ಪಣಜಿ: ಪಣಜಿ ಶಾಸಕ ಬಾಬುಷ್ ಮಾನ್ಸೆರೆಟ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮಾಜಿ ರಕ್ಷಣಾ ಸಚಿವ ದಿ.ಮನೋಹರ್ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ಒತ್ತಾಯಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಉತ್ಪಲ್ ಪರ್ರಿಕರ್ ‘ನಾನು ಪಣಜಿಯಲ್ಲಿ ಏನಾದರೂ ಅಭಿವೃದ್ಧಿ ಆಗಬಹುದೆಂದು ಕಾಯುತ್ತಿದ್ದೇನೆ.ಸುಮ್ಮನೆ ಕುಳಿತು ನೋಡುವುದಾದರೆ ಮನೆಯಲ್ಲಿ ಕೂರಬೇಕು. ಸುಮ್ಮನೆ ಕೂರಬೇಕಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. 15 ಟ್ರಕ್‍ಗಳು ರಸ್ತೆಯಲ್ಲಿ ಸಿಲುಕಿಕೊಳ್ಳುವವರೆಗೆ ಅವರು ಸುಮ್ಮನೆ ಕಾದು ಕುಳಿತುಕೊಂಡಿರುವರೆ? ಎಂದು ಪ್ರಶ್ನಿಸಿದ್ದಾರೆ.
ಒಂದು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿಗಳು ಪಣಜಿಯತ್ತ ಗಮನ ಹರಿಸಲು ಆರಂಭಿಸಿದ್ದಾರೆ.ಪಣಜಿ ಮಹಾನಗರದ ಅಭಿವೃದ್ಧಿ ವಿಷಯ ಏಕೆ ಹೀಗಾಯಿತು ಎಂದು ಸಚಿವ ಬಾಬುಷ್ ಮೊನ್ಸೆರೆಟ್ ರವರನ್ನು ಕೇಳಬೇಕು. ಪಣಜಿಯಲ್ಲಿ ಬಾಬುಷ್ ಮೊನ್ಸೆರೆಟ್ ಅವರಂತಹ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಬಿಜೆಪಿಯಿಂದ ಹೇಗೆ ಟಿಕೆಟ್ ನೀಡಲಾಯಿತು ಎಂದು ಉತ್ಪಲ್ ಪ್ರಶ್ನಿಸಿದರು.
”ಚುನಾವಣೆ ಸಂದರ್ಭದಲ್ಲಿ ನನಗೆ ಬಂದ ಒತ್ತಡಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ತಂದೆ ಮನೋಹರ್ ಪರ್ರಿಕರ್ ಪಕ್ಷದಲ್ಲಿ 30 ವರ್ಷ ದುಡಿದಿದ್ದಾರೆ. ನನ್ನ ತಂದೆಯ ನಂತರ ಪಣಜಿ ಕ್ಷೇತ್ರದಲ್ಲಿ ಮೊನ್ಸೆರೆಟ್ ರವರಿಗೆ ಪಕ್ಷದಿಂದ ಟಿಕೆಟ್ ನೀಡಲಾಯಿತು. ಇದರಿಂದಾಗಿ ಅವರು ಮೇಲುಗೈ ಸಾಧಿಸಿದರು ಎಂದರು.
ಕಳೆದ ಬಾರಿ ನಾನು ಚುನಾವಣಾ ಅಖಾಡಕ್ಕೆ ಧುಮುಕುತ್ತಿದ್ದಂತೆಯೇ ಅವರಿಗೆ ಕಮಲ ಚಿಹ್ನೆ ಇದೆ ಎಂದು ತೋರಿಸಲು ಪ್ರಾರಂಭಿಸಲಾಯಿತು. ಆದ್ದರಿಂದ ಅವರು ಪಣಜಿಯಲ್ಲಿ ಗೆಲುವು ಸಾಧಿಸಿದರು. ಆದರೆ ಪಣಜಿಯ ಎಲ್ಲಾ ಕಾರ್ಯಕರ್ತರು ಮತ್ತು ಬಹುತೇಕ ಮತದಾರರು ನನ್ನ ಬೆನ್ನಿಗಿದ್ದರು. ಬಾಬುಷ್ ಬಿಜೆಪಿ ಚಿಹ್ನೆ ಪಡೆದು ರಾಜಕೀಯ ಲಾಭ ಪಡೆದಿರಬಹುದು, ಆದರೆ ಪಣಜಿಯ ಜನ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಉತ್ಪಲ್ ಗೋವಾ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಪಣಜಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾನ್ಸೆರೆಟ್ ವಿರುದ್ಧ ಸೋಲು ಅನುಭವಿಸಿದ್ದರು.