Advertisement

ಮಂಗನ ಕಾಯಿಲೆ ನಿಯಂತ್ರಣ ಆರೋಗ್ಯ ಇಲಾಖೆ ಮೇಲುಗೈ

01:18 PM Jun 20, 2020 | Suhan S |

ಹೊನ್ನಾವರ: ಚಳಿಗಾಲದಿಂದ ಮಳೆಗಾಲದವರೆಗೆ ಕಾಡುವ ಮಂಗನ ಕಾಯಿಲೆ ಈ ವರ್ಷ ಜಿಲ್ಲೆಯಲ್ಲಿ 91 ಜನರಿಗೆ ತಗುಲಿರುವುದು ರಕ್ತಪರೀಕ್ಷೆಯಿಂದ ಖಚಿತಪಟ್ಟಿತ್ತು. ಇವರಲ್ಲಿ ಕೇವಲ ಒಬ್ಬರು ಮೃತಪಟ್ಟಿದ್ದಾರೆ. ಕಾಯಿಲೆ ಪೀಡಿತರಿಗೆ ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಗುಣಮುಖರಾಗಿ ಬಂದಿದ್ದಾರೆ. ಇವರ ವೆಚ್ಚವನ್ನು ಸರ್ಕಾರವೇ ವಹಿಸಿಕೊಂಡಿದೆ.

Advertisement

ತಾಲೂಕಿನ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಜೋಯಿಡಾ, ಶಿರಸಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಇದರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಯ ವೈದ್ಯರು, ಜಿಲ್ಲಾ ಕೆಎಫ್‌ಡಿ ವೈದ್ಯಾಧಿಕಾರಿ ಡಾ| ಸತೀಶ ಶೇಟ್‌ ಇವರ ಸಂಯೋಜನೆಯಲ್ಲಿ ಕೆಲಸಮಾಡಿದ ಕಾರಣ ಮಂಗನ ಕಾಯಿಲೆ ಹೆಚ್ಚಾಗಿ ಹಬ್ಬಲಿಲ್ಲ. ಜನ ಹೆಚ್ಚಾಗಿ ಆಸಕ್ತಿವಹಿಸಿ ಲಸಿಕೆ ಪಡೆದುಕೊಂಡಿದ್ದರೆ ಇನ್ನೂ ಕಡಿಮೆ ಪ್ರಮಾಣದಲ್ಲಿ ಕಾಯಿಲೆ ಬಾಧಿಸುತ್ತಿತ್ತು. ಮೂಲ ಸೌಲಭ್ಯ ಮತ್ತು ಸಿಬ್ಬಂದಿ ಕೊರತೆ ಹೊಂದಿದ ಮಂಗನ ಕಾಯಿಲೆ ಜಿಲ್ಲಾಘಟಕವನ್ನು ಇನ್ನೂ ಬಲಪಡಿಸಬೇಕಾದ ಅಗತ್ಯವಿದೆ.

ಜಿಲ್ಲೆಯಲ್ಲಿ 145 (ಸಿದ್ದಾಪುರದಲ್ಲಿ 103) ಮಂಗಗಳು ಸತ್ತಿರುವುದನ್ನು ಗುರುತಿಸಲಾಯಿತು. 24 ಮಂಗಗಳ ಶವಪರೀಕ್ಷೆ ನಡೆಸಲಾಯಿತು. ಒಂದು ಮಂಗನಲ್ಲಿ ಪಾಸಿಟಿವ್‌ ಕಾಣಿಸಿಕೊಂಡಿತ್ತು. 29 ಉಣ್ಣಿ ಸಂಗ್ರಹಿಸಿದ್ದರೂ ಅದರಲ್ಲಿ ಪಾಸಿಟಿವ್‌ ಬಂದಿರಲಿಲ್ಲ. 764 ಜನರ ರಕ್ತದ ಮಾದರಿಯನ್ನು (ಸಿದ್ದಾಪುರ 641) ಅದರಲ್ಲಿ 91 ಪಾಸಿಟಿವ್‌ ಬಂದಿದ್ದು (ಸಿದ್ದಾಪುರ 61) ಸಿದ್ದಾಪುರದಲ್ಲಿ ಒಂದು ಸಾವು ಸಂಭವಿಸಿದೆ. 2,38,300 ಕರಪತ್ರ, 4,505 ಐಈಸಿಗಳಿಂದ ಜನಜಾಗೃತಿ ಮೂಡಿಸಲಾಯಿತು. ಎಲ್ಲ ತಾಲೂಕುಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಎಲ್ಲ ತಾಲೂಕುಗಳಲ್ಲಿ ಕೆಎಫ್‌ಡಿ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿತ್ತು. 46,872 ಡಿಎಂಪಿ ತೈಲದ ಬಾಟಲ್‌ ವಿತರಿಸಲಾಗಿತ್ತು. 593 ಕೆಜಿ ಮೆಲೆಥಿಯನ್‌ ಸಂಗ್ರಹಿಸಲಾಗಿತ್ತು. 50 ಸಾವಿರ ಲಸಿಕಾ ಕಾರ್ಡ್‌ ಸಿದ್ಧಗೊಳಿಸಲಾಗಿತ್ತು. 7,138 ಕೊಟ್ಟಿಗೆಗಳ ಉಣ್ಣಿ ನಾಶಮಾಡಲಾಯಿತು. 54,457 ಜಾನುವಾರುಗಳಿಗೆ ತಗಲಿದ ಉಣ್ಣಿಗಳನ್ನು ನಿವಾರಿಸಲಾಯಿತು.

ಜೊತೆಯಲ್ಲಿ 1,17,087 ಡೋಸ್‌ ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿತ್ತು, ಸಾಕಷ್ಟು ಪ್ರಚಾರ ಮಾಡಿದ್ದರೂ ಜನ ಮುಂದೆ ಬರದ ಕಾರಣ 49,140 ಡೋಸ್‌ ಲಸಿಕೆ ವಿತರಣೆಯಾಯಿತು. ಮುಂದಿನ ವರ್ಷವಾದರೂ ಮಂಗನ ಕಾಯಿಲೆ ಸಂಭವನೀಯ ಪ್ರದೇಶದ ಎಲ್ಲ ಜನ ಲಸಿಕೆ ಪಡೆಯುವಂತೆ ಮನವೊಲಿಸಬೇಕಾಗಿದೆ.

ಮುಂದಿನ ವರ್ಷಕ್ಕಾಗಿ ಈಗಲೇ ಯೋಜನೆ ರೂಪಿಸುತ್ತಿದ್ದು, ಉಣ್ಣಿ ನಿವಾರಣೆ ಕಾರ್ಯಕ್ರಮ ಆರಂಭವಾಗಲಿದೆ. ಆಗಸ್ಟ್‌ನಿಂದ ಲಸಿಕೆ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾಯಿಲೆಯ ಮೇಲೆ ಶೇ. 100ರಷ್ಟು ಗೆಲುವು ಸಾಧಿಸಬಹುದಾಗಿದೆ. – ಡಾ| ಸತೀಶ ಶೇಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next