇರಿ ಹೊರತುಪಡಿಸಿ ಉಳಿದೆಡೆ ಮುಂಗಾರು ಮಳೆ ಆರ್ಭಟಿಸಿದೆ. ಒಟ್ಟಾರೆ ವಾಡಿಕೆಗಿಂತ ಶೇ. 108 ರಷ್ಟು ಹೆಚ್ಚು ಮಳೆ ಸುರಿದಿದೆ. ಇನ್ನು ದಕ್ಷಿಣ ಒಳನಾಡಿನ 17 ಜಿಲ್ಲೆಗಳ ಪೈಕಿ ವಾಡಿಕೆಗಿಂತ ಶೇ.30ರಷ್ಟು ಹೆಚ್ಚು ಮಳೆಯಾಗಿದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಹಾಸನ, ಕೋಲಾರ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕುಸಿದಿದೆ.

ಗರಿಗೆದರಿದ ಕೃಷಿ ಚಟುವಟಿಕೆ
ಜೂ. 7ರ ವರೆಗಿನ ಕೃಷಿ ಇಲಾಖೆ ಮಾಹಿತಿಯ ಪ್ರಕಾರ ಈ ವರ್ಷ 82.48 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಿದ್ದು, ಈವರೆಗೆ 9.85 ಲಕ್ಷ ಹೆಕ್ಟೇರ್‌ ಅಂದರೇ ಶೇ. 12ರಷ್ಟು ಬಿತ್ತನೆ ಮಾಡಲಾಗಿದೆ. ಈಗಾಗಲೇ ಒಂದು ಲಕ್ಷ ಕ್ವಿಂಟಾಲ್‌ ಬಿತ್ತನೆ ಬೀಜಗಳ ವಿತರಣೆ ಮಾಡಲಾಗಿದೆ. 26.80 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯವಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದ್ದು, ಈಗಾಗಲೇ 6.85 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ವಿತರಿಸಲಾಗಿದೆ.

ಮುಂಗಾರು ಆರಂಭದ ಮೊದಲ ವಾರದಲ್ಲೇ ಭರ್ಜರಿ ಬಿತ್ತನೆ ಚಟುವಟಿಕೆ ನಡೆದಿದೆ. ಒಟ್ಟು ಗುರಿಯಾದ 82.48 ಲಕ್ಷ ಹೆಕ್ಟೇರ್‌ನಲ್ಲಿ 9.849 ಲಕ್ಷ ಹೆಕ್ಟೇರ್‌ ಅಂದರೆ ಶೇ. 12ರಷ್ಟು ಬಿತ್ತನೆ ನಡೆದಿದ್ದು ಕಳೆದ ವರ್ಷ ಮತ್ತು ವಾಡಿಕೆಗಿಂತ ಹೆಚ್ಚಿನ ಕೃಷಿ ಚಟುವಟಿಕೆ ನಡೆದಿದೆ.

ಸಿರಿಧಾನ್ಯಗಳನ್ನು ಒಟ್ಟು 36.33 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದ್ದು, 3.22 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಬೇಳೆಕಾಳುಗಳ ಬಿತ್ತನೆಯಲ್ಲಿಯೂ ಉತ್ತಮ ಪ್ರಗತಿ ಸಾಧಿಸಲಾಗಿದೆ. ಒಟ್ಟು 21.19 ಲಕ್ಷ ಹೆಕ್ಟೇರ್‌ನಲ್ಲಿ ಬೇಳೆಕಾಳು ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದ್ದು ಈಗಾಗಲೇ 2.248 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಚಟುವಟಿಕೆ ನಡೆದಿದೆ.
ಏಕದಳ ಮತ್ತು ದ್ವಿದಳವನ್ನು 57.51 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದ್ದು, ಈಗಾಗಲೇ 5.47 ಲಕ್ಷ ಹೆಕ್ಟೇರ್‌ನಲ್ಲಿ ಅಂದರೆ ಗುರಿಯ ಶೇ.10ರಷ್ಟು ಬಿತ್ತನೆ ನಡೆದಿದೆ.

ಎಣ್ಣೆಬೀಜಗಳ ಬಿತ್ತನೆ ಬಿರುಸಾಗಿ ನಡೆದಿದ್ದು, ನಿಗದಿತ ಗುರಿಯಾದ 9.79 ಲಕ್ಷ ಹೆಕ್ಟೇರ್‌ನಲ್ಲಿ ಈಗಾಗಲೇ 0.68 ಲಕ್ಷ ಹೆಕ್ಟೇರ್‌ ಬಿತ್ತನೆ ನಡೆದಿದೆ.

-  ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next