Advertisement
1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಗ್ರಾಮದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಇಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಗಡಿದಾಟಿ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡಿನ ಕೆಲ ಭಾಗಗಳಲ್ಲಿ ವ್ಯಾಪಿಸಿದೆ. ಈ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಿರುವ ಅಲ್ಲಿನ ಆರೋಗ್ಯ ಇಲಾಖೆಗಳಿಂದ ಲಸಿಕೆಗೆ ಸಾಕಷ್ಟು ಬೇಡಿಕೆ ಬಂದಿದೆ. ಇದು ಮಂಗನ ಕಾಯಿಲೆಗೆ ಲಸಿಕೆ ಸಿದ್ಧಪಡಿಸುವ ಏಕೈಕ ಸಂಸ್ಥೆಯಾದ ಬೆಂಗಳೂರಿನ ಹೆಬ್ಟಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಹೊರೆಯೂ, ಸವಾಲೂ ಆಗಿ ಪರಿಣಮಿಸಿದೆ.
ಸಾಲಿಗೆ 4.50 ಲಕ್ಷ ಲಸಿಕೆ ಬೇಡಿಕೆ ಇದ್ದು, ಸಂಸ್ಥೆಯ ಸಾಮರ್ಥ್ಯದಂತೆ ಮುಂಬರುವ ವರ್ಷಕ್ಕೆ ಬರೋಬ್ಬರಿ 2.5 ರಿಂದ 3 ಲಕ್ಷ ಲಸಿಕೆಗಳನ್ನಷ್ಟೇ ಉತ್ಪಾದಿಸಬಹುದು. ಉಳಿದ 1.5 ಲಕ್ಷ ಲಸಿಕೆಗಳು ಕೊರತೆಯಾಗುವ ಸಾಧ್ಯತೆಗಳಿವೆ. ಈ ಕೊರತೆ ನೀಗಿಸಲು ಪ್ರತ್ಯೇಕ ಸಂಶೋಧನಾ ಸಂಸ್ಥೆ ಹಾಗು ಸಿಬ್ಬಂದಿ ಅಗತ್ಯವಿದೆ.
Related Articles
Advertisement
ಲಸಿಕೆ ಸಿದ್ಧಪಡಿಸುವುದು ಹೇಗೆ?ಅಂಗಾಂಶ ಕೃಷಿ (ಟಿಶ್ಯೂ ಕಲ್ಚರ್) ಮೂಲಕ ಸಿದ್ಧಪಡಿಸುವ ಲಸಿಕೆ ಇದಾಗಿದ್ದು, ಮೊದಲು ಕೋಳಿ ಮೊಟ್ಟೆಯಲ್ಲಿ ಬೆಳವಣಿಗೆ ಹೊಂದುತ್ತಿರುವ ಮರಿಗೆ ವೈರಸ್ ಹಾಕಿ 1.5 ತಿಂಗಳು ವೈರಸ್ ಬೆಳವಣಿಗೆ ಮಾಡಲಾಗುತ್ತದೆ. ಆನಂತರ ಕೋಳಿ ಮರಿಯಿಂದ ಅದನ್ನು ನಿಷ್ಕ್ರಿಯಗೊಳಿಸಿ ಲಸಿಕೆಯನ್ನು ಸಂಸ್ಕರಿಸಲಾಗುತ್ತದೆ. ಅಂತಿಮವಾಗಿ ಸಿದ್ಧವಾಗುವ ದ್ರಾವಣ ರೂಪದ ಲಸಿಕೆಯನ್ನು ಮಂಗದ ಮೇಲೆ ಪರಿವೀಕ್ಷಣೆ ಮಾಡಲಾಗುತ್ತದೆ. ಒಟ್ಟಾರೆ ಎರಡೂವರೆ ತಿಂಗಳ ಪ್ರಕ್ರಿಯೆ ಇದಾಗಿದ್ದು, ಒಂದು ಲಸಿಕೆ ತಯಾರಿಸಲು 35 ರೂ.ವೆಚ್ಚ ತಗಲುತ್ತದೆ ಎಂದು ವಿಜ್ಞಾನಿ ಡಾ.ಅಮಿತಾ ರೀನಾ ಗೋಮ್ಸ್ ಮಾಹಿತಿ ನೀಡಿದರು.