Advertisement

ಸಾಗರ ತಾಲೂಕಿನಲ್ಲಿ ಮತ್ತೆ ಮೂವರಿಗೆ ಜ್ವರ

12:35 AM Jan 12, 2019 | |

ಸಾಗರ: ಮಲೆನಾಡಿನ ಜನರನ್ನು ಕಂಗಾಲಾಗಿಸಿದ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಲೇ ಇದ್ದು, ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ಮೂವರು ಜ್ವರಕ್ಕೆ ತುತ್ತಾಗಿದ್ದಾರೆ. ಅಲ್ಲದೆ ಹಲವೆಡೆ ಮೃತ ಮಂಗಗಳೂ ಪತ್ತೆಯಾಗಿವೆ.

Advertisement

ಶುಕ್ರವಾರ ಒಟ್ಟು  ನಾಲ್ಕು ಮಂದಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಳಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ಜ್ವರದ ಪ್ರಕರಣ ದಾಖಲಾಗಿದೆ. ಮುಂಜಾಗ್ರತೆ  ಕ್ರಮವಾಗಿ ದೀಪಾ ಮರಬಿಡಿ, ವಿಜಯಕುಮಾರ್‌ ಹಾಗೂ ಸುರೇಂದ್ರ ಅವರನ್ನು ಮಣಿಪಾಲ್‌ಗೆ ಕಳುಹಿಸಿಕೊಡಲಾಗಿದೆ. ಸಾಗರ ಆಸ್ಪತ್ರೆಯಿಂದ ಕೂಡ ಓರ್ವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನಿಸಲಾಗಿದೆ. ಈವರೆಗೆ 44 ಪ್ರಕರಣಗಳಲ್ಲಿ ಕೆಎಫ್‌ಡಿ ವೈರಸ್‌ ಇದ್ದಿರುವುದು ದೃಢಪಟ್ಟಿದ್ದು 9 ವರ್ಷದ ಪೂಜಾ ಎಂಬ ಬಾಲಕಿ ಹಾಗೂ ನಾಲ್ಕು ವರ್ಷದ ಸುಪ್ರೀತ್‌ ಎಂಬ ಬಾಲಕನಲ್ಲೂ ಕಾಯಿಲೆಯ ವೈರಸ್‌ ಪತ್ತೆಯಾಗಿವೆ ಎಂದು ಹೇಳಲಾಗಿದೆ. ಆದರೆ ಆರೋಗ್ಯ ಇಲಾಖೆ ಇದನ್ನು ದೃಢಪಡಿಸಿಲ್ಲ.

ಇನ್ನು ಮಂಗಗಳ ಸಾವು ಮುಂದುವರಿದಿದ್ದು, ಕೆಳದಿ ಹತ್ತಿರದ ಹಾರೆಗೊಪ್ಪದಲ್ಲಿನ ಸುಬ್ರಾಯ ಭಟ್‌ ಅವರ ಅಡಕೆ ತೋಟದಲ್ಲಿ ಶುಕ್ರವಾರ ಸತ್ತ ಮಂಗವೊಂದು ಕಂಡುಬಂದಿದೆ. ಪೋಸ್ಟ್‌ಮಾರ್ಟಂ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯ ವೀರಭದ್ರಪ್ಪ, ಸುರೇಶ್‌ ಜವಳಿ, ವೈದ್ಯರಾದ ಡಾ|ಉಮಾದೇವಿ, ಅರಣ್ಯ ಇಲಾಖೆಯ ಕಿರಣ್‌, ಶ್ರೀಧರ್‌ ಸಾಗರ್‌ ಇತರರ ಸಮ್ಮುಖದಲ್ಲಿ ಮಂಗನನ್ನು ಸುಡಲಾಯಿತು.

ಇದಲ್ಲದೆ ತಾಲೂಕಿನ ಕರೂರು ಮತ್ತು ಬ್ರಾಹ್ಮಣ ಮಂಚಾಲೆಯಲ್ಲಿ ತಲಾ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತುಮರಿ ಭಾಗದಲ್ಲಿ ಒಂದು ಮಂಗ ಅಸ್ವಸ್ಥ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಹೊಸನಗರ ತಾಲೂಕಿನ ಸೊನಲೆಯಲ್ಲಿ ಒಂದು ಮಂಗ ಮೃತಪಟ್ಟಿದೆ. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈವರೆಗೆ 22 ಮಂಗಗಳು ಮೃತಪಟ್ಟಿರುವ ದಾಖಲೆಯಿದ್ದು, ತಾಲೂಕಿನಲ್ಲಿ  ಒಂದು ತಿಂಗಳಿನಲ್ಲಿ ಸಾವನ್ನಪ್ಪಿದ ಮಂಗಗಳ ಸಂಖ್ಯೆ 40 ದಾಟಿದ್ದರೆ, ಹೊಸನಗರ ತಾಲೂಕಿನಲ್ಲಿ 18 ಮಂಗಗಳು ಮೃತಪಟ್ಟಿವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next