Advertisement

ಮಂಗನ ಕಾಯಿಲೆ ಕಾಟಕ್ಕೆ ಕದಂಬೋತ್ಸವ ಮುಂದೂಡಿಕೆ

01:38 AM Feb 03, 2019 | |

  ಶಿರಸಿ: ಬನವಾಸಿ ಭಾಗದಲ್ಲೂ ಮಂಗನ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕದಂಬೋತ್ಸವ ಮುಂದೂಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದಂಬೋತ್ಸವ ಸಂಭ್ರಮದಲ್ಲಿ ನಡೆಯಬೇಕು. ಆದರೆ, ಮಂಗಗಳು ಆ ಭಾಗದಲ್ಲೂ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ ಮರು ಪರಿಶೀಲನೆಗೆ ಒತ್ತಾಯಗಳು ಕೇಳಿ ಬಂದಿವೆ. ಈಗಾಗಲೇ ಸಿಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಆಗಮಿಸಲು ಮನವಿ ಮಾಡಲಾಗಿತ್ತು. ಆದರೆ, ಈಗಿನ ಸಂಗತಿಯನ್ನೂ ಸಚಿವರ ಗಮನಕ್ಕೆ ತರುತ್ತೇವೆ. ಒಂದೊಮ್ಮೆ ಮುಂದೆ ಹಾಕಿದರೂ ನಂತರ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಈಗಾಗಲೇ 66 ಮಂಗಗಳು ಮೃತ ಪಟ್ಟಿವೆ. ಅವುಗಳಲ್ಲಿ ನಾಲ್ಕಕ್ಕೆ ವೈರಾಣು ಪತ್ತೆಯಾಗಿದೆ. ಮೂವರಿಗೆ ಮಾತ್ರ ಈ ರೋಗ ಕಾಣಿಸಿಕೊಂಡಿದೆ. ಫೆ.10 ರೊಳಗೆ 27 ಸಾವಿರ ವ್ಯಾಕ್ಸಿನೇಶನ್‌ ಬರಲಿದೆ. ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ತೆಗೆದುಕೊಂಡಿದೆ. ಯಾರೂ ಭಯ ಪಡುವುದು ಬೇಡ ಎಂದರು. ಲೋಕಸಭಾ ಚುನಾ ವಣೆಗೆ ಪಕ್ಷದ ವರಿಷ್ಠರು ಸೂಚನೆ ನೀಡುತ್ತಾರೆ. ಯಾರ್ಯಾರು ಅಭ್ಯರ್ಥಿಗಳು ಎಂಬುದನ್ನು ಅವರೇ ತೀರ್ಮಾನಗೊಳಿಸುತ್ತಾರೆ. ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಪ್ರತಿಪಕ್ಷದ ಒಳ ಹೊಡೆತಕ್ಕೆ ನಮ್ಮವರು ಬಗ್ಗುವುದಿಲ್ಲ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಭದ್ರವಾಗಿದೆ. ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ಹಣಕಾಸಿನ ತೊಂದರೆ ಆಗಿಲ್ಲ. 10 ಕೋಟಿ ರೂ.ಗಳಲ್ಲಿ ಬಾಕಿ ಇರುವ ಎರಡು ಕೋಟಿ ರೂ. ಬಿಡುಗಡೆಗೆ ಸೂಚನೆ ನೀಡಿದ್ದೇವೆ. ಒಮ್ಮೆ ಆಗದೇ ಇದ್ದರೂ ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಶಂಕಿತ ಮಂಗನ ಕಾಯಿಲೆಗೆ ವ್ಯಕ್ತಿ ಬಲಿ

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನರ ಜೀವ ಹಿಂಡಿದ್ದ ಮಂಗನಕಾಯಿಲೆ ಈಗ ತೀರ್ಥಹಳ್ಳಿ ಭಾಗಕ್ಕೆ ವ್ಯಾಪಿಸಿದೆ. ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದು ಮಂಗನಕಾಯಿಲೆ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಈ ಕಾಯಿಲೆಗೆ ಜಿಲ್ಲೆಯಲ್ಲಿ ಒಟ್ಟೂ 9 ಮಂದಿ ಮೃತಪಟ್ಟಂತಾಗಿದೆ. ಮಂಡಗದ್ದೆ ಸಮೀಪದ ಸಿಂಗನಬಿದರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೋಟದಕೊಪ್ಪದ ಲಚ್ಚ ಪೂಜಾರಿ (75) ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು 5 ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರವಲ್ಲದೆ ಬೇರೆ, ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದ ಇವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇವರ ರಕ್ತ ಪರೀಕ್ಷೆ ನಡೆಸಿದಾಗ ಮಂಗನ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ವಿವಿಧ ಕಾಯಿಲೆ ಹಾಗೂ ಕೆಎಫ್‌ಡಿ ಸೋಂಕಿಗೂ ಒಳಗಾಗಿದ್ದ ಪೂಜಾರಿ, ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ. ಆರೋಗ್ಯ ಇಲಾಖೆ ಇವರ ರಕ್ತದ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಇನ್ನು, ತೀರ್ಥಹಳ್ಳಿ ತಾಲೂಕಿನ ಹಲವು ಭಾಗದಲ್ಲಿ ಮಂಗನ ಕಾಯಿಲೆ ಹರಡುತ್ತಿದ್ದು, ಜನ ಆತಂಕಗೊಂಡಿದ್ದಾರೆ. ಈವರೆಗೆ ಒಟ್ಟೂ 16 ಮಂದಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾ ಗುತ್ತಿದೆ. ಶುಕ್ರವಾರ ಮೃತಪಟ್ಟಿರುವ ಲಚ್ಚ ಪೂಜಾರಿಯವರ ಮೊಮ್ಮಕ್ಕಳೂ ಸಹ ಜ್ವರಕ್ಕೆ ತುತ್ತಾಗಿದ್ದಾರೆ. ತಾಲೂಕಿನಲ್ಲಿ ಈವರೆಗೆ 52ಕ್ಕೂ ಹೆಚ್ಚು ಮಂಗಗಳು ಮೃತಪಟ್ಟಿವೆ.

ವಿದೇಶಿ ಮಹಿಳೆಗೂ ಮಂಗನ ಕಾಯಿಲೆ

ಉಡುಪಿ: ಫ್ರಾನ್ಸ್‌ನ ಮಹಿಳೆಯೋರ್ವಳು ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ. 33 ವರ್ಷದ ಈಕೆ ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಾಣ, ಗೋಕರ್ಣ ಮೊದಲಾದೆಡೆಗೆ ಪ್ರವಾಸಕ್ಕೆ ಬಂದಿದ್ದರು. ನಂತರ ಜ್ವರ ಕಾಣಿಸಿಕೊಂಡು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬಳಿಕ ಕೆಎಂಸಿಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next